ಜಿಲ್ಲೆ

ವಿಧಾನ ಪರಿಷತ್ ಚುನಾವಣೆ: ಪ್ರತಿಷ್ಠೆಯ ಕಣ, ಗೆಲುವಿಗೆ ಕೈ-ಕಮಲ ಪಣ

Webdesk - Ravikanth

ಕಲಬುರಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಒಡ್ಡಿದ ಪೈಪೋಟಿ ನಡುವೆ ಬಿಜೆಪಿಯ ಡಾ.ಬಿ.ಜಿ. ಪಾಟೀಲ್ ಮತ್ತೊಮ್ಮೆ ಗೆದ್ದು ಎರಡನೇ ಬಾರಿಗೆ ಮೇಲ್ಮನೆಗೆ ಎಂಟ್ರಿ ಕೊಟ್ಟ ಜಿಲ್ಲೆಯ ಮೊದಲಿಗ ಎಂಬ ದಾಖಲೆ ಬರೆಯುವ ತವಕದಲ್ಲಿದ್ದಾರೆ. ಬೀದರ್ ಕ್ಷೇತ್ರದಲ್ಲಿ ಬೀಗ ಸಂಬಂಧಿಗಳಾದ ಬಿಜೆಪಿಯ ಪ್ರಕಾಶ ಖಂಡ್ರೆ, ಕಾಂಗ್ರೆಸ್​ನ ಭೀಮರಾವ ಪಾಟೀಲ್ ನಡುವಿನ ಫೈಟ್ ಕದನ ಕುತೂಹಲ ಕೆರಳಿಸಿದೆ.

ದಾಖಲೆಯತ್ತ ಬಿ.ಜಿ. ಪಾಟೀಲ್; ಟಕ್ಕರ್ ನೀಡಲು ಶಿವಾನಂದ ಯತ್ನ

ಕಲಬುರಗಿ- ಯಾದಗಿರಿ ಕ್ಷೇತ್ರ

| ಸ.ದಾ. ಜೋಶಿ ಕಲಬುರಗಿ

ಕಲಬುರಗಿ-ಯಾದಗಿರಿ ಕ್ಷೇತ್ರದಿಂದ ಪುನರಾಯ್ಕೆ ಬಯಸಿ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಡಾ. ಬಿ.ಜಿ.ಪಾಟೀಲ್ ಮತ್ತೊಮ್ಮೆ ಭರ್ಜರಿ ಜಯ ಗಳಿಸುವ ಮೂಲಕ ದಾಖಲೆ ಬರೆಯುವ ತವಕದಲ್ಲಿದ್ದಾರೆ. ಕ್ಷೇತ್ರದಿಂದ ಎರಡನೇ ಸಲ ಮೇಲ್ಮನೆಗೆ ಯಾರೂ ಪ್ರೇವೆಶಿಸಿಲ್ಲ. ಹೀಗಾಗಿ ಗೆದ್ದು ಹೊಸ ದಾಖಲೆ ನಿರ್ವಿುಸಲು ಪಾಟೀಲ್ ಬೆನ್ನಿಗೆ ಕೇಸರಿಪಡೆ ನಿಂತರೆ, ಆಡಳಿತಾರೂಢರಿಗೆ ಟಕ್ಕರ್ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಮರತೂರ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.

