ಮಂಡ್ಯ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗದ ಪಾತ್ರ ಅತೀ ಮುಖ್ಯವಾದದ್ದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಪತ್ರಕರ್ತರ ಮತ್ತು ಮುದ್ರಣಕಾರರ ವಿತರಕರ ವಿವಿದ್ದೊದ್ದೇಶ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ದೀನ ದಲಿತರ, ದುರ್ಬಲರ, ಅಸಹಾಯಕರು, ನಿರ್ಗತಿಕರ ಬಗ್ಗೆ ವಿಶೇಷವಾದ ಸಾಮಾಜಿಕ ಕಾಳಜಿ ಇಟ್ಟುಕೊಂಡು ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಮಾಧ್ಯಮದ ಪಾತ್ರ ಮಹತ್ವದ್ದಾಗಿದೆ ಎಂದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಪ್ರಜಾಪ್ರಭುತ್ವ ಆಧಾರ ಸ್ತಂಭಗಳು. ಆದರೆ ಈ ಮೂರಿಗೂ ಆಧಾರ ಸ್ತಂಭ ಹಾಗೂ ಪ್ರಜಾಪ್ರಭುತ್ವದ ಬಹುದೊಡ್ಡ ನಾಲ್ಕನೇ ಸ್ತಂಭ ಪತ್ರಿಕಾರಂಗ. ಈ ನಿಟ್ಟಿನಲ್ಲಿ ಶಾಸಕಾಂಗ, ಕಾರ್ಯಾಂಗ ನ್ಯಾಯಾಂಗ ಸರಿಯಾಗಿ ಕೆಲಸ ನಿರ್ವಹಿಸುತ್ತಿವೆಯೇ ಎನ್ನುವುದನ್ನು ವಿಶ್ಲೇಷಣೆ ಮಾಡುವ ಜವಾಬ್ದಾರಿ ಪತ್ರಿಕೆ ಹಾಗೂ ಪತ್ರಕರ್ತರ ಮೇಲಿದೆ. ಪತ್ರಕರ್ತರಲ್ಲಿ ಆರೋಗ್ಯಕರವಾದ ಚಿಂತನೆ ಹಾಗೂ ಆರೋಗ್ಯಕರವಾದ ಮನಸ್ಸು, ದೇಹ ಇರಬೇಕು. ಆವಾಗ ಮಾತ್ರ ಪತ್ರಿಕೆಯ ಮೂಲಕ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯ ಎಂದರು.
ಅಧಿಕಾರಿಗಳು ಸರ್ಕಾರಿ ಸಂಬಳ ತೆಗೆದುಕೊಂಡು ಕೆಲಸ ಮಾಡುತ್ತಾರೆ. ಹಾಗಾಗಿ ಅವರದ್ದು ಕೆಲಸವೇ ಹೊರತು ಸೇವೆಯಲ್ಲ. ನಿಜವಾಗಿಯೂ ಸಾರ್ವಜನಿಕರ ಸೇವೆ ಎಂದರೆ ಪತ್ರಕರ್ತರ ಕೆಲಸ. ಮಾತ್ರವಲ್ಲದೆ ಬರವಣಿಗೆಯಲ್ಲಿ ಸಾಮಾಜಿಕ ಹೊಣೆಗಾರಿಕೆ ಹಾಗೂ ಸಾಮಾಜಿಕ ಗುಣ ಇರುತ್ತದೆ. ಈ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತನ್ನ ಬರಹದ ಮೂಲಕ ನ್ಯಾಯ ಸಿಗುತ್ತದೆ. ಜೂ.1 ವಿಶೇಷವಾದ ದಿನ. ಪತ್ರಕರ್ತರ, ವೈದ್ಯರ, ವರ್ಷದ ಹೊಸ ಕಂದಾಯ ಹಾಗೂ ವಿಶೇಷವಾಗಿ ಮಂಡ್ಯ ಜಿಲ್ಲೆ ರಚನೆಯಾದ ದಿನ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಮಾತನಾಡಿ, ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಪತ್ರಕರ್ತರು ಪತ್ರಿಕೆಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸುತ್ತಾರೆ. ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದಲ್ಲಿ ಸರ್ಕಾರದಲ್ಲಿನ ಯೋಜನೆಗಳ ಮಾಹಿತಿ ಇರುತ್ತವೆ. ಅದನ್ನೆಲ್ಲಾ ತಿಳಿದುಕೊಂಡು ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಬೇಕು ಎಂದರು.
ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ, ಮಾಜಿ ಅಧ್ಯಕ್ಷ ಕೌಡ್ಲೆ ಚನ್ನಪ್ಪ, ನಾರಾಯಣಸ್ವಾಮಿ, ಕನ್ನಿಕಾ ನವೋದಯ ತರಬೇತಿ ಶಾಲೆಯ ಸಂಸ್ಥಾಪಕಿ ಕನ್ನಿಕಾ ಇತರರಿದ್ದರು.