ಕಡಬ: ಪ್ರಖಂಡ ವಿಹಿಂಪ, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಹಾಗೂ ಬಿಳಿನೆಲೆ ವಲಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಧರ್ಮ ಜಾಗೃತಿಗಾಗಿ ನಮ್ಮ ನಡೆ ಕುಕ್ಕೆ ಸುಬ್ರಹ್ಮಣ್ಯನೆಡೆಗೆ ಎನ್ನುವ ಘೋಷವಾಕ್ಯದೊಂದಿಗೆ ಆರನೇ ವಷರ್ದ ಪಾದಯಾತ್ರೆ ಹಾಗೂ ಹೊರೆಕಾಣಿಕೆ ಸಮರ್ಪಣೆ ಡಿಸೆಂಬರ್ 6ರಂದು ನಡೆಯಲಿದೆ ಎಂದು ವಿಹಿಂಪ ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೀಳಾ ಲೋಕೇಶ್ ಕಾಣಿಯೂರು ಹೇಳಿದರು.
ಸೋಮವಾರ ಕಡಬದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಮುಂಜಾನೆ ಪಾದಯಾತ್ರೆ ಪ್ರಾರಂಭವಾಗಲಿದೆ. ಬಾಲಕೃಷ್ಣ ಡಿ.ಕೋಲ್ಪೆ ಚಾಲನೆ ನೀಡಲಿದ್ದಾರೆ. 30ಕ್ಕೂ ಹೆಚ್ಚು ಭಜನಾ ತಂಡಗಳ ಕುಣಿತ ಭಜನೆಯೊಂದಿಗೆ ಪಾದಯಾತ್ರೆ ಸಾಗಲಿದೆ. 30ಕ್ಕೂ ಹೆಚ್ಚು ಭಜನಾ ಮಂದಿರ ಹಾಗೂ ದೇವಸ್ಥಾನಗಳಲ್ಲಿ ಹಸಿರುವಾಣಿ ಸಂಗ್ರಹಿಸಿ ಕೊಂಡೊಯ್ಯಲಾಗುವುದು. ಸುಬ್ರಹ್ಮಣ್ಯ ಸ್ನಾನಘಟ್ಟದಲ್ಲಿ ಶುಚಿರ್ಭೂತರಾಗಿ ಬಳಿಕ ಅಲ್ಲಿಂದ ದೇವಸ್ಥಾನಕ್ಕೆ ಪಾದಯಾತ್ರೆ ಸಾಗಲಿದೆ. ಬಳಿಕ ಧಾರ್ಮಿಕ ಸಭೆ ನಡೆಯಲಿದೆ ಎಂದರು.
ಕಡಬ ತಾಲೂಕು ಬಜರಂಗದಳ ಸಂಯೋಜಕ ಅಶ್ವಿತ್ ಕಂಡಿಗ, ವಿಹಿಂಪ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಜಯಂತ್ ಕಲ್ಲುಗುಡ್ಡೆ, ಧರ್ಮಪ್ರಸಾರ ಪ್ರಮುಖ್ ಪ್ರಮೋದ್ ರೈ ನಂದುಗುರಿ, ಭಜನಾ ಪರಿಷತ್ ಕಾರ್ಯದರ್ಶಿ ರಮೇಶ್ ಅಡೀಲು ಮತ್ತಿತರರು ಉಪಸ್ಥಿತರಿದ್ದರು.