ಜೆಡಿಎಸ್ ಕಣದಿಂದ ಹಿಂದೆ ಸರಿದ ಕಾರಣ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಡಾ.ಬಿ.ಜಿ. ಪಾಟೀಲ್ ಕಳೆದ ಸಲ ಮೊದಲ ಬಾರಿ ಪರಿಷತ್ ಅಖಾಡಕ್ಕೆ ಧುಮುಕಿ ಭರ್ಜರಿ ಜಯ ಗಳಿಸಿದ್ದರು. ಪಾಟೀಲ್ 3,845 ಮತ ಗಳಿಸಿ ಹಾಲಿ ಪರಿಷತ್ ಸದಸ್ಯರಿದ್ದ ಕಾಂಗ್ರೆಸ್​ನ ಅಲ್ಲಮಪ್ರಭು ಪಾಟೀಲ್ ಅವರನ್ನು 804 ಮತಗಳಿಂದ ಸೋಲಿಸಿದ್ದರು. ತಮ್ಮ ಅವಧಿಯಲ್ಲಿ ಕಲಬುರಗಿ-ಯಾದಗಿರಿ ಜಿಲ್ಲೆಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುವುದರ ಜತೆಗೆ ನೆಟ್​ವರ್ಕ್ ಸಹ ಬಲಪಡಿಸಿಕೊಂಡಿದ್ದಾರೆ. ಈ ಭಾಗದ ಖ್ಯಾತ ಉದ್ಯಮಿಯೂ ಆಗಿರುವ ಬಿ.ಜಿ.ಪಾಟೀಲ್, ಸಾಮಾಜೋಧಾರ್ವಿುಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಜತೆಗೆ ಉದಾರ ದೇಣಿಗೆ ನೀಡುವ ಸರಳ ವ್ಯಕ್ತಿಯೂ ಹೌದು. ವಿವಾದ ಮತ್ತು ಕಳಂಕರಹಿತ ವ್ಯಕ್ತಿತ್ವ ಪ್ಲಸ್ ಪಾಯಿಂಟ್ ಆಗಿದ್ದು, ಭಾರಿ ಬಹುಮತದಿಂದ ಈ ಸಲವೂ ಜಯ ಪಕ್ಕಾ ಎಂಬ ಉಮೇದಿನಲ್ಲಿ ಬಿಜೆಪಿ ಟೀಮ್ ಕೆಲಸ ಮಾಡುತ್ತಿದೆ. ಬಿ.ಜಿ.ಪಾಟೀಲ್ ಎದುರು ಸಮರ್ಥರನ್ನು ನಿಲ್ಲಿಸುವುದೇ ಕಾಂಗ್ರೆಸ್​ಗೆ ತಲೆನೋವಾಗಿತ್ತು. ಕೈ ಪಡೆ ವರಿಷ್ಠರು ಎರಡು ದಶಕಗಳಿಂದ ಪಕ್ಷದಲ್ಲಿ ಸಕ್ರಿಯ ದುಡಿಯುತ್ತಿರುವ, ಮಲ್ಲಿಕಾರ್ಜುನ ಖರ್ಗೆ ಆಪ್ತ ವಲಯದಲ್ಲಿರುವ ಶಿವಾನಂದ ಪಾಟೀಲ್ ಅವರನ್ನು ನಿಲ್ಲಿಸಿದೆ. ಸಾಮಾನ್ಯ ಕಾರ್ಯಕರ್ತನಿಗೂ ಟಿಕೆಟ್ ನೀಡಲಾಗುತ್ತದೆ ಎಂಬ ಸಂದೇಶವನ್ನು ಈ ಮೂಲಕ ಕೈ ಕಮಾಂಡ್ ರವಾನಿಸಿದೆ. ಶಿವಾನಂದ ಒಮ್ಮೆ ಜಿಲ್ಲಾ ಪಂಚಾಯಿತಿ ಸದಸ್ಯ, ವಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದಾರೆ. ಸರಳ ವ್ಯಕ್ತಿತ್ವದ ಇವರು ವರಿಷ್ಠರ ಆದೇಶದಂತೆ ಅಖಾಡದಲ್ಲಿದ್ದು, ಗೆಲ್ಲೋ ತಂತ್ರ ಹೆಣೆಯುತ್ತಿದ್ದಾರೆ. ಆದರೆ ಮೇಲ್ನೋಟಕ್ಕೆ ಬಿಜೆಪಿ ಪ್ರಬಲವಿರುವುದು ಕೈ ನಾಯಕರ ಚಿಂತೆ ಹೆಚ್ಚಿಸಿದೆ. 1986ರಲ್ಲಿ ಕ್ಷೇತ್ರದಿಂದ ಜನತಾ ಪಕ್ಷದ ಬಿ.ಆರ್.ಪಾಟೀಲ್ ಗೆದ್ದರು. 1997ರಲ್ಲಿ ಕಾಂಗ್ರೆಸ್​ನ ಚೆನ್ನಾರೆಡ್ಡಿ, 2003ರಲ್ಲಿ ಅಮಾತೆಪ್ಪ ಕಂದಕೂರ, 2009ರಲ್ಲಿ ಅಲ್ಲಮಪ್ರಭು ಪಾಟೀಲ್ ಗೆದಿದ್ದಾರೆ. ಯಾರಿಗೂ ಮತ್ತೊಮ್ಮೆ ಮೇಲ್ಮನೆ ಎಂಟ್ರಿ ಸಿಕ್ಕಿಲ್ಲ. 2015ರಲ್ಲಿ ಬಿಜೆಪಿಯಿಂದ ಗೆದ್ದ ಡಾ.ಬಿ.ಜಿ.ಪಾಟೀಲ್ ಈಗ ಮತ್ತೆ ಜಯ ದಾಖಲಿಸಲು ಪ್ರತಿತಂತ್ರ ರೂಪಿಸುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಕೂಡ್ಲಿ ಕಣದಲ್ಲಿದ್ದರೂ ಸ್ಪರ್ಧೆಗುಂಟು ಲೆಕ್ಕಕ್ಕಿಲ್ಲದಾಗಿದೆ.
ಡಾ.ಬಿ.ಜಿ. ಪಾಟೀಲ್, ಶಿವಾನಂದ ಪಾಟೀಲ್

