ಜಿಲ್ಲೆ

ಸ್ಥಳೀಯ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಒತ್ತಡ

Haveri

ಹಾನಗಲ್ಲ: ಹಾನಗಲ್ಲ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಥಳೀಯರನ್ನೇ ಅಭ್ಯರ್ಥಿಯನ್ನಾಗಿ ಘೊಷಿಸಬೇಕು ಎಂದು ಪಕ್ಷದ ಹೈಕಮಾಂಡ್​ಗೆ ಒತ್ತಾಯಿಸಲಾಗಿದೆ ಎಂದು ಮಾಜಿ ಸಚಿವ ಮನೋಹರ ತಹಸೀಲ್ದಾರ್ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಮುಖಂಡರ ನಿಯೋಗ ಇತ್ತೀಚೆಗೆ ಬೆಂಗಳೂರಿಗೆ ತೆರಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರಾದ ಸಲಿಂ ಅಹ್ಮದ್, ಧ್ರುವ ನಾರಾಯಣ, ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ, ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ. ಕಳೆದ ಬಾರಿ ಬೇರೆ ಕ್ಷೇತ್ರದಿಂದ ಬಂದವರನ್ನು ಕಣಕ್ಕಿಳಿಸಲಾಗಿತ್ತು. ಅದು ಈಗ ಮತ್ತೆ ಮರುಕಳಿಸಬಾರದು. ಇದರಿಂದ ಹಲವು ದಶಕಗಳಿಂದ ಪಕ್ಷಕ್ಕಾಗಿ ದುಡಿದವರಿಗೆ ಅನ್ಯಾಯವಾಗುತ್ತದೆ ಎಂದರು.

ಹುಬ್ಬಳ್ಳಿಯಲ್ಲಿ ಸಂಕಲ್ಪ ಸಮಾವೇಶದಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ಬಿಟ್ಟು ಬೇರೆಯವರಿಗೆ ಅವಕಾಶ ನೀಡಿದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂದು ಸತೀಶ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದೇ ಅಭಿಪ್ರಾಯಕ್ಕೆ ಹೈಕಮಾಂಡ್ ಬದ್ಧರಾಗಿ ತೀರ್ಮಾನ ಕೈಗೊಳ್ಳುವಂತೆ ನಮ್ಮ ಹಕ್ಕೊತ್ತಾಯ ಮಂಡಿಸಿದ್ದೇವೆ. ಸ್ಥಳೀಯರು ಯಾರಾದರೂ ಸರಿ, ಹೊರಗಿನವರನ್ನು ನಮ್ಮ ಕ್ಷೇತ್ರಕ್ಕೆ ಹೇರಿಕೆ ಮಾಡಬಾರದು ಎಂಬ ಒಂದಂಶದ ಬೇಡಿಕೆಯನ್ನು ಹೈಕಮಾಂಡ್ ಮುಂದಿಟ್ಟಿದ್ದೇವೆ. ಇದಕ್ಕೆ ಹೈಕಮಾಂಡ್​ನ ಎಲ್ಲ ಮುಖಂಡರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ತಾಲೂಕಿನಲ್ಲಿ ಪಕ್ಷ ಸಂಘಟನೆ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಮನೋಹರ ತಹಸೀಲ್ದಾರ್ ತಿಳಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಮಾತನಾಡಿ, ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಭಿನ್ನಾಭಿಪ್ರಾಯಗಳಿದ್ದಲ್ಲಿ ಅವುಗಳನ್ನು ರ್ಚಚಿಸಿ, ಪರಿಹರಿಸಿ ನಂತರ ಅಭ್ಯರ್ಥಿ ಘೊಷಿಸಲಾಗುವುದು. ಅಭ್ಯರ್ಥಿ ಆಯ್ಕೆ ಬಗ್ಗೆ ಸರಿಯಾದ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೈಕಮಾಂಡ್ ಭರವಸೆ ನೀಡಿದೆ. ಸ್ಥಳೀಯರಿಗೆ ಅವಕಾಶ ನೀಡುವ ವಿಚಾರದಲ್ಲಿ ನಮ್ಮಲ್ಲಿ ಗೊಂದಲವಿಲ್ಲ. ಆದರೆ, ಹೊರಗಿನವರನ್ನು ಅಭ್ಯರ್ಥಿಯನ್ನಾಗಿಸಿದರೆ ಯಾವುದೇ ರಾಜಿಗೆ ನಾವು ಒಪ್ಪುವುದಿಲ್ಲ. ಗುರುವಾರ ಪಕ್ಷದ ಕಾರ್ಯಾಲಯದಲ್ಲಿ ಪುರಸಭೆ ಸದಸ್ಯ ನಜೀರಅಹ್ಮದ್ ಸವಣೂರ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ವಸ್ತುಸ್ಥಿತಿ ಮನವರಿಕೆ ಮಾಡಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಿವಯೋಗಿ ಹಿರೇಮಠ, ನಜೀರಅಹ್ಮದ್ ಸವಣೂರ, ಮುತ್ತಣ್ಣ ನಾಸಿಕ, ನಾಗಪ್ಪ ಸವದತ್ತಿ, ಕೆ.ಟಿ. ಕಲಗೌಡ್ರ, ಹನುಮಂತಪ್ಪ ಕಲ್ಲೇರ, ಕೆ.ಎಲ್. ದೇಶಪಾಂಡೆ, ರವೀಂದ್ರ ಚಿಕ್ಕೇರಿ, ಸುರೇಶ ದೊಡ್ಡಕುರುಬರ, ಅಣ್ಣಪ್ಪ ಚಾಕಾಪುರ, ಗಿರೀಶಗೌಡ ಪಾಟೀಲ, ಬಶೀರಸಾಬ ಪಠಾಣ, ಶಂಕ್ರಣ್ಣ ಪ್ಯಾಟಿ, ಮೈಲಾರಪ್ಪ ಕಬ್ಬೂರ, ರಾಘವೇಂದ್ರ ಕರಿಯಪ್ಪನವರ, ಮಾಲತೇಶ ಸುಂಕದ ಇತರರಿದ್ದರು.

ತಾಲೂಕಿನ ಅಭಿವೃದ್ಧಿಗಾಗಿ ಸ್ಥಳೀಯ ಅಭ್ಯರ್ಥಿ ಬೆಂಬಲಿಸುವ ಅಗತ್ಯತೆ ಕುರಿತು ಪ್ರತಿ ಗ್ರಾಮಗಳಿಗೂ ತೆರಳಿ ಸಭೆ ನಡೆಸಿ ತಿಳಿಸಲಾಗುವುದು. ಆದಾಗ್ಯೂ ಹೈಕಮಾಂಡ್ ಸ್ಥಳೀಯ ಮುಖಂಡರ ತೀರ್ವನಕ್ಕೆ ವ್ಯತಿರಿಕ್ತವಾಗಿ ಬೇರೆ ತಾಲೂಕಿನ ಅಭ್ಯರ್ಥಿ ಘೊಷಿಸಿದಲ್ಲಿ ಅದರ ವಿರುದ್ಧ ಹೋರಾಟ ಸಮಿತಿ ರಚಿಸುವುದು ಮತ್ತು ನಮ್ಮ ಹಕ್ಕಿಗಾಗಿ ಹೋರಾಡಲು ರೂಪುರೇಷೆಗಳ ಬಗ್ಗೆಯೂ ರ್ಚಚಿಸಲಿದ್ದೇವೆ.| ಪ್ರಕಾಶಗೌಡ ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