ಕಡಬ: ಸುಮಾರು 5 ವರ್ಷಗಳ ಹಿಂದೆ ಕರೋನ ಸಂದರ್ಭ ನಿಂತುಹೋಗಿದ್ದ ಕಡಬ ಜಾತ್ರೆ, ನಂತರದ ವರ್ಷಗಳಲ್ಲಿ ನಡೆಯದಿರುವುದಕ್ಕೆ ನಾವು ಕಾರಣರಲ್ಲ. ಶ್ರೀಕಡಂಬಳಿತ್ತಾಯ ಸ್ವಾಮಿಯ ಸಾನ್ನಿಧ್ಯವನ್ನು ಗೌರವಯುತವಾಗಿ ನಡೆಸಿಕೊಂಡರೆ ಈಗಲೂ ಕುಕ್ಕೆರಬೆಟ್ಟುವಿನಿಂದ ಭಂಡಾರ ಕೊಂಡೊಯ್ಯಲು ನಾವು ಸಿದ್ಧರಿದ್ದೇವೆ ಎಂದು ಕುಕ್ಕೆರಬೆಟ್ಟು ಮನೆತನದವರು ತಿಳಿಸಿದ್ದಾರೆ.
ಮನೆತನದ ಪ್ರಮುಖರಾದ ಸುರೇಂದ್ರ ನಾಕ್ ಕಡಬದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 4 ವರ್ಷಗಳ ಹಿಂದೆ ಕುಕ್ಕೆರೆಬೆಟ್ಟು ಮನೆತನದಲ್ಲಿ ಕಡಂಬಳಿತ್ತಾಯ ಸ್ವಾಮಿ, ಕುಟುಂಬದ ನಾಗದೇವರು ಮತ್ತು ಇತರ ದೈವಗಳ ಜೀರ್ಣೋದ್ಧಾರದ ಬಗ್ಗೆ ನಡೆದ ಪ್ರಶ್ನಾಚಿಂತನೆಯ ಸಂದರ್ಭ ಸ್ಥಳಕ್ಕೆ ಬಂದ ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳಿಗೆ ಜ್ಯೋತಿಷಿಗಳೇ ವಿವರಣೆ ನೀಡಿದ್ದರು. ಭಂಡಾರ ಇಡುವ ಕಡಬ ಮಾಡದಲ್ಲಿ ಶುದ್ಧಿ ಕಲಶ ಆಗದೆ ಜಾತ್ರೆ ನಡೆಯುವುದು, 2 ಮನೆಗಳ ಭಂಡಾರ ಬಾರದೆ ಇರುವುದು, ಭಂಡಾರದ ಮನೆತನದ ಸಾನ್ನಿಧ್ಯಗಳಿಗೆ ಹೇಳಿಕೆ ನೀಡದಿರುವುದು ಇತ್ಯಾದಿ ಮಾಡದ ಹಲವು ಪದ್ಧತಿಗಳ ನ್ಯೂನ್ಯತೆ ಬಗ್ಗೆ ವಿವರಿಸಿದ್ದರು. ಕಡಂಬಳಿತ್ತಾಯ ಸ್ವಾಮಿಯ ಸಾನ್ನಿಧ್ಯಕ್ಕೆ ಗೌರವಯುತವಾಗಿ ನಡೆದುಕೊಳ್ಳಬೇಕಾಗಿರುವ ಅಂಶಗಳನ್ನೂ ಮನವರಿಕೆ ಮಾಡಿದ್ದರು ಎಂದರು.
