ಮಂಡ್ಯ: ಪಾಂಡವಪುರ ತಾಲೂಕು ಕ್ಯಾತನಹಳ್ಳಿ ಗ್ರಾಮದಲ್ಲಿ ಭೋವಿ ಜನಾಂಗದ ಮೇಲೆ ಕೆಲವರು ದೌರ್ಜನ್ಯ ನಡೆಸಿದ್ದು, ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಭಾರತೀಯ ಭೋವಿ(ಓಡ್) ಜನಾಂಗದ ಪರಿಷತ್ ಜಿಲ್ಲಾಧ್ಯಕ್ಷ ಟಿ.ಸಿ.ಗುರಪ್ಪ ಆಗ್ರಹಿಸಿದರು.
ಗ್ರಾಮದ ಸರ್ವೇ ನಂ. 66ರ ಜಮೀನಿನ ಪಕ್ಕದ ಸರ್ಕಾರಿ ಜಾಗದಲ್ಲಿ ಸುಮಾರು 50 ವರ್ಷದಿಂದ ಶವಸಂಸ್ಕಾರ ಮಾಡಲಾಗುತ್ತಿದೆ. ಈವರೆಗೆ ಯಾರಿಂದಲೂ ತೊಂದರೆಯಾಗಿರಲಿಲ್ಲ. ಆದರೆ ನ.1ರಂದು ಪುಟ್ಟರಾಮು ಮತ್ತು ಈತನ ಮಗ ಕೆಲ ಆಳುಗಳನ್ನು ಕರೆದುಕೊಂಡು ಬಂದು ಶವಸಂಸ್ಕಾರಕ್ಕೆ ಉಪಯೋಗಿಸುತ್ತಿದ್ದ ಜಮೀನಿಗೆ ತಂತಿ ಬೇಲಿ ಹಾಕಲು ಮುಂದಾಗಿದ್ದಾರೆ. ಇದನ್ನು ಪ್ರಶ್ನಿಸಿದ ಸಮುದಾಯದವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ದೌರ್ಜನ್ಯ ಸಂಬಂಧ ಮರುದಿನ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಆದರೆ ಈವರೆಗೆ ದೌರ್ಜನ್ಯ ಮಾಡಿದವರ ವಿರುದ್ಧ ಕ್ರಮವಾಗಿಲ್ಲ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಗಮನಹರಿಸಬೇಕು. ಜತೆಗೆ ಸರ್ಕಾರಿ ಜಾಗವನ್ನು ಸ್ಮಶಾನಕ್ಕೆ ಉಳಿಸಿಕೊಡಬೇಕೆಂದು ಮನವಿ ಮಾಡಿದರು.
ಮುಖಂಡರಾದ ಟಿ.ಜಿ.ಶಂಕರ್, ಅಂಕಯ್ಯ, ಶ್ರೀನಿವಾಸರಾಜ್, ಡಿ.ಮಂಜುನಾಥ್, ಜೈಕುಮಾರ್, ಗೋವಿಂದರಾಜ್, ದಿನೇಶ್ ಇದ್ದರು.