ಪುತ್ತೂರು: ನೆಲ್ಯಾಡಿ ಸರ್ಕಾರಿ ಶಾಲೆಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಎರಡೂ ತರಗತಿಗಳನ್ನು ಮಾಡುತ್ತಿರುವ ಶಿಕ್ಷಕರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಮಾಹಿತಿಗಳು ಬರುತ್ತಿದ್ದು, ಶಾಲಾಭಿವೃದ್ಧಿ ಸಮಿತಿ ಹಾಗೂ ಊರಿನವರಲ್ಲಿ ಕೇಳದೆ ಅದನ್ನು ಪ್ರಸಾರ ಮಾಡುತ್ತಿರುವುದು ಸರಿಯಲ್ಲ ಎಂದು ನೆಲ್ಯಾಡಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿನೋಜ್ ವಿವಿ ಹೇಳಿದರು.
ವಿಜ್ಞಾನ ಶಿಕ್ಷಕರಾದ ಅವರು ಸದ್ಯ ಮುಖ್ಯಶಿಕ್ಷಕರ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಕೆಲಸವನ್ನು ನಿರ್ವಹಿಸುತ್ತಿರುವ ಜತೆಗೆ ಶಿಕ್ಷಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಶಾಲೆಯ ವಿದ್ಯಾರ್ಥಿಗಳಿಗೆ ಬೆಳಗ್ಗೆ ೭.೩೦ರಿಂದ ೯.೪೫ರವೆಗೆ ಹಾಗೂ ಶಾಲೆ ಬಿಟ್ಟ ಬಳಿಕ ೬ಗಂಟೆವರೆಗೆ ವಿಶೇಷ ತರಬೇತಿಯನ್ನು ನೀಡುತ್ತಿದ್ದಾರೆ. ಶಾಲೆಯಲ್ಲಿ ೧೩ ಮಂದಿ ಶಿಕ್ಷಕರಿದ್ದರೂ ಪುರುಷ ಶಿಕ್ಷಕ ಓರ್ವ ವ್ಯಕ್ತಿ ಮಾತ್ರ ಇದ್ದು, ಶಾಲೆಯ ವಿವಿಧ ವಿಚಾರಕ್ಕೆ ಅವರೇ ಓಡಾಡುವಂತಾಗಿದೆ. ಜಿಲ್ಲೆಯ ವಿವಿಧ ಕಡೆಗೆ ಸಂಪನ್ಮೂಲ ವ್ಯಕ್ತಿಯಾಗಿ ಹೋಗುತ್ತಿದ್ದಾರೆ. ವಿವಿಧ ದಾನಿಗಳನ್ನು ಸಂಪರ್ಕಿಸಿ ಶಾಲೆಗೆ ಪ್ರಯೋಗಾಲಯ, ಗ್ರಂಥಾಲಯಕ್ಕೆ ಪುಸ್ತಕವನ್ನು ತಂದಿದ್ದಾರೆ. ರಾಜ್ಯದ ೧೨೧ ಶಾಲೆಗಳು ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಿದ್ದು, ಇದನ್ನು ತರುವಲ್ಲಿಯೂ ಅವರ ಶ್ರಮ ಪ್ರಮುಖವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾಲೆಯ ಬಗ್ಗೆ ಇರುವ ಸದಭಿಪ್ರಾಯಕ್ಕೆ ಮಸಿ ಬಳಿಯುವ ಹುನ್ನಾರ ನಡೆಸಲಾಗಿದೆ. ಎಸ್.ಡಿ.ಎಂ.ಸಿ., ಶಿಕ್ಷಕರ, ಪಾಲಕರ, ಊರ ಜನತೆಯ ಅವಿರತ ಶ್ರಮವನ್ನು ತಗ್ಗಿಸಿ, ಸರ್ಕಾರಿ ಶಾಲೆಯ ಏಳಿಗೆಯನ್ನು ಕುಂಠಿತಗೊಳಿಸುವ ಹುನ್ನಾರ ಮಾಡಲಾಗಿದೆ. ಕೆಲವು ದುಷ್ಟಶಕ್ತಿಗಳು ಶಾಲೆಯ ಶೈಕ್ಷಣಿಕ ವ್ಯವಸ್ಥೆಯನ್ನು ಹಾಳುಮಾಡಲು ಪ್ರಯತ್ನ ಪಡುತ್ತಿರುವುದು ವಿಷಾದನೀಯ ಎಂದರು.
ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಎಸ್.ಡಿ.ಎಂ.ಸಿ ಸದಸ್ಯ ಪ್ರಸಾದ್ ಕೆ. ಪಿ., ಮಾಜಿ ಅಧ್ಯಕ್ಷ ಇಸ್ಮಾಯಿಲ್ ಎನ್., ನಿವೃತ್ತ ದೈಹಿಕ ಶಿಕ್ಷಕಾ ಜನಾರ್ದನ ಟಿ ಉಪಸ್ಥಿತರಿದ್ದರು.