ತುಮಕೂರು : ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಹೆಸರನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಗೊಲ್ಲರ ಅಭಿವೃದ್ಧಿ ನಿಗಮವೆಂದು ಬದಲಿಸಲು ಹೊರಟಿದ್ದು ಸರ್ಕಾರ ಇವರ ಲಾಬಿಗೆ ಮಣಿದಿದ್ದೇ ಆದರೆ ರಾಜ್ಯಾದ್ಯಂತ ಉಗ್ರಹೋರಾಟ ನಡೆಸುವುದಾಗಿ ಜಿಲ್ಲಾ ಕಾಡುಗೊಲ್ಲರ ಸಂಘದ ಸಂಘಟನಾ ಕಾರ್ಯದರ್ಶಿ ಜಿ.ಎಂ.ಈರಣ್ಣ ಎಚ್ಚರಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿರಾ ಉಪಸಮರ ಸಂದರ್ಭದಲ್ಲಿ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ, ರಾಜ್ಯ ಬಿಜೆಪಿ ಸರ್ಕಾರ ಅಭಿವೃದ್ಧಿ ನಿಗಮ ಘೋಷಿಸಿದ್ದು ಬಿಟ್ಟರೆ, ಅಧ್ಯಕ್ಷರ ನೇಮಕ ಹಾಗೂ ಈವರೆಗೆ ಅನುದಾನ ನೀಡಿಲ್ಲ. ಕೂಡಲೇ ಅಧ್ಯಕ್ಷರ ನೇಮಕ ಮಾಡಿ, ಕನಿಷ್ಠ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ರಾಜ್ಯದಲ್ಲಿ ಸುಮಾರು 40 ಲಕ್ಷದಷ್ಟು ಜನಸಂಖ್ಯೆಯಿರುವ ಕಾಡುಗೊಲ್ಲ ಸಮುದಾಯವನ್ನು ಗೊಲ್ಲ ಸಮುದಾಯದ ಕೆಲವರು ಗುತ್ತಿಗೆ ಹಿಡಿದಂತೆ ವರ್ತಿಸುತ್ತಿದ್ದಾರೆ. ಈ ಹಿಂದೆಯೂ ಸರ್ಕಾರ ಕಾಡುಗೊಲ್ಲರ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಮಾಡಿದಾಗ ಅಪಸ್ವರ ಎತ್ತಿದ ಪರಿಣಾಮ ಗೊಲ್ಲ ಅಭಿವೃದ್ಧಿ ನಿಗಮವೆಂದು ಹೆಸರು ಬದಲಾಯಿಸಿದ್ದರು. ಆದರೆ, ಕಾಡುಗೊಲ್ಲರ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಸ್ಪಂದಿಸಿದ ಸರ್ಕಾರ ಕಾಡುಗೊಲ್ಲರ ಅಭಿವೃದ್ಧಿ ನಿಗಮವೆಂದು ಮರು ನಾಮಕರಣ ಮಾಡಿದ್ದನ್ನು ಇಡೀ ರಾಜ್ಯದ ಜನತೆ ಮರೆತಿಲ್ಲ ಎಂದರು.
ಎಸ್ಟಿ ಜಾತಿಗೆ ಸೇರಿಸಿ: ಸರ್ಕಾರ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಕುರಿತಂತೆ ಇದುವರೆಗೂ ಕ್ರಮ ಕೈಗೊಂಡಿಲ್ಲ. ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯ ನಮ್ಮದಾಗಿದ್ದು ರಾಜ್ಯದ ಸುಮಾರು 28 ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರೆನಿಸಿದ್ದೇವೆ. ಈಗಲಾದರೂ ಸರ್ಕಾರ ಬೇಡಿಕೆ ಈಡೇರಿಸುವಂತೆ ಈರಣ್ಣ ಒತ್ತಾಯಿಸಿದರು. ಚಿತ್ರದುರ್ಗ ಜಿಲ್ಲೆಯ ಶ್ರೀಕೃಷ್ಣ ಯಾದವ ಯುವವೇದಿಕೆ ಅಧ್ಯಕ್ಷ ಗೋಪಿ ಯಾದವ್ ಹಾಜರಿದ್ದರು.
ರಾಜ್ಯ ಸರ್ಕಾರದ ಮುಂದಿನ ನಡೆ, ನುಡಿಗಳ ಕುರಿತು ಸಮಾಲೋಚಿಸುವ ಸಂಬಂಧ ನ.30ರಂದು ಶಿರಾ ನಗರದಲ್ಲಿ ರಾಜ್ಯದ ಕಾಡುಗೊಲ್ಲ ಮುಖಂಡರ ಸಭೆ ಕರೆಯಲಾಗಿದೆ. ಒಂದು ವೇಳೆ ಸರ್ಕಾರವೇ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಹೆಸರು ಬದಲಾಯಿಸಿದರೆ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಜಿ.ಎಂ.ಈರಣ್ಣ ಸಂಘಟನಾ ಕಾರ್ಯದರ್ಶಿ, ಜಿಲ್ಲಾ ಕಾಡುಗೊಲ್ಲರ ಸಂಘ