ಕೇಸರಿ ಪಡೆಗೆ ಹೆಚ್ಚು ಬಲ: ಹಿಂದಿನ ಚುನಾವಣೆಗೆ ಹೋಲಿಸಿದ್ದಲ್ಲಿ ಕಲಬುರಗಿ-ಯಾದಗಿರಿ ಕ್ಷೇತ್ರದಲ್ಲಿ ಇದೀಗ ಬಿಜೆಪಿ ಸಂಘಟನೆ ಬಲಿಷ್ಠವಾಗಿದೆ. 378 ಗ್ರಾಮ ಪಂಚಾಯಿತಿಗಳಿದ್ದು, ಶೇ.50ಕ್ಕೂ ಹೆಚ್ಚು ಸದಸ್ಯರು ಕೇಸರಿ ಪಡೆ ಬೆಂಬಲಿತರಿದ್ದಾರೆ. 13 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ 7, ಕಾಂಗ್ರೆಸ್ 5 ಮತ್ತು ಒಬ್ಬರು ಜೆಡಿಎಸ್ ಶಾಸಕರಿದ್ದಾರೆ. ಲೋಕಸಭಾ ಸದಸ್ಯರ ಜತೆಗೆ ಮೂವರು ಎಂಎಲ್ಸಿ ಸಹ ಬಿಜೆಪಿಯವರೇ ಇದ್ದಾರೆ. ಕಾಂಗ್ರೆಸ್​ನ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಸದಸ್ಯರಿದ್ದಾರೆ. ಮಾಜಿ ಸಿಎಂ ಧರ್ಮಸಿಂಗ್, ಅಲ್ಪಸಂಖ್ಯಾತ ಪ್ರಬಲ ನಾಯಕ ಖಮರುಲ್ ಇಸ್ಲಾಂ ಅಗಲಿಕೆ ನಂತರದ ಮೊದಲ ಚುನಾವಣೆ ಇದಾಗಿದ್ದು, ಕೈ ಶಕ್ತಿ ಕುಗ್ಗಿಸಿದೆ.

