ಜಿಲ್ಲೆ

ಜಿಲ್ಲೆಯಲ್ಲಿ ಶೇ.79 ಸಮೀಕ್ಷೆ ಕಾರ್ಯ ಪೂರ್ಣ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅವಧಿಯನ್ನು ಅ.18 ರವರೆಗೆ ವಿಸ್ತರಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಶೇ. 79.19 ಕುಟುಂಬದ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಮಾಹಿತಿ ನೀಡಿದರು.

ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಬುಧವಾರ ಸುದ್ದಿಗೋಷ್ಟಿಯಲ್ಲಿ ವಿಷಯ ತಿಳಿಸಿದರು. ಸಮೀಕ್ಷೆ ಕಾರ್ಯ ಸಮರ್ಪಕವಾಗಿ ಪೂರ್ಣಗೊಳ್ಳಲು ಹಾಗೂ ಯಾರೊಬ್ಬರೂ ಸಮೀಕ್ಷೆಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಸಮೀಕ್ಷೆ ಅವಧಿ ವಿಸ್ತರಿಸಲಾಗಿದೆ. ನಿಗದಿತ ಅವಧಿಯೊಳಗೆ ಜಿಲ್ಲೆಯಲ್ಲಿ ಶೆ.100 ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗುವುದು ಇದಕ್ಕೆ ಸಮೀಕ್ಷಾ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಕಾಲಾವಧಿಯೊಳಗೆ ಗಣತಿ ಪೂರ್ಣ: ಜಿಲ್ಲೆಯಲ್ಲಿ 2024-25 ನೇ ಸಾಲಿಗೆ ಅಂದಾಜಿಸಿದಂತೆ ಅಂಕಿಅಂಶಗಳ ವರದಿ ಪ್ರಕಾರ ಜಿಲ್ಲೆಯಲ್ಲಿ 3,85,237 ಕಟುಂಬಗಳಿದ್ದು 12,26,357 ಜನಸಂಖ್ಯೆ ಇದೆ. ಇದುವರೆಗೆ 2,65,119 ಕುಟುಂಬಗಳ 9,03,742 ಜನರ ಸಮೀಕ್ಷೆ ನಡೆಸಲಾಗಿದ್ದು ಶೇ.79.19ುಟುಂಬಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ ಉಳಿದ ದಿನಗಳೊಳಗೆ ಶೇ.100 ಸಮೀಕ್ಷಾ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು. ಅರಂಭದಲ್ಲಿ ಸಮೀಕ್ಷಾ ಕಾರ್ಯದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಿದ್ದವು ಆದರೆ ಪ್ರಸ್ತುತ ಇವೆಲ್ಲ ಸಮಸ್ಯೆಗಳು ಬಗೆಹರಿದಿದ್ದು ಗಣತಿದಾರರು ಸರಳವಾಗಿ ಗಣತಿ ಕಾರ್ಯ ನಡೆಸಲು ಅನುಕೂಲವಾಗಿದೆ ಆದ್ದರಿಂದ ನಿಗಧಿತ ಅವಧಿಯೊಳಗೆ ಸಮೀಕ್ಷಾ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಡಿಸಿ ಮಾಹಿತಿ ನೀಡಿದರು.

ನಿರ್ಭೀತಿಯಿಂದ ಸಮೀಕ್ಷೆಗೆ ಸಹಕರಿಸಿ: ದತ್ತಾಂಶ ಸಂಗ್ರಹಣೆಯು ರಾಜ್ಯದ ಅಭಿವೃದ್ಧಿಗೆ ಮತ್ತು ಸಮಾಜದ ಎಲ್ಲ ವರ್ಗಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವ ಉದ್ದೇಶವಾಗಿದೆ. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು. ಸಮೀಕ್ಷೆಯ ದತ್ತಾಂಶ ಗೌಪ್ಯತೆ ಕಾಪಾಡಲಿದೆ. ಜತೆಗೆ ದತ್ತಾಂಶವು ಸೋರಿಕೆ ಆಗುವುದಿಲ್ಲ. ಸಾರ್ವಜನಿಕರು ನಿರ್ಭಿತಿಯಿಂದ ಸಮೀಕ್ಷೆಗೆ ಸಹಕರಿಸಿ ಗಣತಿದಾರರಿಗೆ ಮಾಹಿತಿ ನೀಡಬೇಕು ಎಂದರು.

ಗ್ರಾಮಗಳಲ್ಲಿ ಅರಿವು: ಸಮೀಕ್ಷೆ ಕುರಿತಂತೆ 6 ಸಾವಿರ ಸ್ವಸಹಾಯ ಗುಂಪುಗಳ ಮಹಿಳೆಯರಿಂದ ಗ್ರಾಮಗಳಲ್ಲಿ ಅರಿವು ಮೂಡಿಸಲಾಗಿದೆ, ನಗರಸಭೆ ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಚ್ಛತಾ ವಾಹಿನಿಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ. ಬಾಕಿ ಉಳಿದಿರುವ ಸಾರ್ವಜನಿಕರು ಸಮೀಕ್ಷೆಯಲ್ಲಿ ಭಾಗವಹಿಸಿ ಸಮೀಕ್ಷೆ ಯಶಸ್ಸಿಗೆ ಸಹಕರಿಸಬೇಕು ಎಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿ ಲಕ್ಷ್ಮಿಕಾಂತ್ ಹೇಳಿದರು.

ಮನೆ ಬಾಗಿಲಿಗೆ ಗಣತಿದಾರರು: ಸಹಾಯವಾಣಿ ಸಂಪರ್ಕಿಸಿದರೆ ಮನೆಬಾಗಿಲಿಗೆ ಗಣತಿದಾರರು ಬರಲಿದ್ದಾರೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಸಮೀಕ್ಷೆಯಲ್ಲಿ ಬಿಟ್ಟು ಹೋದ ಕುಟುಂಬಗಳು, ಭಾಗವಹಿಸದೇ ಇರುವವರು ಸಹಾಯವಾಣಿ ಸಂಪರ್ಕಿಸಿದರೆ ಗಣತಿದಾರರು ನಿಮ್ಮ ಮನೆ ಬಾಗಿಲಿಗೆ ಬಂದು ಸಮೀಕ್ಷೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಜಿಲ್ಲೆಯಲ್ಲಿ 5 (ಹೆಲ್ಪ್‌ಲೈಣ್) ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಜಿಲ್ಲಾ ಹಿಂದುಳಿದ ವರ್ಗಗಳ ಕಚೇರಿ ದೂರವಾಣಿ ಸಂಖ್ಯೆ 080-22449999, ದೇವನಹಳ್ಳಿ-9036858653, ದೊಡ್ಡಬಳ್ಳಾಪುರ-8884579990, ಹೊಸಕೋಟೆ-080-27931104, ನೆಲಮಂಗಲ-9740100884. ಈ ಸಹಾಯವಾಣಿಯನ್ನು ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಸಂಪರ್ಕಿಸಿ ಗಣತಿಯನ್ನು ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು.