ಜಿಲ್ಲೆ

ನೀರಾವರಿ ಯೋಜನೆಯ ಸಭೆಯನ್ನು ನಡೆಸಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಮೇಲೆ ಒತ್ತಡ

ಚಿಕ್ಕಬಳ್ಳಾಪುರ: ಅವಿಭಜಿತ ಕೋಲಾರ ಜಿಲ್ಲೆಗೆ ಎತ್ತಿನಹೊಳೆ ಯೋಜನೆಯಡಿ ನೀರು ಹರಿಸಲು ಆದಷ್ಟು ಬೇಗ ಈ ಭಾಗದ ಜನಪ್ರತಿನಿಧಿಗಳನ್ನೊಳಗೊಂಡಂತೆ ಸಭೆಯನ್ನು ನಡೆಸಿ, ಚರ್ಚಿಸಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಗುಡಿಬಂಡೆ ಪಟ್ಟಣದಲ್ಲಿ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆಯು ಕೈಗೊಂಡಿದ್ದ ಭೂ ಸುರಕ್ಷಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಈ ಭಾಗದ ಜನರ ಋಣವು ಇದೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಭಾಗಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಒತ್ತು ನೀಡಬೇಕಾಗಿದೆ. ಇದರ ಭಾಗವಾಗಿ ಎತ್ತಿನ ಹೋಳೆ ಯೋಜನೆಯ ನೀರನ್ನು ಹರಿಸುವ ಕೆಲಸವಾಗಬೇಕಾಗಿದೆ. ಈಗಾಗಲೇ ಎಚ್.ಎನ್.ವ್ಯಾಲಿ ಯೋಜನೆಯಡಿ ಕೆರೆಗಳಿಗೆ ಸಂಸ್ಕರಿಸಿದ ನೀರು ಹರಿದಿದೆ. ಹಾಗೆಯೇ ಇನ್ನೂ ಎರಡು ವರ್ಷದಲ್ಲಿ ವೃಷಭಾವತಿ ಕಣಿವೆ ನೀರಾವರಿ ಯೋಜನೆಯು ಅನುಷ್ಠಾನಗೊಳ್ಳಲಿದೆ ಎಂದರು.

ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಮಾತನಾಡಿ, ಸರ್ಕಾರಿ ಜಮೀನುಗಳನ್ನು ಸಂರಸಲು ಸರ್ಕಾರವು ಲ್ಯಾಂಡ್ ಸೀಲಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇನ್ನು ಪೋಡಿ ಮುಕ್ತ ಅನುಷ್ಠಾನದಲ್ಲಿ, ಪಿ ನಂಬರ್ ಜಮೀನಿನ ದುರಸ್ತಿಯಲ್ಲಿ ಗುಡಿಬಂಡೆ ಅಗ್ರ ಸ್ಥಾನದಲ್ಲಿದೆ ಎಂದರು.

ಈ ಸಂದರ್ಭದಲ್ಲಿ ಕಂದಾಯ ಆಯುಕ್ತ ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿ.ಪಂ.ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಪೂಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಪ್ರಧಿಕಾರದ ಕೆ.ಎನ್.ಕೇಶವರೆಡ್ಡಿ, ಗುಡಿಬಂಡೆ ಪ.ಪಂ.ಅಧ್ಯಕ್ಷ ಎ.ವಿಕಾಸ್, ಉಪಾಧ್ಯಕ್ಷ ಗಂಗರಾಜು, ತಹಸೀಲ್ದಾರ್ ಸಿಗ್ಬತ್ ವುಲ್ಲಾ, ತಾ.ಪಂ.ಇಒ ಎಂ.ನಾಗಮಣಿ ಮತ್ತಿತರರು ಇದ್ದರು.

*18 ಕೋಟಿ ರೂ ವೆಚ್ಚದ ಯೋಜನೆ

ಅಮಾನಿ ಭೈರಸಾಗರ ಕೆರೆಯಿಂದ ಗುಡಿಬಂಡೆ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶಕ್ಕಾಗಿ ಅಮೃತ್ 2 ಯೋಜನೆಯಡಿ 18 ಕೋಟಿ ರೂ ಮಂಜೂರಾಗಿದೆ. ತ್ವರಿತವಾಗಿ ಕಾಮಗಾರಿಗೆ ಪ್ರಾರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ ಸುಧಾಕರ್ ತಿಳಿಸಿದರು.

ಕೈಗಾರಿಕೆಗಳನ್ನು ಸ್ಥಾಪಿಸಿ, ಈ ಭಾಗದ ವಿದ್ಯಾವಂತರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಈಗಾಗಲೇ ಬಾಗೇಪಲ್ಲಿ ತಾಲೂಕಿನಲ್ಲಿ 600 ಎಕರೆ ಜಮೀನು ಭೂ ಸ್ವಾಧಿನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಚಿಕ್ಕಬಳ್ಳಾಪುರ ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೂವಿನ ಮಾರುಕಟ್ಟೆಯನ್ನು 20 ಎಕರೆ ಜಾಗದಲ್ಲಿ 140 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.