ಜಿಲ್ಲೆ

25ರಂದು ಶ್ರೀರಾಮ ವಿದ್ಯಾಕೇಂದ್ರದಲ್ಲಿ ರಾಷ್ಟ್ರೀಯ ವಿಚಾರಸಂಕಿರಣ : ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾಹಿತಿ ಅಣ್ಣಾಮಲೈ ಕೆ. ಉದ್ಘಾಟನೆ

ಸೌಮ್ಯ ಆರ್

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ, ಪ್ರಚಲಿತ ಭಾರತ-ಸತ್ಯ ಮಿಥ್ಯ ವಿಚಾರದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಫೆ.25ರಂದು ನಡೆಯಲಿದೆ ಎಂದು ವಿದ್ಯಾಕೇಂದ್ರದ ಸಂಸ್ಥಾಪಕ ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಬಂಟ್ವಾಳ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಪ್ರಚಲಿತ ಭಾರತದಲ್ಲಿ ನಡೆಯುವ ವಿದ್ಯಮಾನಗಳ ಸತ್ಯಾಂಶದ ಜ್ಞಾನ ಮೂಡಿಸುವ ಉದ್ದೇಶದಿಂದ ಈ ವಿಚಾರಸಂಕಿರಣ ಆಯೋಜಿಸಲಾಗಿದೆ ಎಂದರು.

ಡಾ.ಪ್ರಭಾಕರ ಭಟ್ ಕಲ್ಲಡ್ಕ ವಿಚಾರಸಂಕಿರಣದ ಅಗತ್ಯ, ಅನಿವಾರ್ಯತೆ ಬಗ್ಗೆ ಪ್ರಸ್ತಾವನೆಗೈಯಲಿದ್ದಾರೆ. ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕೆ. ಉದ್ಘಾಟಿಸಲಿದ್ದಾರೆ. ಇತಿಹಾಸ ಸಂಶೋಧಕ ಡಾ.ವಿಕ್ರಮ್ ಸಂಪತ್ ಕಲಿತ ಪಾಠಗಳು-ಅರಿಯದ ನೋಟಗಳು, ವಕೀಲೆ ಕ್ಷಮಾ ನರಗುಂದ-ನರೇಟಿವ್(ಕಥನ) ಹಾಗೆಂದರೇನು? ವಿಷಯದ ಕುರಿತು, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಟ್ಟಿ ಕಾರ್ಕಳ-ಇಸ್ರೇಲ್ ನಾವರಿಯದ ಸತ್ಯಗಳು ಕುರಿತು ವಿಚಾರ ಮಂಡಿಸುವರು. ಮಂಗಳೂರು ವಿವಿ ಸೇರಿ ರಾಜ್ಯದ ಹಲವು ವಿಶ್ವವಿದ್ಯಾಲಯಗಳ ಅನೇಕ ಪ್ರತಿನಿಧಿಗಳು ನೋಂದಣಿ ಮಾಡಿಸಿದ್ದು, ಅವರಿಗೆ ವಸತಿ, ಊಟೋಪಚಾರದ ವ್ಯವಸ್ಥೆಗಳಿರುತ್ತವೆ. 12 ವರ್ಷಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮ ಈ ಬಾರಿ ಇನ್ನಷ್ಟು ವ್ಯಾಪಕತೆ ಪಡೆದು 750ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರಕಟ್ಟೆ, ಉಪಪ್ರಾಂಶುಪಾಲರಾದ ಯತಿರಾಜ್ ಪೆರಾಜೆ ಮತ್ತು ಸುಕನ್ಯಾ ಉಪಸ್ಥಿತರಿದ್ದರು.