ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಸ್ಥಳವನ್ನು ಉಂಬಳಿಯಾಗಿ ನಮಗೆ ನೀಡಿದ್ದು, ಮನೆ ನಿರ್ಮಾಣ ಮಾಡಿದ್ದೇವೆ. ದೇವಸ್ಥಾನದ ಚಾಕರಿ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದೇವೆ. ದೇವಸ್ಥಾನದ ಅಭಿವೃದ್ಧಿ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ವಾಸ ಮಾಡಿಕೊಂಡಿರುವವರಿಗೆ ಮನೆಯ ವೆಚ್ಚ, ಪರ್ಯಾಯ ಜಾಗದ ವ್ಯವಸ್ಥೆ, ಹೊಸದಾಗಿ ನಿರ್ಮಾಣ ಮಾಡುವ ಸಮುಚ್ಚಯದಲ್ಲಿ ಮನೆ ನೀಡಬೇಕು ಎಂದು ಸ್ಥಳೀಯ ನಿವಾಸಿ ರಾಜೇಶ್ ಬನ್ನೂರು ಹೇಳಿದರು.
ಧಾರ್ಮಿಕ ದತ್ತಿ ಇಲಾಖೆಯ ಕಮಿಷನರ್ ಆಗಲಿ, ಆಡಳಿತ ಮಂಡಳಿಯವರಾಗಲಿ ನೋಟಿಸ್ ನೀಡಿಲ್ಲ. ಅನಽಕೃತವಾಗಿ ವಾಸವಾಗಿದ್ದರೂ ಕೂಡ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸುಪ್ರಿಂ ಕೋರ್ಟ್ ಹೇಳಿದೆ. ಮನೆ ಕೆಡವಿ ಹಾಕುತ್ತೇವೆ, ಪೊಲೀಸ್ ತರುತ್ತೇವೆ ಎಂಬ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಯಾವುದಕ್ಕೂ ನಾವು ಬಗ್ಗುವವರಲ್ಲ. ವಿಶ್ವ ಹಿಂದು ಪರಿಷತ್, ಆರ್‌ಎಸ್‌ಎಸ್‌ಗೆ ಹಿಂದುಗಳ ಮೇಲೆ ಆಗುತ್ತಿರುವ ಅನ್ಯಾಯದ ಬಗ್ಗೆ ದೂರು ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕುಂದಾಪುರ ಆಯುರ್ವೇದ ಕಾಲೇಜು ಪ್ರಾಂಶುಪಾಲ ಗಣೇಶ್ ಪ್ರಸನ್ನ ಮಾತನಾಡಿ, ೧೯೨೦ರಿಂದ ನಾಲ್ಕು ತಲೆಮಾರುಗಳು ವಾಸವಿದ್ದು, ಶಾಶ್ವತ ಮನೆ ಎಂದು ದೇವಸ್ಥಾನದ ವತಿಯಿಂದ ಅನುಮತಿ ಕೊಟ್ಟಿದ್ದಾರೆ. ೧೬ ಸೆಂಟ್ಸ್ ಜಾಗದಲ್ಲಿ ಕಟ್ಟಡಗಳನ್ನು ಕಟ್ಟಿಕೊಂಡು ಖಾತೆಯನ್ನು ಹೊಂದಿ ೧೦೦ ವರ್ಷಗಳಿಂದ ತೆರಿಗೆ ಪಾವತಿಸುತ್ತಿದ್ದೇವೆ. ಏಕಾಏಕಿ ತೆರವುಗೊಳಿಸುತ್ತೇವೆ ಎನ್ನುವುದು ಸರಿಯಲ್ಲ. ವಕೀಲರ ಮೂಲಕ ನೋಟೀಸ್ ನೀಡಲಾಗಿದ್ದು, ಸಂಬಂಧಪಟ್ಟವರಿಗೆ ಈಗಾಗಲೇ ಲಭಿಸಿದೆ. ತೆರಿಗೆ ಕಟ್ಟುತ್ತಿರುವುದರಿಂದ ಶೇ.೫೦ರಷ್ಟು ಹಕ್ಕು ನಮಗೂ ಇದೆ ಎಂದು ತಿಳಿಸಿದರು. ವಕೀಲ ವಿಜಯ ರಾಘವೇಂದ್ರ, ರಾಜಾರಾಮ ಭಟ್, ವಸಂತಿ ರಾಜರಾಮ ಭಟ್ ಉಪಸ್ಥಿತರಿದ್ದರು.
ತಡಬಡಾಯಿಸಿದರು
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಹಾಗೂ ಸ್ಥಳೀಯ ಶಾಸಕರು ಪೊಲೀಸ್ ವ್ಯವಸ್ಥೆ ಬಳಸಿ ಜೆಸಿಬಿ ನುಗ್ಗಿಸಿ ಮನೆ ಕೆಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದರು. ಇದರ ಬಗ್ಗೆ ಸ್ಪಷ್ಟತೆಯನ್ನು ಮಾಧ್ಯಮವರು ಹೇಳಿದಾಗ ಮನೆಗೆ ಬಂದು ಮಾತಾಡಿಲ್ಲ ಹಾಗೂ ಬೆದರಿಕೆಯನ್ನು ಹಾಕಿಲ್ಲ. ಮಾಧ್ಯಮಗಳಿಗೆ ನೀಡಿದ ಹೇಳಿಯಲ್ಲಿ ಹೇಳಿದ್ದಾರೆ ಎಂದರು. ಮಾಧ್ಯಮದ ಮುಂದೆ ಅಂತಹ ಯಾವ ವಿಚಾರವನ್ನೂ ಪ್ರಸ್ತಾಪಿಸಿಲ್ಲ ಎನ್ನುತ್ತಿದ್ದಂತೆ ತಡಬಡಾಯಿಸಿ ಹೇಳಿಕೆಯನ್ನು ಹಿಂಪಡೆದುಕೊಂಡರು.