ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೋಟ ಶ್ರೀನಿವಾಸ ಪೂಜಾರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗೆಲುವಿನ ಪ್ರಮಾಣ ಪತ್ರ ಹಸ್ತಾಂತರಿಸಿದರು. ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಇತರರು ಇದ್ದರು. 
ಜಿಲ್ಲೆ

ಅನಿರೀಕ್ಷಿತವಾಗಿ ಎನ್​ಡಿಎ ಒಕ್ಕೂಟಕ್ಕೆ ಅಧಿಕಾರ

ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ | ಇಂಡಿ ಗ್ಯಾರಂಟಿ ಕಾರ್ಡ್​ನಿಂದ ಹಿನ್ನಡೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಎನ್​ಡಿಎ ಒಕ್ಕೂಟಕ್ಕೆ ನಿರೀಕ್ಷಿತ ಮಟ್ಟದ ಸ್ಥಾನಗಳು ಲಭ್ಯವಾಗಿಲ್ಲ. ಆದರೂ ಅನಿರೀಕ್ಷಿತವಾಗಿ ಎನ್​ಡಿಎ ಒಕ್ಕೂಟ ಅಧಿಕಾರದ ಚುಕ್ಕಾಣಿ ಹಿಡಿಯುವ ಸಂದರ್ಭ ಬರುತ್ತದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ವಿಜೇತ ಅಭ್ಯರ್ಥಿ ಕೋಟ ಶ್ರೀನಿವಾಸ್​ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.

ಭಾರಿ ಅಂತರಿಂದ ಗೆಲುವು ಸಾಧಿಸಿದ ಬಳಿಕ ಸೇಂಟ್​ ಸಿಸಿಲಿ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಕೇಂದ್ರದಲ್ಲಿ ಪುನಹ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬರಬೇಕು; ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಹಂಬಲದಿಂದ ಎರಡುವರೆ ಲಕ್ಷದಷ್ಟು ಅಧಿಕ ಮತದಿಂದ ಗೆಲ್ಲಿಸಿದ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳು ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಮುಂಭಾಗದಲ್ಲಿ ಕುಣಿದು ಸಂಭ್ರಮಿಸಿ, ಮೋದಿಗೆ ಜೈಕಾರ ಹಾಕಿದರು.

ಕೈಕೊಟ್ಟ ಗ್ಯಾರಂಟಿ ಕಾರ್ಡ್

ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ರಾಜಸ್ಥಾನಗಳಲ್ಲಿ ಬಿಜೆಪಿ ಸೋಲಿಗೆ ಇಂಡಿ ಒಕ್ಕೂಟ ಘೋಷಿಸಿದ ಗ್ಯಾರಂಟಿ ಕಾರ್ಡ್​ ಕಾರಣವಾಗಿದೆ. ದೇಶದ ಎಲ್ಲ ವರ್ಗದ ಬಡ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ಕೊಡ್ತೇವೆ, ವೋಟ್​ ಕೊಡಿ ಎಂದಿದ್ದರಿಂದ ಆ ರಾಜ್ಯದ ಸಾಮಾನ್ಯ ಜನರು ಅವರಿಗೆ ಮತ ಚಲಾಯಿಸಿದ್ದರಿಂದ ಬಿಜೆಪಿಯ ಸ್ಥಾನ ಕುಸಿದಿದೆ. ನಮ್ಮ ರಾಜ್ಯದಲ್ಲಿಯೂ ಸಹ 22 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಿತ್ತು. ಆದರೆ, 17+2 ಸ್ಥಾನ ಲಭಿಸಿದೆ ಎಂದರು.

