ಜಿಲ್ಲೆ

ಬೀದಿ ಬದಿ ವ್ಯಾಪಾರಿಗಳ ಸ್ಥಳಾಂತರಕ್ಕೆ ಪ್ರತಿಷ್ಠೆ ಅಡ್ಡಿ

ಮಡಿಕೇರಿ:

ಮಡಿಕೇರಿಯಲ್ಲಿ ರಾಜಾ ಸೀಟ್ ಬಳಿ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ನಗರಸಭೆ ವತಿಯಿಂದ ಬದಲಿ ವ್ಯವಸ್ಥೆ ಮಾಡಲಾಗಿದೆ. ಆದರೆ ರಾಜಾಸೀಟ್ ಬಳಿಯೇ ರೂಢಿ ಆಗಿರುವ ಬೀದಿ ಬದಿ ವ್ಯಾಪಾರಿಗಳು ಅಲ್ಲಿಗೆ ಹೋಗಲು ಒಪ್ಪುತ್ತಿಲ್ಲ. ಸ್ಥಳಾಂತರ ವಿ?ಯದಲ್ಲಿ ಆಡಳಿತ ಪಕ್ಷ ಒಗ್ಗಟ್ಟು ಪ್ರದರ್ಶಿಸಿದರೆ, ಪ್ರತಿಪಕ್ಷ ಎಸ್‌ಡಿಪಿಐ ಬೀದಿ ಬದಿ ವ್ಯಾಪಾರಿಗಳ ಪರ ನಿಂತಿದೆ. ಎರಡೂ ಬಣಗಳ ಮಧ್ಯೆ ಪ್ರತಿ?್ಠೆಗೆ ಕಾರಣವಾಗಿರುವ ನಗರಸಭೆಯ ಈ ತೀರ್ಮಾನವನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ.

ರಾಜಾಸೀಟ್ ಬಳಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರಿಂದ ಸಮಸ್ಯೆ ಆಗುತ್ತಿತ್ತು. ಅವರವರೇ ಹೊಡೆದಾಡಿಕೊಳ್ಳುತ್ತಿದ್ದರು. ಸ್ವಚ್ಛತೆ ಕಾಪಾಡುತ್ತಿರಲಿಲ್ಲ. ಪ್ರವಾಸಿಗರಿಂದ ದುಬಾರಿ ದರ ವಸೂಲಿ ಮಾಡಲಾಗುತ್ತಿತ್ತು ಹೀಗೆ ಹಲವು ಆರೋಪಗಳು ಇಲ್ಲಿನ ಬೀದಿ ಬದಿ ವ್ಯಾಪಾರಿಗಳ ಮೇಲಿದೆ. ರಸ್ತೆಯಲ್ಲೇ ವ್ಯಾಪಾರ ಮಾಡುವುದರಿಂದ ಈ ಭಾಗದಲ್ಲಿ ಸಂಚಾರ ವ್ಯವಸ್ಥೆಗೆ ತೊಂದರೆ ಆಗುತ್ತದೆ. ಖಾಸಗಿ ಬಸ್‌ಗಳು ಈ ರಸ್ತೆಯಲ್ಲಿ ಸಂಚರಿಸುವುದರಿಂದ ಅವುಗಳ ಓಡಾಟಕ್ಕೂ ತೊಂದರೆ. ಹಾಗಾಗಿ ಇಲ್ಲಿಂದ ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸಿ ಎನ್ನುವ ಸೂಚನೆ ಪೊಲೀಸ್ ಇಲಾಖೆಯಿಂದಲೂ ಬಂದಿತ್ತು.

ಇತ್ತೀಚೆಗೆ ನಡೆದಿದ್ದ ರಾಜಾಸೀಟ್ ಅಭಿವೃದ್ಧಿ ಸಮಿತಿ ಸಭೆಯಲ್ಲೂ ಈ ವಿಷಯ ಚರ್ಚೆಗೆ ಬಂದು ಬೀದಿ ಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿಸುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಈ ಹಿಂದಿನ ಡಿಸಿ ಇದ್ದಾಗಲೂ ತೋಟಗಾರಿಗೆ ಇಲಾಖೆಗೆ ಸೇರಿದ ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು ಅಲ್ಲಿಂದ ತೆರವು ಮಾಡಿಸಿದ್ದರು. ನಂತರ ಅಲ್ಲಿದ್ದವರು ಸುತ್ತಮುತ್ತಲಿನ ಜಾಗದಲ್ಲಿ ರಸ್ತೆ ಬದಿಯಲ್ಲೇ ವ್ಯಾಪಾರಕ್ಕೆ ಇಳಿದಿದ್ದರು. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸುವ ನಿರ್ಧಾರವನ್ನು ನಗರಸಭೆ ತೆಗೆದುಕೊಂಡಿದೆ.