ಕಳೆದ ಚುನಾವಣೆ ಫಲಿತಾಂಶ

  • ಡಾ.ಬಿ.ಜಿ.ಪಾಟೀಲ್ (ಬಿಜೆಪಿ)-3845 ಗೆಲುವು
  • ಅಲ್ಲಮಪ್ರಭು ಪಾಟೀಲ್ (ಕಾಂಗ್ರೆಸ್) - 3041

ಬೀಗರ ಫೈಟ್​ನಲ್ಲಿ ಗೆಲ್ಲೋರ್ಯಾರು?; ಕುತೂಹಲ ಕೆರಳಿಸಿದ ಅಖಾಡ

ಬೀದರ್ ಕ್ಷೇತ್ರ

| ರೇವಣಸಿದ್ದಪ್ಪ ಪಾಟೀಲ್ ಬೀದರ್

ಬೀದರ್ ಅಖಾಡದಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಕುಸ್ತಿ ಬಿದ್ದಿದೆ. ಬಿಜೆಪಿಯಿಂದ ಭಾಲ್ಕಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಹಾಗೂ ಕಾಂಗ್ರೆಸ್​ನಿಂದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರೂ ಆದ ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ್ ಸಹೋದರ ಭೀಮರಾವ ಪಾಟೀಲ್ ಸ್ಪರ್ಧಿಸಿದ್ದಾರೆ. ಇವರಿಬ್ಬರೂ ಬೀಗ ಸಂಬಂಧಿಗಳು. ಹೀಗಾಗಿ ಬೀಗರ ಫೈಟ್​ನಲ್ಲಿ ಗೆಲ್ಲೋರ್ಯಾರು ಎಂಬುದು ಕದನ ಕುತೂಹಲ ಹೆಚ್ಚಿಸಿದೆ. ಕ್ಷೇತ್ರದಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಪಾರುಪತ್ಯ ಮೆರೆದಿದೆ. ಈವರೆಗೆ ನಡೆದ 8 ಚುನಾವಣೆಗಳಲ್ಲಿ 6 ಸಲ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ, ತಲಾ ಒಮ್ಮೆ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ.

