ಉಡುಪಿಯ ಪ್ರೆಸ್​ಕ್ಲಬ್​ನಲ್ಲಿ ಕಾರ್ಕಳ ತಾಲೂಕಿನ ಹಿಂದು ಹಿತರಕ್ಷಣಾ ವೇದಿಕೆ ಸದಸ್ಯ ಶ್ರೀಕಾಂತ ಶೆಟ್ಟಿ ಮಾತನಾಡಿದರು. ತಿಲಕ್​ ಸಾಣೂರು, ರಮೇಶ್​ ಶೆಟ್ಟಿ, ನಿಖಿಲ್​ ಮಂಚಿ, ಧೀರಜ್​ ಬನ್ನಂಜೆ, ಗುರುಪ್ರಸಾದ್​ ಇದ್ದರು. 
ಜಿಲ್ಲೆ

ಅತ್ತೂರು ಸ್ವಾಗತ ಗೋಪುರ ತೆರವಿಗೆ 10 ದಿನದ ಗಡುವು

ಕಾರ್ಕಳ ತಾಲೂಕು ಹಿಂ.ಹಿ.ವೇದಿಕೆ ಎಚ್ಚರಿಕೆ | ಚರ್ಚ್​ನವರಿಂದ ಅಕ್ರಮ ಆರೋಪ

ವಿಜಯವಾಣಿ ಸುದ್ದಿಜಾಲ ಉಡುಪಿ
ಕಾರ್ಕಳ ತಾಲೂಕಿನ ಅತ್ತೂರು ಗ್ರಾಮದಲ್ಲಿ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ, ಲೋಕೋಪಯೋಗಿ ಇಲಾಖೆಯ ಜಾಗದಲ್ಲಿ ಸೇಂಟ್​ ಲಾರೆನ್ಸ್​ ಚರ್ಚ್​ನವರು ಅಕ್ರಮವಾಗಿ ಬೃಹತ್​ ಸ್ವಾಗತ ಗೋಪುರ ರಚಿಸಿದ್ದಾರೆ. ಮುಂದಿನ 10 ದಿನದೊಳಗೆ ಜಿಲ್ಲಾಡಳಿತ ಅದನ್ನು ತೆರವು ಮಾಡದಿದ್ದಲ್ಲಿ ಜಿಲ್ಲಾದ್ಯಂತ ಜನಾಂದೋಲನ ಹಮ್ಮಿಕೊಳ್ಳುತ್ತೇವೆ ಎಂದು ಕಾರ್ಕಳ ತಾಲೂಕಿನ ಹಿಂದು ಹಿತರಕ್ಷಣಾ ವೇದಿಕೆ ಸದಸ್ಯ ಶ್ರೀಕಾಂತ ಶೆಟ್ಟಿ ಎಚ್ಚರಿಕೆ ನೀಡಿದರು.

ಉಡುಪಿಯ ಪ್ರೆಸ್​ಕ್ಲಬ್​ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಿ ಸ್ಥಳದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿರುವ ಎಲ್ಲ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡುವಂತೆ ಸುಪ್ರೀಂ ಕೋರ್ಟ್​ 2008ರಲ್ಲಿಯೇ ಆದೇಶ ಮಾಡಿದೆ. ಈ ವಿಚಾರ ಜಿಲ್ಲೆಯ ಅಧಿಕಾರಿಗಳಿಗೆ ತಿಳಿದಿದ್ದರೂ ಸಹ ಯಾರದೋ ಪ್ರಭಾವಕ್ಕೆ ಒಳಗಾಗಿ ಗೋಪುರ ನಿರ್ಮಿಸಲು ಅನುಮತಿ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆಯವರಂತೂ ಈ ವಿಚಾರದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ದೂರಿದರು.

ನಮಗೂ ಅವಕಾಶ ನೀಡಿ

ಸುಪ್ರೀಂ ಕೋರ್ಟ್​ ಆದೇಶಕ್ಕೆ ಗೌರ ನೀಡಿ ಹಿಂದು ಧಮೀರ್ಯರು ಸರ್ಕಾರಿ ಜಾಗದಲ್ಲಿರುವ ಕಟ್ಟಡ ತೆರವು ಮಾಡಿ ಸ್ಪಂದಿಸಿದ್ದಾರೆ. ಆದರೆ, ಕಾರ್ಕಳದ ಚರ್ಚ್​ನವರಿಗೇಕೆ ಅಷ್ಟೊಂದು ಅಕ್ಕರೆ ತೋರುತ್ತಿದ್ದೀರಿ? ಈಗಾಗಲೇ ಕೆಡವಿರುವ ಜಾಗದಲ್ಲಿ ಹಿಂದುಗಳಿಗೂ ಮತ್ತೆ ಕಟ್ಟಡ ಅಥವಾ ಗೋಪುರ ನಿರ್ಮಿಸಿಕೊಳ್ಳಲು ಅವಕಾಶ ಕೊಡಿ. ಇಲ್ಲವೇ ಅಕ್ರಮವಾಗಿ ನಿರ್ಮಿಸಿರುವ ಚರ್ಚ್​ನವರ ಸ್ವಾಗತ ಗೋಪುರ ತೆರವು ಮಾಡಿ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ತಿಲಕ್​ ಸಾಣೂರು, ರಮೇಶ್​ ಶೆಟ್ಟಿ, ನಿಖಿಲ್​ ಮಂಚಿ, ಧೀರಜ್​ ಬನ್ನಂಜೆ, ಗುರುಪ್ರಸಾದ್​ ಇದ್ದರು.

ಸರ್ಕಾರಿ ಜಾಗದಲ್ಲಿ ಚರ್ಚ್​ನವರು ಅಕ್ರಮವಾಗಿ ಕಟ್ಟಿರುವ ಸ್ವಾಗತ ಗೋಪುರ ತೆರವು ಮಾಡಬೇಕಾದ ಜವಾಬ್ದಾರಿ ಜಿಲ್ಲಾಧಿಕಾರಿಯದ್ದಾಗಿದ್ದು, ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಚರ್ಚ್​ನವರ ಅಕ್ರಮಕ್ಕೆ ಸಹಕಾರ ನೀಡಿರುವ ಅಧಿಕಾರಿಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಡಿಸಿ ವಿರುದ್ಧವೇ ಪ್ರತಿಭಟಿಸಬೇಕಾಗುತ್ತದೆ. ತಿಲಕ್​ ಸಾಣೂರು. ಅಧ್ಯಕ್ಷ, ಹಿಂದು ಹಿತರಕ್ಷಣಾ ವೇದಿಕೆ, ಕಾರ್ಕಳ