ಕೆಲ ದಿನಗಳ ನಂತರ ಮಾಡದಲ್ಲಿ ನಡೆದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದ ವಿಚಾರಗಳನ್ನು ಪ್ರಸ್ತಾಪಿಸಿ, ಕಡಂಬಳಿತ್ತಾಯ ಸ್ವಾಮಿಯ ಬಗ್ಗೆ ಕುಕ್ಕೆರೆಬೆಟ್ಟುವಿನಲ್ಲಿ ನಡೆದ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದ ಅಂಶ ಪುನಃವಿಮರ್ಶಿಸಬೇಕು ಎಂದು ತಿಳಿಸಿದ್ದೆವು. 2024 ಅಕ್ಟೋಬರ್‌ನಲ್ಲಿ ಕುಕ್ಕೆರೆಬೆಟ್ಟುವಿಗೆ ಆಗಮಿಸಿದ ಜಾತ್ರಾ ಸಮಿತಿಯವರು ಮುಂದಿನ ದಿನಗಳಲ್ಲಿ ಜಾತ್ರೋತ್ಸವ ಬಗ್ಗೆ ಚರ್ಚಿಸಿದಾಗ ಆ ಸಂದರ್ಭ ನಾವು ಭಂಡಾರ ತರುವುದಿಲ್ಲ ಎಂದು ಹೇಳಿಲ್ಲ. ಕುಕ್ಕೆರೆಬೆಟ್ಟು ಕುಟುಂಬದ ಕುಲ ಪುರೋಹಿತರು ಭಂಡಾರ ತರಲು ಬಿಡುತ್ತಿಲ್ಲ ಎಂದು ಅವರ ಮೇಲೂ ಆಪಾದನೆ ಮಾಡುತ್ತಿರುವುದು ಸತ್ಯಕ್ಕೆ ದೂರವಾದ ವಿಷಯ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ತಮ್ಮಯ್ಯ ನಾಕ್, ಬಾಲಕೃಷ್ಣ ನಾಕ್, ಸುರೇಶ್ ನಾಕ್, ಶ್ರೀಕಾಂತ್ ನಾಕ್, ವೈಶಾಕ್ ನಾಕ್, ರಘುರಾಮ್ ನಾಕ್, ಮುಖೇಶ್ ನಾಕ್, ಸುನೀಲ್ ನಾಕ್, ಅರ್ಚಕ ಗೋಪಾಲಕೃಷ್ಣ ಕೆದಿಲಾಯ ಮೊದಲಾದವರು ಇದ್ದರು.
ಸೋಣ ನಡಾವಳಿಗೆ ದಿನ ನಿಗದಿ
ಜ.13ರಂದು ಸೋಣ ನಡಾವಳಿ ನಡೆಸುವ ಬಗ್ಗೆ ಮುದ್ರಿಸಿರುವ ಆಮಂತ್ರಣ ಪತ್ರಿಕೆ ಗಮನಕ್ಕೆ ಬಂದಿದೆ. ಆ ಆಮಂತ್ರಣ ಪತ್ರದಲ್ಲಿ ಪೂರ್ವ ಪದ್ಧತಿಯಂತೆ ಸೋಣ ನಡಾವಳಿ ನಡೆಸುವುದಾಗಿ ಮುದ್ರಿಸಲಾಗಿದೆ. ಪೂರ್ವ ಪದ್ಧತಿ ಎಂದು ಹೇಳಬೇಕಾದರೆ ಸಂಬಂಧಪಟ್ಟ ಮನೆತನದಿಂದ ಭಂಡಾರ ಬಂದು ನೇಮೋತ್ಸವ ನಡೆಯಬೇಕು. ಆ ಆಮಂತ್ರಣ ಪತ್ರದಲ್ಲಿ ಕಡಬ ಮಾಡದಿಂದ ಕಡಂಬಳಿತ್ತಾಯ ಸ್ವಾಮಿಯ ಭಂಡಾರ ಹೊರಡುವುದೆಂದು ಬರೆಯಲಾಗಿದೆ. ಕಡಂಬಳಿತ್ತಾಯ ಸ್ವಾಮಿಯ ಭಂಡಾರ ಪೂರ್ವ ಪದ್ಧತಿಯಂತೆ ಕುಕ್ಕೆರೆಬೆಟ್ಟು ಸ್ವಾಮಿಯ ಚಾವಡಿಯಿಂದ ಬರುತ್ತಿತ್ತೇ ಹೊರತು ಕಡಬ ಮಾಡ ಆಗಲಿ ಇನ್ಯಾವುದೇ ಮನೆಯಿಂದ ಬರುತ್ತಿರಲಿಲ್ಲ. ಕಡಬ ಜಾತ್ರೆ ಮತ್ತು ಸೋಣ ನಡಾವಳಿಗೆ ಪೂರ್ವ ಪದ್ಧತಿಯಂತೆ ಕಡಂಬಳಿತ್ತಾಯ ಸ್ವಾಮಿಯ ಪಾತ್ರಿ ಕುಕ್ಕೆರೆಬೆಟ್ಟು ಮನೆತನದವರೇ ಆಗಿರುತ್ತಾರೆ ಹೊರತು ಬೇರೆಯವರು ಅಲ್ಲ. ಸ್ವಾಮಿಗೆ ಪಾತ್ರಿಯಾಗುವ ಅರ್ಹತೆಯೂ ಸೋಣ ನಡಾವಳಿಯಲ್ಲಿ ಬೂಳ್ಯ ಸಂಪ್ರದಾಯದಲ್ಲಿ ನೀಡಲಾಗುತ್ತದೆ ಎಂದು ವಿವರಿಸಿದರು.