ಜಿಲ್ಲೆ

ಬೆಂಗಳೂರಿನಲ್ಲಿ ಜು.29ರಂದು ವಸತಿ ನಿಲಯಗಳ ಕಾರ್ಮಿಕರ ಪ್ರತಿಭಟನೆ

reportermys


ಮೈಸೂರು: ವಸತಿ ನಿಲಯಗಳ ಕಾರ್ಮಿಕರ ವೇತನವನ್ನು ಹೆಚ್ಚಿಸಿ ಇತರ ಶಾಸನಬದ್ಧ ಸೌಕರ್ಯಗಳಿಗೆ ಆಗ್ರಹಿಸಿ ಜು.29ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನ ಧರಣಿ ನಡೆಸಲಾಗುತ್ತಿದೆ ಎಂದು ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ ತಿಳಿಸಿದೆ.

ರಾಜ್ಯ ಸರ್ಕಾರದ ವಿವಿಧ ವಸತಿ ನಿಲಯಗಳಲ್ಲಿ ಡಿ ಗ್ರೂಪ್ ಹುದ್ದೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಹಲವಾರು ವರ್ಷಗಳಿಂದ ಅತ್ಯಂತ ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ಬಹುಪಾಲು ಮಹಿಳೆಯರಿದ್ದು, ಕಾಯಂ ನೌಕರರಿಗೆ ಕೊಡುವಷ್ಟು ವೇತನ ಸಹಿತ ಇತರ ಯಾವುದೇ ಸೌಲಭ್ಯಗಳನ್ನೂ ನೀಡುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಮಿಕ ಇಲಾಖೆಯು ಕಡ್ಡಾಗೊಳಿಸಿರುವ ಕಾನೂನು ಬದ್ಧ ವಾರದ ರಜೆ, ರಾಷ್ಟ್ರೀಯ ಹಬ್ಬಗಳ ರಜೆಗಳನ್ನು ನೀಡುತ್ತಿಲ್ಲ. ಪಿಎಫ್, ಇಎಸ್‌ಐ ವಂತಿಗೆಯ ಸಂಪೂರ್ಣ ಹಣವನ್ನು ಕಾರ್ಮಿಕರ ಖಾತೆಗಳಿಗೆ ಪಾವತಿಸುತ್ತಿಲ್ಲ. ಕೆಲವು ಕಡೆ ನಿಗದಿಪಡಿಸಿದಷ್ಟು ವೇತನವನ್ನೂ ಕೊಡುತ್ತಿಲ್ಲ. 8 ಗಂಟೆಗಿಂತ ಹೆಚ್ಚಿನ ಅವಧಿಯ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ವೇತನ ಪಾವತಿ ಚೀಟಿ ನೀಡುತ್ತಿಲ್ಲ. ಪ್ರತಿ ತಿಂಗಳು ನಿಗದಿತ ದಿನದಲ್ಲಿ ವೇತನ ಪಾವತಿ ಆಗುತ್ತಿಲ್ಲ. ಈಗಲೂ ಹಲವು ಜಿಲ್ಲೆ ಮತ್ತು ತಾಲೂಕುಗಳಲ್ಲಿ 6- 8 ತಿಂಗಳಿಂದ ವೇತನ ನೀಡಿಲ್ಲ. ಇಂತಹ ಹತ್ತು ಹಲವು ಸಮಸ್ಯೆಗಳು ಪರಿಹಾರವಾಗಬೇಕಿದೆ ಎಂದು ಒತ್ತಾಯಿಸಿದರು.

ಬೇಡಿಕೆಗಳು: ವಸತಿ ನಿಲಯಗಳ ಹೊರಗುತ್ತಿಗೆ ಕಾರ್ಮಿಕರಿಗೆ ವೇತನವನ್ನು ಮಾಸಿಕ 39,950 ರೂ.ಗೆ ಹೆಚ್ಚಿಸಿ ತುಟ್ಟಿಭತ್ಯೆಯನ್ನು ಬೆಲೆ ಏರಿಕೆ ಮತ್ತು ಹಣದುಬ್ಬರವನ್ನು ಪರಿಗಣಿಸಿ ವೈಜ್ಞಾನಿಕವಾಗಿ ನಿಗದಿಪಡಿಸಬೇಕು. ಕಾನೂನುಬದ್ಧವಾಗಿ ವಾರದ ರಜೆ, ರಾಷ್ಟ್ರೀಯ ಹಬ್ಬಗಳ ರಜೆ, ಸಾಂದರ್ಭಿಕ ರಜೆ ನೀಡಬೇಕು. ರಜೆ ದಿನದಲ್ಲಿ ಕರ್ತವ್ಯ ನಿರ್ವಹಿಸಿದರೆ ಮತ್ತು 8 ಗಂಟೆಗಳ ನಂತರ ಹೆಚ್ಚು ಅವಧಿ ಕೆಲಸಕ್ಕೆ ಕಾರ್ಮಿಕ ಕಾಯ್ದೆಯನ್ವಯ ದುಪ್ಪಟ್ಟು ವೇತನ, ಲಾಕ್‌ಡೌನ್ ಅವಧಿಯ ವೇತನವನ್ನು ತಕ್ಷಣವೇ ಪಾವತಿಸಬೇಕು ಮುಂತಾದ ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಗುವುದು ಎಂದರು.
ಎಐಯುಟಿಐಸಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಮೇಟಿ, ಸಂಘದ ಜಿಲ್ಲಾ ಕಾರ್ಯದರ್ಶಿ ಮುದ್ದುಕೃಷ್ಣ, ಮುಖಂಡರಾದ ರಾಜೇಶ್, ಹರೀಶ್ ಇದ್ದರು.