ಜಿಲ್ಲೆ

ಲಂಚ ನೀಡಿದವರನ್ನು ಕರೆ ತನ್ನಿ - ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಸವಾಲು

ಪುತ್ತೂರು: ಬಿಜೆಪಿ ಮಾಜಿ ಶಾಸಕರ ಮೇಲೆ ಹಾಗೂ ಅಕ್ರಮ ಸಕ್ರಮ ಸಮಿತಿಯವರ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಅಕ್ರಮ ಸಕ್ರಮಕ್ಕೆ ದನ ಮಾರಿ ಹಣ ನೀಡಿದ ಮಹಿಳೆ ಹಾಗೂ ಲಂಚ ಕೊಟ್ಟ ೪೭ ಮಂದಿಯನ್ನು ಶಾಸಕರು ಕರೆದುಕೊಂಡು ಬಂದಲ್ಲಿ ನಾವು ಮಾಜಿ ಶಾಸಕರನ್ನು ಹಾಗೂ ಅಂದಿನ ಸಮಿತಿ ಸದಸ್ಯರನ್ನು ಕರೆದುಕೊಂಡು ಬರುವುದಾಗಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ತಿಳಿಸಿದರು.

ಎರಡೂವರೆ ವರ್ಷದಲ್ಲಿ ಪುತ್ತೂರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಮರೆ ಮಾಚಲು ಮಾಜಿ ಶಾಸಕರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಜನರ ಸಮಸ್ಯೆ ಬಗ್ಗೆ ಮಾತನಾಡುವವರ ಬಾಯಿ ಮುಚ್ಚಿಸುವ ಕಾರ್ಯ ಶಾಸಕರಿಂದ ನಡೆಯುತ್ತಿದೆ. ಹಿಂದಿನ ಶಾಸಕರ ಅವಽಯಲ್ಲಿ ೨ ಲಕ್ಷ ರೂ. ಲಂಚದ ಆರೋಪ ಮಾಡಿದವರು ಸೂಚಿಸಿದ ಜಾಗ, ದಿನಾಂಕ ನಿಗದಿ ಪಡಿಸಿದರೆ ನಾವು ಪ್ರಮಾಣಕ್ಕೂ ಸಿದ್ಧರಿದ್ದೇವೆ. ಅಕ್ರಮ ಸಕ್ರಮ ಕಡತ ವಿಲೇವಾರಿಯಾಗಲು ಅರ್ಜಿದಾರರು ಶಾಸಕರ ಕಚೇರಿಗೆ ಹೋಗಿ ಬರುವುದು, ಅರ್ಜಿದಾರರ ದೂರವಾಣಿ ಸಂಖ್ಯೆ ಪಡೆದುಕೊಳ್ಳುವ ಉದ್ದೇಶವೇನೆಂಬುದನ್ನು ತಿಳಿಸಬೇಕು. ಶಾಸಕರು ಗಾಜಿನ ಮನೆಯಲ್ಲಿ ಕುಳಿತು ಇನ್ನೊಬ್ಬರ ಮೇಲೆ ಕಲ್ಲು ಹೊಡೆಯುತ್ತಿದ್ದು, ಸಮಯ ಸಂದರ್ಭ ಬಂದಾಗ ನಿಮ್ಮ ಜಾತಕವನ್ನು ದಾಖಲೆ ಸಹಿತ ಜಾಲಾಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲು ಎಸೆದರು.

ಸುದ್ದಿಗೋಷ್ಠಿಯಲ್ಲಿ ನಗರ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ನಗರ ಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.