ವಿಜಯವಾಣಿ ಸುದ್ದಿಜಾಲ ಉಡುಪಿ
ರೈತರು ಎದುರಿಸುತ್ತಿರುವ ಸಮಸ್ಯೆ ನಿವಾರಣೆ ಹಾಗೂ ಐದು ಪ್ರಮುಖ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ನೇತೃತ್ವದಲ್ಲಿ ಜೂ.26ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಮಲಾಕ್ಷ ಹೆಬ್ಬಾರ್ ಮಾಹಿತಿ ನೀಡಿದರು.
ಉಡುಪಿ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸದಾ ಕೃಷಿಯಲ್ಲಿ ತೊಡಗಿರುವ ರೈತರು, ಹೈನುಗಾರರಿಗೆ ಪ್ರತಿಭಟಿಸಲು ಸಮಯವಿಲ್ಲ. ಹೀಗಾಗಿ ಅವರ ಪರವಾಗಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪ್ರತಿಭಟಿಸಿ, ಅವರಿಗೆ ನ್ಯಾಯ ಕೊಡಿಸಲು ಮುಂದಾಗುತ್ತಿದೆ. ಎಮ್ಮೆ, ದನ, ಕೋಣಗಳೊಂದಿಗೆ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ತೈಲ ಬೆಲೆ ಏರಿಕೆಯಿಂದ ಟ್ರ್ಯಾಕ್ಟರ್, ನಾಟಿ ಯಂತ್ರ, ಕೊಯ್ಲು ಯಂತ್ರದ ಬಾಡಿಗೆ ಏರಿದ್ದು ತಕ್ಷಣ ಇಂಧನ ಬೆಲೆ ಇಳಿಸಬೇಕು. ಹಾಲಿಗೆ ಪ್ರೋತ್ಸಾಹ ಧನ 5 ರೂ. ಹೆಚ್ಚಿಸಬೇಕು. ಬಿತ್ತನೆ ಬೀಜ ಬೆಲೆ ಏರಿಕೆ ಆಗಿದ್ದು ಸಬ್ಸಿಡಿಯಲ್ಲಿ ಪೂರೈಕೆ ಮಾಡುವುದು. ಜಿಲ್ಲೆಯಲ್ಲಿ ಕೃಷಿ ಕಾಲೇಜು ಆರಂಭಿಸುವುದು. ರೈತರ ಬಗರ್ ಹುಕುಂ ಹಾಗೂ ಅಕ್ರಮ ಸಕ್ರಮ ಸಮಿತಿ ಮೂಲಕ ತಕ್ಷಣ ಶಾಶ್ವತ ಆದೇಶ ಪತ್ರ ನೀಡಬೇಕೆಂಬ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ್ ಕುಂದಾಪುರ, ದಿನಕರ್ ಶೆಟ್ಟಿ ಹೆರ್ಗ, ಜಿಲ್ಲಾ ರೈತ ಮೋರ್ಚಾ ಪ್ರ.ಕಾರ್ಯದರ್ಶಿ ಶ್ರೀಕಾಂತ್ ಕಾಮತ್, ಶ್ರೀನಿಧಿ ಹೆಗ್ಡೆ, ಶಿವಕುಮಾರ ಅಂಬಲಪಾಡಿ, ಉಪಾಧ್ಯಕ್ಷ ಪುಷ್ಪರಾಜ್, ಶ್ಯಾಮ್ ಪ್ರಸಾದ್ ಭಟ್, ಶೇಖರ್ ಕುಲಾಳ್, ಮಹೇಂದ್ರಕುಮಾರ್, ಆದರ್ಶ್ ಶೆಟ್ಟಿ, ಹರೀಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಇದ್ದರು.
ಜಿಲ್ಲೆಯಲ್ಲಿ 60 ಸಾವಿರ ಹೈನುಗಾರರಿದ್ದು, ಪ್ರತಿನಿತ್ಯ 3.92 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಈ ಮೊದಲು 5 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಹೈನುಗಾರಿಕೆಯಿಂದ ನಷ್ಟ ಆಗುತ್ತಿರುವುದರಿಂದ ಅನೇಕರು ಈ ವೃತ್ತಿಯಿಂದ ವಿಮುಖರಾಗುತ್ತಿದ್ದಾರೆ. ಸರ್ಕಾರ ಪ್ರತಿ ಲೀ. ಹಾಲಿಗೆ 5 ರೂ. ಪ್ರೋತ್ಸಾಹ ಧನ ನೀಡುತ್ತಿತ್ತು. ಆದರೆ, ರಾಜ್ಯದಲ್ಲಿ 2023 ಆಗಸ್ಟ್ನಿಂದ 2024ರ ಜೂನ್ವರೆಗೆ 8 ತಿಂಗಳ ಪ್ರೋತ್ಸಾಹ ಧನ 1,100 ಕೋಟಿ ರೂ. ಬಾಕಿ ಇದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಒಂದು ತಿಂಗಳ ಪ್ರೋತ್ಸಾಹ ಧನ ನೀಡಿದ್ದು, ಬಾಕಿ ಹಣವನ್ನು ಕೂಡಲೇ ನೀಡಬೇಕು. ಅಲ್ಲದೆ, ಲೀಟರ್ ಹಾಲಿಗೆ 10 ರೂ. ಪ್ರೋತ್ಸಾಹ ಧನ ನೀಡಬೇಕು ಎಂದು ಕಮಲಾಕ್ಷ ಹೆಬ್ಬಾರ್ ಆಗ್ರಹಿಸಿದರು.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಮಲಾಕ್ಷ ಹೆಬ್ಬಾರ್ ಮಾತನಾಡಿದರು. ಕಿಶೋರಕುಮಾರ್ ಕುಂದಾಪುರ, ದಿನಕರ್ ಶೆಟ್ಟಿ ಹೆರ್ಗ, ಜಿಲ್ಲಾ ರೈತ ಮೋರ್ಚಾ ಪ್ರ.ಕಾರ್ಯದರ್ಶಿ ಶ್ರೀಕಾಂತ್ ಕಾಮತ್ ಇದ್ದರು.