ನಗರಸಭೆ ತೀರ್ಮಾನಕ್ಕೆ ಬೀದಿ ಬದಿ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಗರಸಭೆ ನಿಗದಿಪಡಿಸಿರುವ ಜಾಗದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲ. ಜನಸಂಚಾರ ಇಲ್ಲದ ಕಡೆಯಲ್ಲಿ ಜಾಗ ಗುರುತಿಸಲಾಗಿದೆ. ಹಳೆಯ ಖಾಸಗಿ ಬಸ್ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಲು ರಸ್ತೆ ಬದಿಯ ಕಾಲುವೆ ಪಕ್ಕದ ಜಾಗ ಅವೈಜ್ಞಾನಿಕವಾಗಿದೆ. ಕೊಳಚೆ ನೀರು ಹರಿಯುವ ಈ ಜಾಗದಲ್ಲಿ ಆಹಾರ ಪದಾರ್ಥಗಳನ್ನು ಮಾರುವುದು ಹೇಗೆ ಎನ್ನುವುದು ಇವರ ಪ್ರಶ್ನೆ. ಬೀದಿ ಬದಿ ವ್ಯಾಪಾರಿಗಳ ಬೆಂಬಲಕ್ಕೆ ನಿಂತಿರುವ ನಗರಸಭೆಯಲ್ಲಿನ ವಿರೋಧ ಪಕ್ಷ ಎಸ್‌ಡಿಪಿಐ ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದೆ. ನಗರಸಭೆ ಆಡಳಿತಮಂಡಳಿ ಅವಧಿ ಮುಗಿಯುತ್ತಾ ಬಂದಿದ್ದು, ಈತನಕ ಯಾವುದೇ ಹೇಳಿಕೊಳ್ಳುವಂಥ ಸಾಧನೆ ಮಾಡಿಲ್ಲ. ಈಗ ಬಡವರ ಮೇಲೆ ತಮ್ಮ ಪ್ರಹಾರ ನಡೆಸಿ ಇದನ್ನೇ ತಮ್ಮ ಸಾಧನೆ ಎಂದು ಬಿಂಬಿಸಲು ಹೊರಟಿದ್ದಾರೆ ಎನ್ನುವುದು ಎಸ್‌ಡಿಪಿಐ ಆರೋಪ.
ಒಂದು ವೇಳೆ ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸಲೇಬೇಕು ಎಂದಿದ್ದರೆ ರಾಜಾಸೀಟ್ ಬಳಿಯಲ್ಲೇ ವ್ಯವಸ್ಥೆ ಮಾಡಿ ಕೊಡಲಿ. ಕೂರ್ಗ್ ವಿಲೇಜ್ ಅಥವಾ ಅದರ ಸುತ್ತಲಿನ ಪ್ರದೇಶ ಇದಕ್ಕೆ ಸೂಕ್ತವಾಗಿದೆ. ಇಲ್ಲಿ ವ್ಯವಸ್ಥೆ ಕಲ್ಪಿಸಲಿ ಎನ್ನುವ ಸಲಹೆಯನ್ನೂ ಎಸ್‌ಡಿಪಿಐ ಮುಖಂಡರು ಕೊಟ್ಟಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ವಿಜಯವಾಣಿ ಓದುಗರ ಅಭಿಪ್ರಾಯ ಇಲ್ಲಿದೆ.

