ಬೇಲೂರು : ಬೇಲೂರು ತಾಲೂಕಿನ ಹಳೇಬೀಡು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿಗೆ ಕೊಲೆ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ವಿಶ್ವ ಮಾನವ ಟ್ರಸ್ಟ್ ಅಧ್ಯಕ್ಷೆ ಹಾಸನದ ಅನ್ನಪೂರ್ಣಗೌಡ ಒತ್ತಾಯಿಸಿದರು.
ಸ್ವಾಮೀಜಿ ರಾಜ್ಯಾದ್ಯಂತ ಉತ್ತಮ ಹೆಸರು ಪಡೆದಿದ್ದಾರೆ. ಜಾತಿ, ಮತ ಮೀರಿ ಹಲವು ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡಿದ್ದಾರೆ. ಇಂತಹ ಸ್ವಾಮೀಜಿಯವರಿಗೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದು ಖಂಡನೀಯ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸ್ವಾಮೀಜಿ ಪರವಾಗಿ ಈವರೆಗೆ ಶಾಸಕರಾಗಲಿ, ಸಂಘ ಸಂಸ್ಥೆಗಳಾಗಲಿ ಯಾವುದೇ ಹೇಳಿಕೆ ನೀಡಿಲ್ಲ. ಕ್ರಮಕ್ಕೆ ಮುಂದಾಗಿಲ್ಲ ಎಂಬುದು ಬೇಸರ ತರಿಸಿದೆ ಎಂದರು. ಸರ್ಕಾರ ಈಗಲಾದರೂ ಪುಷ್ಪಗಿರಿ ಸ್ವಾಮೀಜಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಟ್ರಸ್ಟ್ ಪದಾಧಿಕಾರಿಗಳಾದ ನಾಗರತ್ನಾ, ಸವಿತಾ, ಭವ್ಯಾ, ಜ್ಯೋತಿ, ರೇಣುಕಾ ಇತರರು ಇದ್ದರು.