ದಿ.ಬಸವರಾಜ ಪಾಟೀಲ್ ಹುಮನಾಬಾದ್ ಮೂರು ಬಾರಿ (ಎರಡು ಸಲ ಕಾಂಗ್ರೆಸ್, ಒಮ್ಮೆ ಬಿಜೆಪಿ), ನರೇಂದ್ರ ಖೇಣಿ ಎರಡು ಬಾರಿ (ಒಮ್ಮೆ ಪಕ್ಷೇತರ, ಒಮ್ಮೆ ಕಾಂಗ್ರೆಸ್) ಮತ್ತು ಸಿದ್ದಪ್ಪ ಖೇಳಗಿ, ಭೀಮಣ್ಣ ಖಂಡ್ರೆ ಹಾಗೂ ಹಾಲಿ ಸದಸ್ಯ ವಿಜಯಸಿಂಗ್ (ಮೂವರೂ ಕಾಂಗ್ರೆಸ್) ತಲಾ ಒಮ್ಮೆ ಗೆಲುವಿನ ನಗೆ ಬೀರಿದ್ದಾರೆ. ಈಗ ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್ ಪಡೆ ಕಸರತ್ತು ನಡೆಸಿದರೆ, ಹೇಗಾದರೂ ಮಾಡಿ ಗೆಲುವು ಸಾಧಿಸಿ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿಸಬೇಕೆಂದು ಆಡಳಿತಾರೂಢರು ತಂತ್ರ ಹೆಣೆಯುತ್ತಿದ್ದಾರೆ. ಇಬ್ಬರೂ ಬಲಿಷ್ಠ ಅಭ್ಯರ್ಥಿ ಆಗಿರುವುದರಿಂದ ಜಿದ್ದಿನ ಹಣಾಹಣಿ ಏರ್ಪಟ್ಟಿದೆ. ಪ್ರಕಾಶ ಖಂಡ್ರೆ ಮತ್ತು ಭೀಮರಾವ ಪಾಟೀಲ್ ಹೆಸರು ಆರಂಭದಿಂದಲೂ ಚರ್ಚೆಯಲ್ಲಿದ್ದವು. ಆದರೆ ಹತ್ತಿರದ ಸಂಬಂಧಿಗಳಾದ ಕಾರಣಕ್ಕೆ ಇಬ್ಬರಲ್ಲಿ ಒಬ್ಬರು ಅಖಾಡಕ್ಕೆ ಧುಮುಕಬಹುದು ಎಂದು ವ್ಯಾಖ್ಯಾನಿಸಲಾಗುತ್ತಿತ್ತು. ಅಂತಿಮವಾಗಿ ಇಬ್ಬರೂ ಕಣಕ್ಕಿಳಿದ ಕಾರಣ ಅಖಾಡ ರಂಗೇರಿದೆ. ಈ ಬಾರಿ ಜೆಡಿಎಸ್ ಅಭ್ಯರ್ಥಿ ನಿಲ್ಲಿಸಿಲ್ಲ. ಆಮ್ ಆದ್ಮಿ ಪಕ್ಷದಿಂದ ಗೋವಿಂದರಾವ ಸೋಮವಂಶಿ ಕಣದಲ್ಲಿದ್ದರೂ ಲೆಕ್ಕಕ್ಕಿಲ್ಲ. ಹೀಗಾಗಿ ಬೀಗರು ಗೆಲ್ಲುವುದಕ್ಕಾಗಿ ಇನ್ನಿಲ್ಲದ ಕಸರತ್ತು, ಕರಾಮತ್ತು ನಡೆಸಿ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಭೀಮರಾವ ಮೊದಲ ಬಾರಿ ಚುನಾವಣೆಗಿಳಿದಿದ್ದಾರೆ. ಆದರೆ ಇವರ ಪರಿವಾರ ರಾಜಕೀಯವಾಗಿ ಬಲಿಷ್ಠವಾಗಿದೆ. ಒಬ್ಬ ಸಹೋದರ ರಾಜಶೇಖರ ಪಾಟೀಲ್ ಶಾಸಕರಿದ್ದರೆ, ಇನ್ನೊಬ್ಬ ಡಾ.ಚಂದ್ರಶೇಖರ ಪಾಟೀಲ್ ಈಶಾನ್ಯ ಪದವೀಧರ ಕ್ಷೇತ್ರದ ಎಂಎಲ್ಸಿ. ಇದೀಗ ಪಕ್ಷ ಭೀಮರಾವ ಅವರನ್ನು ನಿಲ್ಲಿಸಿದೆ. ಒಂದೇ ಮನೆಯಲ್ಲಿ ಮೂರು ಟಿಕೆಟ್ ಕೊಟ್ಟಿದ್ದು ಅಚ್ಚರಿ ಮೂಡಿಸಿದೆ. ಪ್ರಕಾಶ ಖಂಡ್ರೆ ಹಿಂದೆ 6 ಸಲ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದು, ಎರಡು ಬಾರಿ ಗೆದ್ದಿದ್ದಾರೆ. ಮೊದಲ ಬಾರಿ ಮೇಲ್ಮನೆ ಅಖಾಡದಲ್ಲಿದ್ದಾರೆ. ಅನಾರೋಗ್ಯದ ಕಾರಣ ಪುನರ್ಜನ್ಮ ಪಡೆದ ಖಂಡ್ರೆ, ಈಗ ರಾಜಕೀಯ ಪುನರ್ಜನ್ಮಕ್ಕಾಗಿ ಮತದಾರರ ಮೊರೆ ಹೋಗಿದ್ದಾರೆ. ಚುನಾವಣೆ, ರಾಜಕೀಯದಲ್ಲಿ ಸಂಬಂಧಗಳಿಗೆ ಬೆಲೆಯಿಲ್ಲ ಎಂಬುದಕ್ಕೆ ಬೀದರ್ ಮೇಲ್ಮನೆ ಕಣವೇ ನಿದರ್ಶನ.

