ಜಿಲ್ಲೆ

‘ನೈಸ್’ಗೆ ಪ್ರತಿಷ್ಠಿತ ಟೈಮ್ಸ್ ನಿರ್ಮಾಣ ಪ್ರಶಸ್ತಿ

ಬೆಂಗಳೂರು: ನಂದಿ ಇನ್ಪ್ರಾಸ್ಟ್ರಕ್ಚರ್ ಕಾರಿಡಾರ್ ಎಂಟ್‌ಪ್ರೈಸಸ್ ಲಿ.ನ (ನೈಸ್) ಭಾರತದಲ್ಲಿ ಅತ್ಯುತ್ತಮ ಕಾಂಕ್ರೀಟ್ ರಸ್ತೆಯ ನಿರ್ಮಾಣ ಹಾಗೂ ನಿರ್ವಹಣೆಗಾಗಿ ಪ್ರತಿಷ್ಠಿತ ‘ಕನ್‌ಸ್ಟ್ರಕ್ಷನ್ ಟೈಮ್ಸ್ ಪ್ರಶಸ್ತಿ - 2024’ ಪಡೆದುಕೊಂಡಿದೆ.

ಇತ್ತೀಚಿಗೆ ಗ್ರೇಟರ್ ನೋಯ್ದದಲ್ಲಿ ಆಯೋಜಿಸಿದ್ದ ಬೌಮಾ ಕೊನೆಕ್ಸ್‌ಪೊ ಇಂಡಿಯಾ-2024 ಸಮಾರಂಭದಲ್ಲಿ ಕನ್‌ಸ್ಟ್ರಕ್ಷನ್ ಟೈಮ್ಸ್‌ನ ಮುಖ್ಯ ಸಂಪಾದಕ ರಾಮಮೂರ್ತಿ ಅವರು ನೈಸ್ ಕಂಪನಿಯ ಸಿಎಫ್​ಒ ಅಶೋಕ್ ಶೆಟ್ಟಿ ಹಾಗೂ ಯೋಜನಾ ನಿರ್ದೇಶಕ ಡಿ.ಪ್ರಸಾದ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಹೊಸೂರು ರಸ್ತೆಯಿಂದ ತುಮಕೂರು ರಸ್ತೆಯವರೆಗಿನ 41 ಕಿ.ಮೀ. ಉದ್ದದ ಪೆರಿಫೆರಲ್ ರಸ್ತೆಯನ್ನು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನು ಬಳಸಿ ದೀರ್ಘಾವಧಿ ಬಾಳಿಕೆ ಬರುವಂತೆ ನಿರ್ಮಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನೈಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ, ಪೆರಿಫೆರಲ್ ರಸ್ತೆಯನ್ನು ಕಾಂಕ್ರೀಟ್ ಮಾರ್ಗವಾಗಿ (ರಿಜಿಡ್ ಪೇವ್ಮೆಂಟ್) ನಿರ್ಮಿಸಿ ನಿರ್ವಹಿಸಿರುವುದಕ್ಕೆ ಪ್ರಶಸ್ತಿ ಸಂದಿರುವುದು ಖುಷಿಯ ವಿಚಾರವಾಗಿದೆ. ಮುಂದೆಯೂ ಇನ್ನಷ್ಟು ಗುಣಮಟ್ಟದ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಮಗೆ ಪ್ರೇರಣೆ ನೀಡಿದೆ ಎಂದು ತಿಳಿಸಿದ್ದಾರೆ.