ರಾಜಾಸೀಟ್ ಬಳಿ ಬೀದಿ ಬದಿ ವ್ಯಾಪಾರಿಗಳಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿತ್ತು. ಅವರವರೇ ಹೊಡೆದಾಡಿಕೊಂಡು ಸಮಸ್ಯೆ ಸೃಷ್ಟಿಸಿದ್ದರು. ಹಾಗಾಗಿ ಹಿಂದಿನ ಡಿಸಿ ಅವರನ್ನೆಲ್ಲಾ ತೆರವು ಮಾಡಿಸಿದ್ದರು. ಪುನಃ ಅವರು ರಸ್ತೆ ಬದಿಯಲ್ಲೇ ವ್ಯಾಪಾರ ಮುಂದುವರಿಸಿದ್ದರು. ಇದರಿಂದ ಅಲ್ಲಿ ಬಸ್ ಸೇರಿ ವಾಹನಗಳ ಓಡಾಟಕ್ಕೆ ತೊಂದರೆ ಆಗುತ್ತಿತ್ತು. ಅಲ್ಲಿಂದ ಅವರನ್ನು ತೆರವು ಮಾಡಿಸಲು ಪೊಲೀಸ್ ಸೂಚನೆಯೂ ಇತ್ತು. ರಾಜಾಸೀಟ್ ಅಭಿವೃದ್ಧಿ ಸಭೆಯಲ್ಲೂ ತೀರ್ಮಾನ ಆಗಿತ್ತು.
ಅನಿತಾ ಪೂವಯ್ಯ, ಅಧ್ಯಕ್ಷೆ, ನಗರಸಭೆ, ಮಡಿಕೇರಿ

ನಮಗೆ ಸ್ಥಳೀಯರಿಂದ ವ್ಯಾಪಾರ ಹೆಚ್ಚು. ಪ್ರವಾಸಿಗರು ನಮ್ಮ ಗ್ರಾಹಕರಲ್ಲ. ಬೀದಿ ಬದಿ ವ್ಯಾಪಾರಕ್ಕೆ ನಗರಸಭೆ ನಿಗದಿ ಮಾಡಿರುವ ಖಾಸಗಿ ಬಸ್ ನಿಲ್ದಾಣದ ಪಕ್ಕದ ಜಾಗದಲ್ಲಿ ಜನ ಸಂಚಾರ ಕಡಿಮೆ ಇದೆ. ಹಾಗಾಗಿ ಆ ಸ್ಥಳ ವ್ಯಾಪಾರಕ್ಕೆ ಸೂಕ್ತ ಅಲ್ಲ ಎನ್ನುವ ಕಾರಣಕ್ಕೆ ನಾವು ಆ ಸ್ಥಳ ತಿರಸ್ಕರಿಸಿದ್ದೇವೆ. ಸೂಕ್ತ ವ್ಯವಸ್ಥೆ ಇಲ್ಲದ ಕಡೆ ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ. ನಗರ ಸಭೆ ಸೂಕ್ತ ಜಾಗ ತೋರಿಸಿ ನಂತರ ನಮ್ಮನ್ನು ತೆರವು ಮಾಡಬೇಕು.
ಅಯೂಬ್, ಅಧ್ಯಕ್ಷ, ಬೀದಿ ಬದಿ ವ್ಯಾಪಾರಿಗಳ ಸಂಘ

ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ನಗರಸಭೆ ಆಯುಕ್ತರು, ನಗರಸಭೆ ಆಡಳಿತ ಮಂಡಳಿ ಮತ್ತು ಬೀದಿ ಬದಿ ವ್ಯಾಪಾರಿಗಳ ಸಂಘಟನೆ ಪ್ರತಿನಿಧಿಗಳ ಜತೆಗೆ ಚರ್ಚೆ ನಡೆಸಲಾಗುವುದು. ನಂತರ ನಿಯಮದ ಪ್ರಕಾರ ಎಲ್ಲಿ ವ್ಯಾಪಾರ ನಡೆಸಬೇಕು ಎನ್ನುವ ನಿರ್ಧಾರಕ್ಕೆ ಬರಲಾಗುವುದು. ನಗರಸಭೆ ಗುರುತಿಸಿರುವ ಜಾಗದಲ್ಲಿ ಮೊದಲು ಮೂಲಭೂತ ಸೌಕರ್ಯ ಕಲ್ಪಿಸಬೇಕು.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ

ಬೀದಿ ಬದಿ ವ್ಯಾಪಾರಿಗಳಿಗೆ ಈಗಾಗಲೇ ಬದಲಿ ಸ್ಥಳ ಗುರುತಿಸಲಾಗಿದೆ. ಅಲ್ಲಿ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗುವುದು. ಪೊಲೀಸ್ ಇಲಾಖೆ ಆಕ್ಷೇಪ ಮತ್ತು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ರಾಜಾಸೀಟ್ ಬಳಿ ವ್ಯಾಪಾರಕ್ಕೆ ಅವಕಾಶ ಇಲ್ಲ. ಜಿಲ್ಲಾಧಿಕಾರಿ ಜತೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
ವಿಜಯ್, ಪೌರಾಯುಕ್ತ, ನಗರಸಭೆ, ಮಡಿಕೇರಿ