ಸಚಿವ, ಶಾಸಕರಿಗೆ ಪ್ರತಿಷ್ಠೆ: ಬಿಜೆಪಿ ಸಚಿವರು ಮತ್ತು ಕಾಂಗ್ರೆಸ್ ಶಾಸಕರಿಗೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಖಂಡ್ರೆ ಗೆಲುವಿಗಾಗಿ ಫುಲ್ ಬ್ಯಾಟಿಂಗ್ ನಡೆಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಭಾಲ್ಕಿ ಶಾಸಕ ಈಶ್ವರ ಖಂಡ್ರೆ, ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ್ ಕಾಂಗ್ರೆಸ್ ಜಯಕ್ಕೆ ಕಸರತ್ತು ನಡೆಸುತ್ತಿದ್ದಾರೆ. ಕ್ಷೇತ್ರದ 6 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 3, ಬಿಜೆಪಿ 2 ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ನಿರ್ಣಾಯಕ ಗ್ರಾಪಂ ಸದಸ್ಯರಲ್ಲಿ ಬಿಜೆಪಿ-ಕಾಂಗ್ರೆಸ್ ಸಮಬಲದಲ್ಲಿದ್ದು, ಯಾರೇ ಗೆದ್ದರೂ ಅಂತರ ತೀರ ಕಮ್ಮಿ ಎಂಬ ಮಾತುಗಳು ಕೇಳಿಬರುತ್ತಿವೆ.

ದಳಪತಿಗಳ ನಡೆ ಇನ್ನೂ ನಿಗೂಢ: ಕಲಬುರಗಿ ಹಾಗೂ ಬೀದರ್ ಕಣದಿಂದ ಜೆಡಿಎಸ್ ದೂರ ಉಳಿದಿದೆ. ಬೀದರ್ ದಕ್ಷಿಣ, ಯಾದಗಿರಿ ಜಿಲ್ಲೆ ಗುರುಮಠಕಲ್​ನಲ್ಲಿ ಮಾತ್ರ ಜೆಡಿಎಸ್ ಶಾಸಕರಿದ್ದಾರೆ. ಇದನ್ನು ಬಿಟ್ಟರೆ ಉಳಿದೆಡೆ ಪಕ್ಷದ ಸಂಘಟನೆ ಅಷ್ಟಕ್ಕಷ್ಟೆ. ತನ್ನ ಅಭ್ಯರ್ಥಿ ನಿಲ್ಲಿಸದಿರುವುದಕ್ಕೆ ಚುನಾವಣೆಯಲ್ಲಿ ಈ ಪಕ್ಷದೊಂದಿಗೆ ಗುರುತಿಸಿಕೊಂಡ ಮತದಾರರು ಯಾರಿಗೆ ಸಾಥ್ ನೀಡುತ್ತಾರೆ ಎಂಬುದು ನಿಗೂಢವಾಗಿದೆ. ಹೀಗಾಗಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಬೀದರ್​ನಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ ಹಾಗೂ ಗುರುಮಠಕಲ್​ನಲ್ಲಿ ಶಾಸಕ ನಾಗನಗೌಡ ಕಂದಕೂರ ಮತ್ತು ಅವರ ಪುತ್ರ ಶರಣಗೌಡ ಮನವೊಲಿಕೆಯಲ್ಲಿ ತೊಡಗಿದ್ದಾರೆ.

ಕಳೆದ ಚುನಾವಣೆ ಫಲಿತಾಂಶ

  • ವಿಜಯಸಿಂಗ್ (ಕಾಂಗ್ರೆಸ್) 2329 (ಜಯ)
  • ಸಂಜಯ ಖೇಣಿ (ಬಿಜೆಪಿ) 959 
  • ಸುಬ್ಬಾರೆಡ್ಡಿ (ಜೆಡಿಎಸ್) 30