ಹುಬ್ಬಳ್ಳಿ: ಉಳಿಕೆ 1814 ಚಾಲಕ ಕಂ ನಿರ್ವಾಹಕ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಒತ್ತಡ ಹೇರಲಾಗುವುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜು ಕಾಗೆ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಆರ್ಥಿಕ ಇಲಾಖೆ ಅನುಮೋದನೆ ಮೇರೆಗೆ ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಇನ್ನುಳಿದ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಿಲ್ಲ. ಈಗಾಗಲೇ ಉದ್ಯೋಗಾಂಕ್ಷಿಗಳು ನನ್ನ ಗಮನಕ್ಕೆ ತಂದಿದ್ದಾರೆ. ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಉಳಿಕೆ ಹುದ್ದೆ ಭರ್ತಿಗೆ ಒತ್ತಡ ಹಾಕಲಾಗುವುದು ಎಂದರು.
ಇನ್ನೂ 700 ಬಸ್ ಬಂದರೆ ಚಾಲಕ ಮತ್ತು ನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಬೇಕು. ಶಕ್ತಿ ಯೋಜನೆಯಡಿ 670 ಕೋಟಿ ರೂ. ಸೇರಿ ಒಟ್ಟು 2100 ಕೋಟಿ ರೂ. ರಾಜ್ಯ ಸರ್ಕಾರದಿಂದ ಸಂಸ್ಥೆಗೆ ಬರಬೇಕು. ಈ ಕುರಿತು ಪದೇ ಪದೆ ಸರ್ಕಾರದ ಗಮನ ಸೆಳೆಯಲಾಗಿದೆ. ಹಣದ ಕೊರತೆಯಿಂದ ಸಂಸ್ಥೆ ನಿರ್ವಹಣೆ ಕಷ್ಟವಾಗಿದೆ. ಮತ್ತೊಮ್ಮೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಬಾಕಿ ಮೊತ್ತ ಬಿಡುಗಡೆಗೆ ಒತ್ತಾಯಿಸಲಾಗುವುದು ಎಂದರು.
ನಮ್ಮ ಸಂಸ್ಥೆಗೆ ರಾಣಿ ಚನ್ನಮ್ಮ ಹೆಸರಿಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕಿತ್ತೂರ ಕರ್ನಾಟಕವೆಂದು ನಾಮಕರಣ ಮಾಡಿದರೆ, ಕೆಕೆಆರ್‌ಟಿಸಿ ಆಗುತ್ತದೆ. ಬರುವ ಅನುದಾನ ಬೇರೆ ಕಡೆ ಹೋದರೆ ಸಮಸ್ಯೆ ಆಗಬಹುದು. ಅದಕ್ಕೆ ರಾಣಿ ಚನ್ನಮ್ಮ ಹೆಸರಿಡುವಂತೆ ಕೋರಿದ್ದೇವೆ. ಇದಕ್ಕೆ ಇದುವರೆಗೂ ಯಾರೂ ತಕರಾರು ಮಾಡಿಲ್ಲ ಎಂದರು.
ಮನವಿ ಸಲ್ಲಿಕೆ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಈಗಾಗಲೇ ಆದೇಶ ಹೊರಡಿಸಿದಂತೆ 2814 ಹುದ್ದೆಗೆ ನೇಮಕಾತಿ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಸಂಸ್ಥೆ ಅಧ್ಯಕ್ಷ ರಾಜು ಕಾಗೆ ಅವರಿಗೆ ನೊಂದ ಅಭ್ಯರ್ಥಿಗಳು ಬುಧವಾರ ಮನವಿ ಸಲ್ಲಿಸಿದರು.
ಉಪಾಧ್ಯಕ್ಷ ಪೀರಸಾಬ್ ಕೌತಾಳ, ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ., ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಸುಭಾಷಸಿಂಗ್ ಜಮಾದಾರ, ಪ್ರಮುಖರಾದ ಮಂಜುನಾಥ ಮಲಶೆಟ್ಟಿ, ಜಿ.ಎನ್. ಮಾಲತೇಶ, ಖಲಂದರ ಹುಬ್ಬಳ್ಳಿ, ಪ್ರಸಾದ ಕರನಂದಿ ಇತರರಿದ್ದರು.