ಜಿಲ್ಲೆ

ಕಲಾವಿದರ ಸಂಕಷ್ಟಕ್ಕೆ ಸರ್ಕಾರ ಸ್ವಂದಿಸಬೇಕು

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ

ಕಲಾವಿದರು ಮಾಸಾಶನ ಪಡೆಯಲು ವರ್ಷಾನುಗಟ್ಟಲೇ ವಿಳಂಬವಾಗುತ್ತಿದೆ. ಜತೆಗೆ ಈಗಾಗಲೇ ಪಡೆಯುತ್ತಿರುವ ಬೇರೆ ರೀತಿ ಮಾಸಾಶನ ನಿಲ್ಲಿಸಲಾಗಿದೆ. ಯಾವುದೇ ಮಾಸಾಶನ ದೊರೆಯದೇ ಕಲಾವಿದರು ವಂಚಿತರಾಗಿದ್ದಾರೆ. ಕಲಾವಿದರ ಸಂಕಷ್ಟ ಅರ್ಥಮಾಡಿಕೊಂಡು, ನೆರವು ನೀಡಲು ಸರ್ಕಾರ ಮುಂದಾಗಬೇಕಿದೆ ಎಂದು ಕಲಾವಿದರ ಸಂಘದಿಂದ ಒತ್ತಾಯಿಸಲಾಗುತ್ತಿದೆ ಎಂದು ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್ ತಿಳಿಸಿದ್ದಾರೆ.

ನಗರದ ತಾಲೂಕು ಕಲಾವಿದರ ಸಂಘದ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ಸರ್ಕಾರ ಕಲಾವಿದರಿಗೆ 2,500 ರೂ.ಗಳ ಮಾಸಾಶನ ನೀಡುತ್ತಿದೆ. ಇದಕ್ಕೆ ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 58 ವರ್ಷ ತುಂಬಿದ ನಂತರ ಅರ್ಜಿ ಹಾಕಬೇಕು. ಮಾಸಾಶನಕ್ಕೆ ಅರ್ಜಿ ಹಾಕಿದ ಮೂರ್ನಾಲ್ಕು ವರ್ಷದ ನಂತರ ಮಾಸಾಶನ ಮಂಜೂರು ಅಗುತ್ತಿದೆ. ಆದರೆ ಅರ್ಜಿ ಹಾಕುವಾಗಲೇ ಇಲಾಖೆಯವರು ಕಂದಾಯ ಇಲಾಖೆಯಿಂದ ನೀಡುವ ವೃದ್ಯಾಪ್ಯ ವೇತನ ಪಡೆಯಬಾರದು. ಒಂದು ವೇಳೆ ಪಡೆಯುತ್ತಿದ್ದರೂ ಅದನ್ನು ನಿಲ್ಲಿಸಿ, ಅರ್ಜಿ ಹಾಕಬೇಕು ಎಂದು ಕಂಡೀಷನ್ ಹಾಕುತ್ತಿದ್ದಾರೆ. ಇತ್ತ ಕಲಾವಿದರ ಮಾಸಾಸನವೂ ಇಲ್ಲದೆ, ವೃದ್ಯಾಪ್ಯ ವೇತನವೂ ಇಲ್ಲದೆ ಕಲಾವಿದರು ತೊಂದರೆ ಅನುಭವಿಸುತ್ತಿದ್ದಾರೆ. ಅರ್ಜಿ ಹಾಕಿದ ನಾಲ್ಕೈದು ವರ್ಷದ ನಂತರ ಮಾಸಾಶನ ಮಂಜೂರಾಗುತ್ತಿದೆ. ಈ ದಿಸೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಮಂಜೂರು ಮಾಡಿದ ನಂತರ ವೃದ್ಯಾಪ್ಯ ವೇತನ ನಿಲ್ಲಿಸಿ, ನಂತರ ಕಲಾವಿದರಿಗೆ ಮಾಸಾಶನ ಬಿಡುಗಡೆ ಮಾಡಬೇಕು ಎಂದು ಕಲಾವಿದರ ಸಂಘ ಒತ್ತಾಯಿಸುತ್ತಿದೆ. ಮಾಸಾಶನಕ್ಕೆ ಅರ್ಜಿ ಹಾಕುವ ಮೊದಲೇ ಕಂದಾಯ ಇಲಾಖೆಯಿಂದ ನೀಡುವ 1,200 ವೃದ್ಯಾಪ್ಯ ವೇತನ ನಿಲ್ಲಿಸುವ ನಿಯಮ ಬದಲಿಸಬೇಕು. ಈ ಬಗ್ಗೆ ಇಲಾಖೆ ನಿರ್ದೇಶಕರು ಹಾಗೂ ಸಚಿವರು ಪರೀಶಿಲಿಸಿ ಮರು ಆದೇಶ ನೀಡಬೇಕು ಎಂದರು.

ಜೂ.3ಕ್ಕೆ ವಿಧಾನಸೌಧ ಚಲೋ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಜತೆಗೆ ಕಲಾವಿದರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜೂ.3ರಂದು ಕರ್ನಾಟಕ ಸಾಂಸ್ಕತಿಕ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿರುವ ವಿಧಾನಸೌಧ ಚಲೋ ಬೃಹತ್ ಸಾಂಸ್ಕೃತಿಕ ಹೋರಾಟಕ್ಕೆ ಸಂಘವು ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದೆ ಎಂದು ಚಂದ್ರಶೇಖರ್ ತಿಳಿಸಿದರು.