ಜಿಲ್ಲೆ

ಮಾಜಿ ಶಾಸಕರ ಕುರಿತು ಸುಳ್ಳು ಹೇಳಿಕೆ - ಗ್ರಾಪಂ ಮಾಜಿ ಅಧ್ಯಕ್ಷ ಅಮ್ಮಬ್ಬ ಶೌಕತ್ ಆಲಿ ಆರೋಪ

Mangaluru - Nishantha Narayana

ಪುತ್ತೂರು: ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಅಕ್ರಮ ಸಕ್ರಮ ಬೈಠಕ್‌ನಲ್ಲಿ ಟ್ಯಾಕ್ಸ್ ಕಲೆಕ್ಷನ್ ಎನ್ನುವ ಶಬ್ದವನ್ನು ಉಚ್ಚರಿಸಿದ್ದಲ್ಲದೆ ಕೆಲವು ವಿಚಾರವನ್ನು ಮೈಕ್ ಮುಂದೆ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನು ಸರಿಯಾಗಿ ಸ್ಪಷ್ಟಪಡಿಸುವ ಕಾರ್ಯವನ್ನು ಶಾಸಕರು ಮಾಡಬೇಕು ಎಂದು ಆಗ್ರಹಿಸಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಮ್ಮಬ್ಬ ಶೌಕತ್ ಆಲಿ ಮಾಜಿ ಶಾಸಕರ ಬಗ್ಗೆ ಸುಳ್ಳು ಆರೋಪ ಮಾಡುವ ಜತೆಗೆ ರಾಜಕೀಯ ಪ್ರೇರಿತವಾದ ಹೇಳಿಕೆಯನ್ನು ನೀಡಲಾಗಿದೆ ಎಂದು ಆರೋಪಿಸಿದರು.

ಅಕ್ರಮ-ಸಕ್ರಮ ಹೊಸ ಅರ್ಜಿ ಸಲ್ಲಿಗೆ ೨೦೨೩ ಮಾರ್ಚ್ ೩೧ ಕೊನೆಯ ದಿನವಾಗಿದ್ದು, ೨೦೨೩ ಮಾರ್ಚ್ ೨೬ರಂದು ಮಾಜಿ ಶಾಸಕರ ಅಧ್ಯಕ್ಷತೆಯಲ್ಲಿ ಕೊನೆಯ ಬೈಠಕ್ ನಡೆದಿದೆ. ಶಕುಂತಳಾ ಟಿ. ಶೆಟ್ಟಿ ಹಾಗೂ ಸಂಜೀವ ಮಠಂದೂರು ಇದೇ ಊರಿನವರಾಗಿದ್ದು, ೯೪ಸಿ, ೯೪ಸಿಸಿ ಮತ್ತು ಅಕ್ರಮ-ಸಕ್ರಮ ಕಡತಗಳನ್ನು ವಿಲೇವಾರಿ ಮಾಡಿದ ದಾಖಲೆಗಳಿದೆ. ಮಾಜಿ ಶಾಸಕರ ರಾಜಕೀಯ ಜೀವನದ ಬಗ್ಗೆ ೩೫ ವರ್ಷಗಳಿಂದ ಹಿರೇಬಂಡಾಡಿಯ ಜನರು ತಿಳಿದಿದ್ದು, ನೀವು ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ. ಅಕ್ರಮ-ಸಕ್ರಮ ಕಡತಗಳನ್ನು ಅಽಕಾರಿಗಳು ಸಿದ್ಧಪಡಿಸಿದ ಬಳಿಕ ಶಾಸಕರ ಕಚೇರಿಗೆ ತೆರಳಬೇಕಾದ ಅವಶ್ಯಕತೆಯನ್ನು ಸ್ಪಷ್ಟಪಡಿಸಬೇಕಾಗಿದೆ. ಅಕ್ರಮ-ಸಕ್ರಮ ವಿಚಾರದ ಬಗ್ಗೆ ಮಾತನಾಡುವ ಮೊದಲು ಶಾಸಕರು ಇನ್ನಷ್ಟು ಅಧ್ಯಯನ ನಡೆಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಶಾಸಕರು ಉಪ್ಪಿನಂಗಡಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿಯನ್ನು ದೂರವಾಣಿ ಮೂಲಕ ಪ್ರಶ್ನಿಸುವ ಸಂದರ್ಭ ತಾನು ನಿಮ್ಮ ಅಭಿಮಾನಿ ಎನ್ನುತ್ತಿದ್ದಂತೆ ಧ್ವನಿಯಲ್ಲಿ ಬದಲಾವಣೆಯಾಗಿದೆ. ಕೋಡಿಂಬಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೈಠಕ್‌ನಲ್ಲಿ ಮಾಡಿದ ಆರೋಪಗಳ ಬಗ್ಗೆ ವಿಮರ್ಶೆ ಮಾಡಬೇಕು. ಒಂದೂವರೆ ವರ್ಷಗಳಿಂದ ಅಭಿವೃದ್ಧಿ ವಿಚಾರದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರೇ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಡುತ್ತಿರುವ ಆರೋಪಗಳನ್ನು ಮರೆಮಾಚಲು ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು. ಪಂಚಾಯಿತಿ ಅಧ್ಯಕ್ಷ ಸದಾನಂದ ಶೆಟ್ಟಿ, ಸದಸ್ಯ ನಿತಿನ್, ದಯಾನಂದ ಸರೋಳಿ ಉಪಸ್ಥಿತರಿದ್ದರು.

ಪ್ರಶ್ನೆಗೆ ಕಕ್ಕಾಬಿಕ್ಕಿ!

ಹಿಂದಿನ ಶಾಸಕರ ಅವಽಯಲ್ಲಿ ಎಷ್ಟು ಕಡತ ವಿಲೇವಾರಿಯಾಗಿದೆ? ಎಷ್ಟು ಕಡತ ಉಳಿದುಕೊಂಡಿದೆ? ಎಂಬ ಮಾಹಿತಿಯನ್ನು ಸುದ್ದಿಗೋಷ್ಠಿಯಲ್ಲಿ ಕೇಳಿದಾಗ ಮಾಹಿತಿ ನೀಡಲು ಸಾಧ್ಯವಾಗದೇ ಕಕ್ಕಾಬಿಕ್ಕಿಯಾಗಿದ್ದರು. ಟ್ಯಾಕ್ಸ್ ಕಲೆಕ್ಷನ್ ಎಂದರೆ ಸರ್ಕಾರಕ್ಕೆ ಕಟ್ಟುವ ತೆರಿಗೆಯ ವಿಚಾರ ಆಗಿರಬಹುದೆ ಎಂಬುದನ್ನು ಕೇಳಿದಾಗಲೂ ಅದನ್ನು ಶಾಸಕರು ಉತ್ತರಿಸಬೇಕೆಂದು ಜಾರಿಕೊಂಡಿದ್ದಾರೆ.