ಪುತ್ತೂರು: ಸುಳ್ಯದಲ್ಲಿ ಟಿಕೆಟ್ ಹಂಚಿಕೆ ಮಾಡುವ ಸಂದರ್ಭ ಇನ್ನೊಬ್ಬರಿಗೆ ಕೊಡಬಾರದೆಂದಲ್ಲ, ಅಂಗಾರರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಿತ್ತು. ೩೦ ವರ್ಷ ಶಾಸಕರಾಗಿದ್ದವರನ್ನು, ಸಚಿವರನ್ನು ಕಡೆಗಣನೆ ಮಾಡಬಾರದಿತ್ತು. ಮುಂಚಿತವಾಗಿ ಕೂರಿಸಿ ಹೊಸಬರಿಗೆ ಅವಕಾಶ ಕೊಡುತ್ತೇವೆ ಎಂಬುದನ್ನು ಹೇಳಿದ್ದರೆ ಬೇಡ ಎನ್ನುವ ಪರಿಸ್ಥಿತಿ ಬರುತ್ತಿರಲಿಲ್ಲ. ಕೆಲಸ ಮಾಡಿದ ವ್ಯಕ್ತಿಗೆ ಆತರ ಆಗಬಾರದು. ನಳಿನ್ ಕುಮಾರ್ ಗೂ ಕೊನೆಯಲ್ಲಿ ಆದೇ ಆಯಿತು ಎಂದು ಬಜಾಪ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದರು.
ಸುಳ್ಯ ಹಾಗೂ ಕಡಬ ತಾಲೂಕಿನ ೨೫ ಸಹಕಾರಿ ಕ್ಷೇತ್ರದಲ್ಲಿ ಚುನಾವಣೆ ನಡೆದು, ಆರು ಗ್ರಾಮಕ್ಕೊಳಪಟ್ಟ ಅಲಂಕಾರು ಸೊಸೈಟಿಯಲ್ಲಿ ಮಾ.೨ರಂದು ನಡೆಯಲಿದೆ. ಇಲ್ಲಿ ಹಲವು ವರ್ಷಗಳಿಂದ ಬಜಾಪ ಹಾಗೂ ಸಹಕಾರ ಭಾರತಿ ನೇತೃತ್ವದಲ್ಲಿ ನಡೆದುಕೊಂಡು ಬಂದಿದೆ. ಚುನಾವಣೆಯನ್ನು ಗೆಲ್ಲುವ ಸಂದರ್ಭದಲ್ಲಿ ಎಲ್ಲ ಕಡೆಯಲ್ಲಿ ಬಂಡಾಯ ಏಳುತ್ತಿದ್ದು, ಅಲಂಕಾರಿನಲ್ಲೂ ವೈಯಕ್ತಿಕ ಹಿತಾಸಕ್ತಿಗಳು ಬಂಡಾಯ ಮಾಡುತ್ತಿದ್ದಾರೆ. ೧೨ಕ್ಕೆ ೧೨ ಸ್ಥಾನವನ್ನು ನೀಡಬೇಕೆಂಬ ಬೇಡಿಕೆ ಬಂದಿದ್ದು, ಇದಕ್ಕೆ ಪಕ್ಷ ಅವಕಾಶವನ್ನು ನೀಡುವುದಿಲ್ಲ ಮತ್ತು ಪಕ್ಷ ಯಾರ ಮನೆಯ ಆಸ್ತಿಯಲ್ಲ. ಕೆಲಸಕ್ಕೆ ಬಾರದ ವ್ಯಕ್ತಿಗಳಿಗೆ ಅವಕಾಶವನ್ನು ನೀಡಿ ಸಂಘಟನೆಯನ್ನು ಮುನ್ನಡೆಸಲು ಸಾಧ್ಯವಿಲ್ಲ. ಪಕ್ಷಕ್ಕೆ ಸೆಡ್ಡು ಹೊಡೆದವರಿಗೆ ಸರಿಯಾದ ಪ್ರತ್ಯತ್ತರ ನೀಡುವ ಸಂದರ್ಭ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಲಂಕಾರು ಕೃಷಿ ಪತ್ತಿನ ಸಹಕಾರಿ ಸಂಘದ ನಿಕಟ ಪೂರ್ವ ಅಧ್ಯಕ್ಷ ಧರ್ಮಪಾಲ್ ರಾವ್ ಕಜೆ ಮಾತನಾಡಿ, ನೇಮಕಾತಿ ಅವ್ಯವಹಾರದ ಬಗ್ಗೆ ಬಂಡಾಯ ತಂಡದ ಮಾರ್ಗದರ್ಶನದಲ್ಲೇ ಪರೀಕ್ಷೆಗೆ ಕುಳಿತ ಒಬ್ಬ ಅಭ್ಯರ್ಥಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ರಸಗೊಬ್ಬರ ಸರಿಯಾಗಿ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ಇಪ್ಕೋ ಕಂಪನಿಗೆ ಪ್ರವಾಸ ಮಾಡಿದ್ದು, ಬಳಿಕ ಕಾಶಿಗೆ ಹೋಗಿದ್ದು ನಿಜ. ನಿಯಮಾವಳಿಗಳ ಪ್ರಕಾರ ಬಜೆಟ್‌ನಲ್ಲಿ ಹಣ ಇಟ್ಟಿರುವುದಕ್ಕಿಂತ ಒಂದು ರೂಪಾಯಿಯೂ ಹೆಚ್ಚು ಖರ್ಚು ಮಾಡಿಲ್ಲ ಎಂದು ತಿಳಿಸಿದರು.
ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಶ್ ರೈ ಮನವಳಿಕೆ, ಕಾರ್ಯದರ್ಶಿ ಶಿವಪ್ರಸಾದ್ ನಡುತೋಟ, ಕೊಯಿಲ ಶಕ್ತಿ ಕೇಂದ್ರ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.