ಕಳೆದ ೩೦ ನವರ್ಷಗಳಿಂದ ಇಲ್ಲಿ ಬೀದಿ ವ್ಯಾಪಾರಿಗಳು ಇಲ್ಲಿ ತಮ್ಮ ವ್ಯವಹಾರ ಮಾಡುತ್ತಿದ್ದಾರೆ. ಆಗ ಇಲ್ಲದ ಸಮಸ್ಯೆ ಈಗ ಹೇಗೆ ಬಂತು ? ಇದು ವ್ಯಯಕ್ತಿಕ ದ್ವೇಷ ಅಷ್ಟೇ. ಕೆಲ ದಿನಗಳ ಹಿಂದೆ ಅಲ್ಲಿಯ ಕೌನ್ಸಿಲರ್ ಮತ್ತು ಕೆಲವು ವ್ಯಾಪಾರಿಗಳ ಮಧ್ಯೆ ಸಮಸ್ಯೆ ಕಾಣಿಸಿಕೊಂಡಿತ್ತು. ಅದೇ ವಿಷಯದ ಮುಂದುವರಿದ ಭಾಗ ಇದು. ಒಂದು ವೇಳೆ ಸ್ಥಳಾಂತರ ಮಾಡಲೇಬೇಕು ಎಂದಿದ್ದರೆ ಅಲ್ಲಿಯೇ ಅಕ್ಕಪಕ್ಕದಲ್ಲಿ ಕೂರ್ಗ್ ವಿಲೇಜ್ ಅಥವಾ ರಾಜಾಸೀಟ್ ಸಮೀಪದಲ್ಲೇ ಜಾಗ ಕೊಡಲಿ. ಬಡವರ ಮೇಲೆ ಇಂಥ ಪ್ರಹಾರ ಸರಿಯಲ್ಲ.
ಅಮೀನ್ ಮೊಹಿಸಿನ್, ನಗರಸಭೆ ಸದಸ್ಯ, ಮಡಿಕೇರಿ

ಕಳೆದ ೩೦ ನವರ್ಷಗಳಿಂದ ಇಲ್ಲಿ ಬೀದಿ ವ್ಯಾಪಾರಿಗಳು ಇಲ್ಲಿ ತಮ್ಮ ವ್ಯವಹಾರ ಮಾಡುತ್ತಿದ್ದಾರೆ. ಆಗ ಇಲ್ಲದ ಸಮಸ್ಯೆ ಈಗ ಹೇಗೆ ಬಂತು ? ಇದು ವ್ಯಯಕ್ತಿಕ ದ್ವೇಷ ಅಷ್ಟೇ. ಕೆಲ ದಿನಗಳ ಹಿಂದೆ ಅಲ್ಲಿಯ ಕೌನ್ಸಿಲರ್ ಮತ್ತು ಕೆಲವು ವ್ಯಾಪಾರಿಗಳ ಮಧ್ಯೆ ಸಮಸ್ಯೆ ಕಾಣಿಸಿಕೊಂಡಿತ್ತು. ಅದೇ ವಿಷಯದ ಮುಂದುವರಿದ ಭಾಗ ಇದು. ಒಂದು ವೇಳೆ ಸ್ಥಳಾಂತರ ಮಾಡಲೇಬೇಕು ಎಂದಿದ್ದರೆ ಅಲ್ಲಿಯೇ ಅಕ್ಕಪಕ್ಕದಲ್ಲಿ ಕೂರ್ಗ್ ವಿಲೇಜ್ ಅಥವಾ ರಾಜಾಸೀಟ್ ಸಮೀಪದಲ್ಲೇ ಜಾಗ ಕೊಡಲಿ. ಬಡವರ ಮೇಲೆ ಇಂಥ ಪ್ರಹಾರ ಸರಿಯಲ್ಲ.
ಅಮೀನ್ ಮೊಹಿಸಿನ್, ನಗರಸಭೆ ಸದಸ್ಯ, ಮಡಿಕೇರಿ

ಮಡಿಕೇರಿಯ ಹೆಸರಾಂತ ಪ್ರವಾಸಿ ತಾಣ ರಾಜಸೀಟು ರಸ್ತೆ ಕಿರಿದಾಗಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಬೀದಿ ಬದಿಯ ವ್ಯಾಪಾರಿಗಳ ಸ್ಥಳಾಂತರ ಅತ್ಯಗತ್ಯ. ಜತೆಗೆ ಅವರಿಗೂ ಅನ್ಯಾಯ ಆಗದ ರೀತಿಯಲ್ಲಿ ಸೂಕ್ತ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಅವರ ವ್ಯಾಪಾರಕ್ಕೆ ಜಿಲ್ಲಾಡಳಿತ ಸೂಕ್ತವಾದ ಸ್ಥಳ ಒದಗಿಸಬೇಕು.
ಉಮೇಶ್‌ಕುಮಾರ್, ಮಡಿಕೇರಿ ನಿವಾಸಿ

