ಮಂಡ್ಯ: ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವಂತೆ ಒತ್ತಾಯಿಸಿ ಡಿ.11ರಂದು ನಗರದಲ್ಲಿ ‘ವೋಟ್ ಫಾರ್ ಒಪಿಎಸ್’ ಪಾದಯಾತ್ರೆ ಅಭಿಯಾನ ಹಾಗೂ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿದೆ ಎಂದು ಎನ್.ಪಿ.ಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಬಿ.ಸಿದ್ದರಾಜು ಹೇಳಿದರು.
2006ರ ಏ.1ರಿಂದ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ಜಾರಿಗೆ ತಂದಿರುವ ಎನ್‌ಪಿಎಸ್ ನೌಕರರ ಸಂಧ್ಯಾ ಕಾಲದ ಬದುಕಿಗೆ ಮರಣ ಶಾಸನವಾಗಿದೆ. ಕಳೆದ 16 ವರ್ಷಗಳಲ್ಲಿ ನಿವೃತ್ತರಾದ ಎನ್‌ಪಿಎಸ್ ನೌಕರರಿಗೆ 900, 1000, 1200, 2000 ರೂ. ಈ ರೀತಿ ಪಿಂಚಣಿ ದೊರೆಯುತ್ತಿದ್ದು, ಇದು ನೌಕರರ ಸಂಧ್ಯಾಕಾಲದ ಬದುಕನ್ನು ಮಾನಸಿಕ ಯಾತನೆಗೆ ದೂಡುತ್ತಿದೆ. ಆದ್ದರಿಂದ ಈ ಯೋಜನೆಯ ರದ್ದತಿಗಾಗಿ ಮಾಡು ಇಲ್ಲವೇ ಮಡಿ ಹೋರಾಟ ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಪಾದಯಾತ್ರೆ ಅಂದು ಬೆಳಗ್ಗೆ 10 ಗಂಟೆಗೆ ರೈತ ಸಭಾಂಗಣದಿಂದ ಹೊರಟು ಜೆ.ಸಿ ವೃತ್ತದ ಮೂಲಕ ಆರ್.ಪಿ ರಸ್ತೆ, ಗಾಂಧಿಭವನ ಬಳಿಯ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಿ.ವಿ ರಸ್ತೆ ಮೂಲಕ ಸಂಚರಿಸಿ ಅಲ್ಲಿಂದ ಮತ್ತೆ ರೈತ ಸಭಾಂಗಣಕ್ಕೆ ತಲುಪಲಿದೆ. 11 ಗಂಟೆಗೆ ರೈತ ಸಭಾಂಗಣದಲ್ಲಿ ಜಿಲ್ಲಾ ಸಮಾವೇಶ ಆಯೋಜಿಸಿದ್ದು, ಶಾಸಕ ಎಂ.ಶ್ರೀನಿವಾಸ್‌ಗೆ ಮನವಿ ಪತ್ರ ಸಲ್ಲಿಸಲಾಗುವುದು. ಸಮಾವೇಶದಲ್ಲಿ ಹಾಲಿ ಮತ್ತು ಮಾಜಿ ಎಂಎಲ್‌ಸಿ, ಸಂಘದ ರಾಜ್ಯ ಘಟಕದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು. ಎಂ.ಎಲ್.ಕೃಷ್ಣೇಗೌಡ, ಎಂ.ವಿ.ಪುರುಷೋತ್ತಮ್, ರಘು, ಜಿ.ಎಸ್.ಸಿದ್ದರಾಜು, ಕೆಂಚರಂಗಯ್ಯ ಇದ್ದರು.