ಜಿಲ್ಲೆ

ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಇಂದು

ನಾಗೇಶ ಎಸ್

ಚನ್ನರಾಯಪಟ್ಟಣ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೊಡಮಾಡುವ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಶ್ರವಣಬೆಳಗೊಳದ ಚಾವುಂಡರಾಯ ಸಭಾಂಗಣದಲ್ಲಿ ಸೆ.18ರಂದು ಬೆಳಗ್ಗೆ 11.30ಕ್ಕೆ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ತಿಳಿಸಿದರು.

ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ದತ್ತಿ ನಿಧಿ ಸ್ಥಾಪಿಸಿದೆ. ದಲಿತ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಬೇಕು ಎನ್ನುವುದು ಮೂಲ ಆಶಯವಾಗಿದೆ. 2024ನೇ ಸಾಲಿನ ಸಾಹಿತ್ಯ ದತ್ತಿ ಪ್ರಶಸ್ತಿಗೆ ಎಚ್.ಜನಾದರ್ನ್(ಜನ್ನಿ) ಹಾಗೂ 2025ನೇ ಸಾಲಿನ ಪ್ರಶಸ್ತಿಗೆ ಶೂದ್ರ ಶ್ರೀನಿವಾಸ್ ಭಾಜನರಾಗಿದ್ದು, ದಲಿತ ಸಾಹಿತ್ಯ ಕ್ಷೇತ್ರದಲ್ಲಿ ಅಗಣಿತ ಸಾಧನೆ ಮಾಡಿರುವ ಇವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ ಮಾತನಾಡಿ, ದಿಗಂಬರ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಡಾ.ಸಿ.ಎನ್.ಬಾಲಕೃಷ್ಣ ಅವರು ಪ್ರಶಸ್ತಿ ಪ್ರದಾನ ನೆರವೇರಿಸಲಿದ್ದಾರೆ. ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾರ್ಗದರ್ಶಿ ಸಮಿತಿ ಸದಸ್ಯ ಡಾ.ಯುವರಾಜ್, ಹೋಬಳಿ ಅಧ್ಯಕ್ಷ ನಾಗೇಂದ್ರ ರಾಯ, ಸಂಘಟನಾ ಕಾರ್ಯದರ್ಶಿ ಜಬೀವುಲ್ಲಾ, ಕಸಾಪ ಮಹಿಳಾ ಪ್ರತಿನಿಧಿ ಯಶೋದಾ ಜೈನ್ ಇದ್ದರು.