ಭಾರತದ ಗೌರವ ಹೆಚ್ಚಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ನಿರ್ಮಿಸಿಕೊಟ್ಟ ಉಚಿತ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಆಯುಷ್ಮಾನ್​ ಭಾರತದಂತಹ ಸಮಾಜದ ಕಲ್ಯಾಣ ಯೋಜನೆ, ದೇಶದ ಕೋಟ್ಯಂತರ ಬಡವರಿಗೆ ಮನೆ ಕಟ್ಟಿಸಿಕೊಟ್ಟಿದ್ದು, ಕಾಶ್ಮೀರದಲ್ಲಿ 370 ಆರ್ಟಿಕಲ್​ ರದ್ದತಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿದ್ದು, ದೇಶಕ್ಕಾಗಿ ಶ್ರಮಿಸಿದ್ದು ಎಲ್ಲವೂ ಕಣ್ಮುಂದೆಯೇ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರ ಮೊದಲು ಎನ್ನುವ ಮನೋಭಾವದೊಂದಿಗೆ ಜಗತ್ತಿನಲ್ಲಿಯೇ ಭಾರತಕ್ಕೆ ಗೌರವ ತಂದುಕೊಟ್ಟವರು ಮೋದಿ. ಈ ಭಾವನೆ ಎಲ್ಲರಲ್ಲಿದೆ. ನಮ್ಮನ್ನು ವಿರೋಧಿಸುವವರೂ ಸಹ ಈ ಮಾತನ್ನು ಒಪ್ಪಿಕೊಳ್ಳುತ್ತಾರೆ ಎಂದರು.

ರಾಜ್ಯ ಕಾಂಗ್ರೆಸ್​ ಸರ್ಕಾರ ಸಾಕಷ್ಟು ಜನಪರ ಯೋಜನೆ ಕೊಟ್ಟರೂ, ಕೋಟ್ಯಂತರ ಜನ ಐದು ಗ್ಯಾರಂಟಿ ಯೋಜನೆಯ ಲಾಭ ಪಡೆದಿದ್ದರೂ ಸಹ ಬಿಜೆಪಿ ಒಡ್ಡಿದ ಭಾವನಾತ್ಮಕ ವಿಚಾರದಿಂದ ಹೊರ ಬಂದಂತಿಲ್ಲ ಅನ್ನಿಸಿದೆ. ಆದರೂ ಮತದಾರರ ತೀರ್ಮಾನಕ್ಕೆ ತಲೆ ಬಾಗುತ್ತೇವೆ. ನಾವು ಜಿಲ್ಲೆಯಲ್ಲಿ ಬೂತ್​ ಮಟ್ಟದಲ್ಲೂ ಸಹ ಸಾಕಷ್ಟು ಕೆಲಸ ಮಾಡಿದ್ದೆವು. ಸೋಲಿನ ಹಿನ್ನೆಲೆಯಲ್ಲಿ ರಾಜ್ಯ ನಾಯಕರೊಂದಿಗೆ ಚರ್ಚಿಸಿ, ಸಂಟನೆ ಕುರಿತಂತೆ ಕಾರ್ಯಯೋಜನೆ ಹಮ್ಮಿಕೊಳ್ಳಲಾಗುವುದು. ಅಶೋಕಕುಮಾರ್​ ಕೊಡವೂರು. ಜಿಲ್ಲಾಧ್ಯಕ್ಷ, ಕಾಂಗ್ರೆಸ್​, ಉಡುಪಿ ಅಶೋಕಕುಮಾರ್​ ಕೊಡವೂರು. ಜಿಲ್ಲಾಧ್ಯಕ್ಷ, ಕಾಂಗ್ರೆಸ್​, ಉಡುಪಿ
ಚುನಾವಣಾ ಫಲಿತಾಂಶದ ಕುರಿತು ಮಾತನಾಡಲು ವಿಷಯವಿಲ್ಲ. ಏನೆಂದು ಹೇಳಲಿ? ಸೋಲಾಗಿದೆ, ಒಪ್ಪಿಕೊಂಡಿದ್ದೇನೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ, ಈ ಹಿಂದೆ ನಾನು ಸಂಸದನಾಗಿ ಮಾಡಿದ್ದ ಕಾರ್ಯಗಳಿಂದ ಗೆಲುವಿನ ನಿರೀಕ್ಷೆ ಇತ್ತು. ಮತದಾರರ ತೀರ್ಪಿಗೆ ತಲೆಬಾಗುತ್ತೇನೆ. ನನಗೆ ಮತದಾನ ಮಾಡಿದವರಿಗೆ ವಂದಿಸುತ್ತೇನೆ. ಕೆ.ಜಯಪ್ರಕಾಶ್​ ಹೆಗ್ಡೆ. ಕಾಂಗ್ರೆಸ್​ನ ಪರಾಜಿತ ಅಭ್ಯರ್ಥಿ ಕೆ.ಜಯಪ್ರಕಾಶ್​ ಹೆಗ್ಡೆ. ಕಾಂಗ್ರೆಸ್​ನ ಪರಾಜಿತ ಅಭ್ಯರ್ಥಿ