ಬೆಳ್ತಂಗಡಿ: ಬಾಂಗ್ಲಾ ಹಿಂದುಗಳ ಪರ ಡಿ.4ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನಲ್ಲಿ ನಡೆಯುವ ಪ್ರತಿಭಟನಾ ಮೆರವಣಿಗೆಗೆ ಬೆಳ್ತಂಗಡಿ ತಾಲೂಕು ಘಟಕ ಸಂಪೂರ್ಣ ಬೆಂಬಲ ನೀಡುತ್ತಿದ್ದು, 2000ಕ್ಕೂ ಹೆಚ್ಚು ಜನರು ಭಾಗವಹಿಸುತ್ತಾರೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಬೆಳ್ತಂಗಡಿ ಪ್ರವಾಸ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದು ಹಿತ ರಕ್ಷಣಾ ಸಮಿತಿ ಕರೆ ಕೊಟ್ಟ ಹೋರಾಟದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ತಾಲೂಕು ಘಟಕ ಸಂಪೂರ್ಣ ಸಹಕಾರದ ಜತೆಗೆ ಹೋರಾಟದಲ್ಲಿ ಭಾಗವಹಿಸುತ್ತಿದ್ದೇವೆ. ಎರಡು ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಬೆಳ್ತಂಗಡಿಯಿಂದ ಭಾಗವಹಿಸುತ್ತೇವೆ. ಅನೇಕ ಸಾಧು-ಸಂತರು, ಸ್ವಾಮೀಜಿಗಳು, ಹಿಂದು ಪರ ಯೋಚನೆ ಮಾಡುವ ಎಲ್ಲರೂ ಸಾಮೂಹಿಕವಾಗಿ ರಸ್ತೆಗಿಳಿದು ಬಾಂಗ್ಲಾದ ಹಿಂದುಗಳ ಪರ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ ಎಂದರು.
ಬೆಳ್ತಂಗಡಿ ಮಂಡಲ ಅಧ್ಯಕ್ಷ ಶೀನಿವಾಸ್ ರಾವ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.