ಜಿಲ್ಲೆ

ಪಾಲಿಕೆ ಬಿಜೆಪಿ ಸದಸ್ಯರಿಗೆ ಕಾಂಗ್ರೆಸ್ ಆಮೀಷ

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್​ನವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರುವ ದುರುದ್ದೇಶದಿಂದ ಪಾಲಿಕೆ ಬಿಜೆಪಿ ಸದಸ್ಯರಿಗೆ ಆಮೀಷವೊಡ್ಡುತ್ತಿದ್ದು, ತಮ್ಮ ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಮೇಯರ್ ಈರೇಶ ಅಂಚಟಗೇರಿ ಹಾಗೂ ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷ ಸಂಜಯ ಕಪಟಕರ ಆರೋಪಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕರು ಮತ್ತು ಕಾಂಗ್ರೆಸ್​ನ ಇತರ ಮುಖಂಡರು ಪಾಲಿಕೆ ಬಿಜೆಪಿ ಸದಸ್ಯರಿಗೆ ಹಣ ಹಾಗೂ ಅಧಿಕಾರದ ಆಮೀಶವೊಡ್ಡುತ್ತಿದ್ದಾರೆ ಎಂದು ದೂರಿದರು.

ಪಾಲಿಕೆ ಬಿಜೆಪಿ ಸದಸ್ಯರು ಒಗ್ಗಟ್ಟಾಗಿದ್ದಾರೆ. ಕಾಂಗ್ರೆಸ್ ಯಾವುದೇ ರೀತಿಯ ಕುತಂತ್ರ ಮಾಡಿದರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಈ ಬಾರಿಯೂ ಪಾಲಿಕೆಯಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಪಾಲಿಕೆ ಬಿಜೆಪಿ ಸದಸ್ಯರಾದ ಸುರೇಶ ಬೇದ್ರೆ, ಉಪ ಮೇಯರ್ ಉಮಾ ಮುಕುಂದ, ಪಕ್ಷೇತರ ಸದಸ್ಯೆ ಚಂದ್ರಿಕಾ ಮೇಸ್ತ್ರಿ ಸೇರಿದಂತೆ ಅನೇಕ ಬಿಜೆಪಿ ಸದಸ್ಯರು ಮತ್ತು ಬಿಜೆಪಿ ಬೆಂಬಲಿಸಿದ ಪಕ್ಷೇತರರಿಗೆ ಕಾಂಗ್ರೆಸ್​ನವರು ಆಮೀಷವೊಡ್ಡುತ್ತಿದ್ದಾರೆ. ಕೆಲವರಿಗೆ ತಲಾ 50 ಲಕ್ಷ ರೂ. ಹಣದ ಆಸೆ ತೋರಿಸದರೆ, ಇನ್ನೂ ಕೆಲವರಿಗೆ ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಹುದ್ದೆಯ ಆಸೆ ತೋರಿಸುತ್ತಿದ್ದಾರೆ ಎಂದು ದೂರಿದರು.

ಪಾಲಿಕೆ ಕಾಂಗ್ರೆಸ್​ನ ಮೂವರು ಸದಸ್ಯರು ಸಹ ಬಿಜೆಪಿಯೊಂದಿಗೆ ಸಂಪರ್ಕದಲ್ಲಿ ಇದ್ದಾರೆ. ನಾವು ಇಚ್ಛಿಸಿದರೆ ಅವರನ್ನು ಬಿಜೆಪಿಗೆ ಸೆಳೆಯಬಹುದು. ಆದರೆ, ನಾವು ಅಧಿಕಾರಕ್ಕೆ ಬರಲು ಅಡ್ಡ ದಾರಿ ಹಿಡಿಯುವುದಿಲ್ಲ ಎಂದು ಸಂಜಯ ಕಪಟಕರ ಹೇಳಿದರು.

ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ಪೌರ ಕಾರ್ವಿುಕರಿಗೆ ಕಳಪೆ ಆಹಾರ ಪೂರೈಸುತ್ತಿರುವುದು ಕಂಡುಬಂದಿದೆ. ಆಹಾರ ಪೂರೈಕೆ ಗುತ್ತಿಗೆ ಪಡೆದಿದ್ದ ಬೆಂಗಳೂರು ಮೂಲದ ಸಂಸ್ಥೆಯೊಂದು, ಸ್ಥಳೀಯರಿಗೆ ಮರು ಗುತ್ತಿಗೆ ನೀಡಿದೆ ಎಂಬ ದೂರು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಸ್ಮಾರ್ಟ್​ಸಿಟಿ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಸ್ಮಾರ್ಟ್​ಸಿಟಿಯಡಿ ನಿರ್ವಿುಸಿದ ಯಾವುದೇ ಯೋಜನೆಯನ್ನು ಇದುವರೆಗೆ ಪಾಲಿಕೆ ಹಸ್ತಾಂತರಿಸಿಕೊಂಡಿಲ್ಲ. ಕಳಪೆ ಕಾಮಗಾರಿಯಿಂದ ಲೋಕಾಯುಕ್ತ ತನಿಖೆಗೆ ಪತ್ರ ಬರೆದಿದ್ದಾಗಿ ಹೇಳಿದರು.

ಬಿಜೆಪಿ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಉಪ ಮೇಯರ್ ಉಮಾ ಮುಕುಂದ, ಪಾಲಿಕೆ ಸಭಾ ನಾಯಕ ತಿಪ್ಪಣ್ಣ ಮಜ್ಜಗಿ, ಸದಸ್ಯರಾದ ವೀರಣ್ಣ ಸವಡಿ, ಬೀರಪ್ಪ ಖಂಡೇಕಾರ ಹಾಗೂ ಇತರರು ಇದ್ದರು.