ಜಿಲ್ಲೆ

ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗೆ ೭೫ರ ಸಂಭ್ರಮ - ದ್ವಾರಕಾ ಪ್ರತಿಷ್ಠಾನ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಮಾಹಿತಿ

Mangaluru - Nishantha Narayana

ಪುತ್ತೂರು: ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯನ್ನು ೧೯೫೧ರಲ್ಲಿ ಪಟ್ಟೆ ಬಾಲಕೃಷ್ಣ ಭಟ್ ನೇತೃತ್ವದಲ್ಲಿ ಪ್ರಾರಂಭಿಸಲಾಗಿದ್ದು, ೭೫ ವರ್ಷದ ಸುದೀರ್ಘ ಪಯಣದಲ್ಲಿ ಸ್ಥಳೀಯವಾಗಿ ವಿದ್ಯಾಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡುತ್ತಾ ಬಂದಿದೆ. ಪಟ್ಟೆ ವಿದ್ಯಾಸಂಸ್ಥೆಯನ್ನು ದ್ವಾರಕಾ ಪ್ರತಿಷ್ಠಾನದ ಸುಪರ್ದಿಗೆ ತೆಗೆದುಕೊಂಡಿದ್ದು, ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆಗೆ ಮುಂದಾಗಿದೆ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಸಹಕಾರಿಯಾಗುವಂತೆ ಪಟ್ಟೆ ವಿದ್ಯಾ ಸಂಸ್ಥೆಯನ್ನು ಬೆಳೆಸಲಿದ್ದೇವೆ ಎಂದು ದ್ವಾರಕಾ ಪ್ರತಿಷ್ಠಾನ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಹೇಳಿದರು.

ಶಿಕ್ಷಣ ಎಂಬುದು ಪದವಿಗಳಿಗೆ ಸೀಮಿತವಾಗಿರದೆ ಹೊಸ ರೀತಿಯಲ್ಲಿ ಮುನ್ನಡೆಸುವ ಆಲೋಚನೆ ಇಟ್ಟುಕೊಳ್ಳಲಾಗಿದೆ. ಸಮಾಜಕ್ಕೆ ಘಾತುಕರಾಗದಂತೆ ತಡೆಯುವ ಜತೆಗೆ ಸಮಾಜದ ಆಸ್ತಿಯಾಗಿ ಹೊರತರುವ ಕಲ್ಪನೆ ಇಟ್ಟುಕೊಂಡು ಈ ಕ್ಷೇತ್ರಕ್ಕೆ ಪ್ರತಿಷ್ಠಾನ ಕೈಹಾಕಿದೆ. ೧ರಿಂದ ೧೦ರವರೆಗೆ ಕನ್ನಡ ಮಾಧ್ಯಮ ಶಿಕ್ಷಣ ಲಭಿಸುತ್ತಿದ್ದು, ಇದರ ಜತೆಗೆ ಆಂಗ್ಲ ಮಾಧ್ಯಮವನ್ನು ಪ್ರಾರಂಭ ಮಾಡಲಿದ್ದೇವೆ. ಕ್ರೀಡೆಯಲ್ಲಿ ವಿದ್ಯಾಸಂಸ್ಥೆಗೆ ಈಗಗಾಲೇ ಉತ್ತಮ ಹೆಸರಿದ್ದು, ಇದನ್ನು ಇನ್ನಷ್ಟು ಕ್ಷೇತ್ರಗಳಿಗೆ ವಿಸ್ತರಣೆ ಮಾಡಲಾಗುವುದು. ಸದ್ಯ ೨೭೪ ವಿದ್ಯಾರ್ಥಿಗಳು ಶಾಲೆಯಲ್ಲಿದ್ದು, ಹೊಸದಾಗಿ ೧೦೦ ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ೭೫ನೇ ಸಂಭ್ರಮನ್ನು ವರ್ಷಪೂರ್ತಿ ಆಚರಿಉವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆ ಉಪಾಧ್ಯಕ್ಷ ಅಮೃತಕೃಷ್ಣ, ದ್ವಾರಕಾ ಪ್ರತಿಷ್ಠಾನ ಆಪಲೇಷನ್ ವಿಭಾಗ ಮುಖ್ಯಸ್ಥ ದುರ್ಗಾ ಗಣೇಶ್ ಉಪಸ್ಥಿತರಿದ್ದರು.

ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ನೇತೃತ್ವವನ್ನು ಮಾರ್ಚ್ ೧೩ರಿಂದ ದ್ವಾರಕಾ ಪ್ರತಿಷ್ಠಾನದ ವಿದ್ಯಾಸಂಸ್ಥೆ ವಹಿಸಿಕೊಂಡಿದೆ. ಜವಾಬ್ದಾರಿಯುತ ವಿದ್ಯಾರ್ಥಿಗಳನ್ನು ಬೆಳೆಸಬೇಕೆಂಬ ಮುಖ್ಯ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಮಕ್ಕಳಿಗೆ ಸ್ಪರ್ಧಾತ್ಮಕ ಶಿಕ್ಷಣದ ಜತೆಗೆ ಸಾಂಸ್ಕೃತಿಕ ಮೌಲ್ಯವರ್ಧನ ಮತ್ತು ಸಾಂಪ್ರದಾಯಿಕ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಗುರುಕುಲ ಮಾದರಿ, ಕೃಷಿ ಚಟುವಟಿಕೆಯನ್ನು ನಡೆಸಿ ಒಲವು ಮೂಡುವಂತೆ, ಜೈವಿಕ ಉದ್ಯಾನವನ, ಸಾವಯವ ಕೃಷಿ, ತರಕಾರಿ ಬೆಳೆಯುವ ಮೂಲಕ ವಿದ್ಯಾರ್ಥಿಯ ಜೀವನಶೈಲಿ ಬದಲಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ.

| ವಿಘ್ನೇಶ ಹಿರಣ್ಯ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆ ಸಂಚಾಲಕ