ಪುತ್ತೂರು: ಪಕ್ಷದಿಂದಲೇ ಟಿಕೆಟ್ ನೀರಾಕರಿಸಲ್ಪಟ್ಟು ತಿರಸ್ಕರಿಸಲ್ಪಟ್ಟ ಪುತ್ತೂರಿನ ಮಾಜಿ ಶಾಸಕರು ನನ್ನ ವಿರುದ್ಧ ಗಂಭೀರ ಆರೋಪಗಳ ಸುರಿಮಳೆಗೆರೆದಿದ್ದಾರೆ. ನಮ್ಮ ಪಕ್ಷ, ಸರ್ಕಾರ ವಿರುದ್ಧದ ಟೀಕೆಗಳೆಲ್ಲವನ್ನೂ ದೇಶದ್ರೋಹ ಅಂತ ಕರೆದು ವಿಪಕ್ಷಗಳ ಬಾಯಿ ಮುಚ್ಚಿಸಲು ಮತ್ತು ಜನರ ಧ್ವನಿ ಅಡಗುವಂತೆ ಮಾಡಲು ಪ್ರಯತ್ನಿಸುತ್ತಾರೆ ಎಂದು ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಹೇಳಿದರು.
ಒಂದು ವಿಚಾರವನ್ನು ನಾವು ನೋಡುವ ದೃಷ್ಟಿಕೋನದಿಂದ ಅರ್ಥೈಸಿಕೊಳ್ಳಬಹುದು. ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಲಿಲ್ಲ. ಈ ಪೋಸ್ಟ್ ನೋಡುವಾಗ ಭಯೋತ್ಪಾದನೆ ಮೂಲಕ ಭಾರತದ ಮೇಲೆ ವಿಷ ಕಾರುತ್ತಿರುವ ಪಾಕಿಸ್ತಾನವೇ ನಮ್ಮ ಕಣ್ಣ ಮುಂದೆ ಬರಬೇಕಲ್ಲದೆ ಭಾರತದ ಪ್ರಧಾನಮಂತ್ರಿಗಳಿಗೂ ಇದಕ್ಕೂ ಸಂಬಂಧವೇ ಇಲ್ಲ. ನಮ್ಮ ಪ್ರಧಾನಮಂತ್ರಿಗಳ ಬಗೆಗಿನ ಅವಹೇಳನಾಕಾರಿ ಪೋಸ್ಟ್ ಅಂತ ಅನ್ನಿಸಿದ್ದರ ಹಿಂದೆ ಏನೋ ದುರುದ್ದೇಶವೇ ಇದೆ ಅಂತ ಅನ್ನಿಸುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಶ್ಮಿರದಲ್ಲಿ ಭಯೋತ್ಪಾದಕರು ಪ್ರವಾಸಿಗರನ್ನು ಕೊಲ್ಲುವಾಗ ಧರ್ಮವನ್ನು ವಿಚಾರಿಸಿ ಹತ್ಯೆ ನಡೆಸಿ ದೇಶದಲ್ಲಿ ಧರ್ಮ ಧರ್ಮಗಳ ಮಧ್ಯೆ ದ್ವೇಷ ವಾತಾವರಣ ಸೃಷ್ಟಿಸುವುದಾಗಿತ್ತು. ಪ್ರತಿಭಟನಾ ಸಭೆಯಲ್ಲಿ ತಾವು ಹಿಂದಿನ ಸಾಲಿನಲ್ಲಿ ನಿಂತು, ಯುವಕರನ್ನು ಮುಂದಕ್ಕೆ ಛೂಬಿಟ್ಟು ಅವರ ಬಾಯಿಯಲ್ಲಿ ದ್ವೇಷ ಭಾಷಣ ಮಾಡಿಸಿ, ಸಮಾಜದಲ್ಲಿ ಶಾಂತಿ ಕದಡುವ ಕಾರ್ಯವಾಗಿತು. ಸಾಮಾನ್ಯ ಸ್ಥಿತಿಯಲ್ಲೂ ನಡೆಯಬಾರದ ಇಂತಹ ಚಟುವಟಿಕೆಯನ್ನು ದೇಶ ಯುದ್ಧದ ಸನ್ನಿವೇಷದಲ್ಲಿದ್ದಾಗ ಮಾಡಿರುವುದು ಅಕ್ಷಮ್ಯ ಅಪರಾಧ ಎಂದರು.