ಆರ್ಥಿಕ ಸಬಲೀಕರಣ ಎಂದು ಹೇಳುವ ನಾವು ಕುಟುಂಬದ ಹೊಣೆಗಾರಿಕೆಗಾಗಿ ಉದ್ಯೋಗ ಅರಸಿ ಜೀವನ ಮಾಡುತ್ತಿರುವವರ ಪಾಲಿಗೆ ಆಶಾಕಿರಣವಾಗಬೇಕು. ಅದನ್ನು ಹೊರತುಪಡಿಸಿ ಅವರ ಪುಟ್ಟ ಪುಟ್ಟ ಉದ್ಯೋಗಕ್ಕೆ ಅಡ್ಡಿಪಡಿಸಿದಾಗ ಜೀವನ ಅವರಿಗೆ ಒಂದೊಮ್ಮೆಲೇ ದುಸ್ತರ ಎನಿಸಲಾರದೇ ಎಂಬ ಪ್ರಶ್ನೆ ಈ ಬೆಳವಣಿಗೆ ಗಮನಿಸಿದಾಗ ನನಗೆ ಕಾಡಿತು.
ಗೀತಾ ಗಿರೀಶ್, ಅಧ್ಯಕ್ಷೆ, ರೋಟರಿ, ಮಡಿಕೇರಿ

ಬೀದಿ ಬದಿ ವ್ಯಾಪಾರಿಗಳಿಗೆ ಹೆಚ್ಚು ಜನ ಸಂಚಾರ ಇರುವ ಜಾಗದಲ್ಲೇ ಬದಲಿ ಸ್ಥಳ ಗುರುತಿಸಲಾಗಿದೆ. ಅವರಿಗೆ ಇಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು. ರಾಜಾಸೀಟ್‌ನಲ್ಲಿ ವ್ಯಾಪಾರಕ್ಕೆ, ಟ್ರಾಫಿಕ್ ಪೊಲೀಸ್, ಬಸ್ ಮಾಲೀಕರು, ವಾಹನ ಮಾಲೀಕರ ವಿರೋಧ ಇದೆ. ಅಲ್ಲಿ ಸುರಕ್ಷತೆಯ ನಿಯಮಾವಳಿಗಳನ್ನು ಮೀರಿ ಆಹಾರ ಪದಾರ್ಥ ತಯಾರಿಸುವ ಬಗ್ಗೆಯೂ ದೂರುಗಳಿದ್ದವು.
ಸತೀಶ್, ಸ್ಥಾಯಿ ಸಮಿತಿ ಅಧ್ಯಕ್ಷ, ನಗರಸಭೆ, ಮಡಿಕೇರಿ

ರಾಜಾಸೀಟ್ ಬಳಿಯ ಬೀದಿ ವ್ಯಾಪಾರಿಗಳನ್ನು ತೆರವು ಮಾಡುವ ಕಾರ್ಯ ಉತ್ತಮವಾಗಿದೆ. ಅವರುಗಳು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವುದರಿಂದ ರಸ್ತೆ ಟ್ರಾಫಿಕ್ ಜಾಮ್ ಆಗುತ್ತಿದು ಈ ಭಾಗದಲ್ಲಿ ಬಸ್‌ಗಳು ಸಂಚರಿಸಲು ತೊಂದರೆ ಉಂಟಾಗುತ್ತಿದೆ. ವಯಸ್ಕರು ಮತ್ತು ಶಾಲಾ ಮಕ್ಕಳಿಗೆ ಈ ರಸ್ತೆಯಲ್ಲಿ ಬೀದಿಯಲ್ಲಿ ನಡೆದಾಡಲು ತೊಂದರೆಯಾಗುತ್ತಿದೆ. ಇವರುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿ, ವ್ಯಾಪಾರಕ್ಕೆ ಶಾಶ್ವತ ಪರಿಹಾರ ಕಲ್ಪಿಸುವುದು ಒಳಿತು.
ರವಿ ಗೌಡ, ಅಧ್ಯಕ್ಷ, ಕೊಡಗು ರಕ್ಷಣಾ ವೇದಿಕೆ