ಮೊಳಕಾಲ್ಮೂರು: ಸಮಾಜದ ಅಂಕು-ಡೊಂಕು ತಿದ್ದುವ ಮಾಧ್ಯಮ ಕ್ಷೇತ್ರ ಬಹುದೊಡ್ಡ ಶಕ್ತಿ ಆಗಿದ್ದು, ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ದಿಟ್ಟತನ ಜತೆಗೆ ವಸ್ತುನಿಷ್ಠ ವರದಿಗೆ ಆದ್ಯತೆ ನೀಡಿದರೆ ಘನತೆ ಹೆಚ್ಚಲಿದೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ಜಿಲ್ಲಾ-ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪಟ್ಟಣದ ಗುರುಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತ್ರಿಕಾ ರಂಗದಲ್ಲಿ ಬದ್ಧತೆ ಅತಿ ಮುಖ್ಯ. ಎದುರಾಗುವ ಸವಾಲುಗಳನ್ನು ಮೆಟ್ಟಿನಿಂತು ನಿಸ್ವಾರ್ಥ ಸೇವೆಯಲ್ಲಿ ಸಮಾಜಕ್ಕೆ ನ್ಯಾಯ ಒದಗಿಸಿಕೊಡುವ ಕೆಲಸವಾಗಬೇಕು.
ಜಗತ್ತು ಬೆಳೆದಂತೆಲ್ಲ ಟಿವಿ, ಮೊಬೈಲ್ ಹಾವಳಿ ಹೆಚ್ಚಿದ್ದು ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಮಧ್ಯೆಯೂ ಪತ್ರಿಕೆ ಓದುವುದು ಜ್ಞಾನಾರ್ಜನೆಗೆ ಸಹಕಾರಿ ಎಂಬ ಅರಿವು ಜನರಲ್ಲಿ ಹೆಚ್ಚಾಗಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಸಿದ್ದಯ್ಯನಕೋಟೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಹಿಂದಿನ ಕಾಲಘಟ್ಟದಲ್ಲಿ ಯಾವುದೇ ಶಾಲೆ
ಕಾಲೇಜುಗಳಿಲ್ಲದ ಕಾರಣ ಬಸವಾದಿ ಶರಣರ ಅನುಭವ ಮಂಟಪವೇ ಶಿಕ್ಷಣ ಕೇಂದ್ರವಾಗಿತ್ತು ಎಂದು ಹೇಳಿದರು.
ಜಗತ್ತು ಬೆಳೆದಂತೆ ವಿಜ್ಞಾನ-ತಂತ್ರಜ್ಞಾನ ಬೆಳೆದಿದೆ. ವರದಿಗಾರಿಕೆ ಅಂದರೆ ಹರಿತವಾದ ಖಡ್ಗವಿದ್ದಂತೆ, ಅದಕ್ಕೆ ಸಣ್ಣ ಕಳಂಕ ತರದೆ ನ್ಯಾಯ ಬದ್ಧತೆ ಮೆರೆಯಬೇಕು ಎಂದರು.
ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ, ತಾಲೂಕಾಧ್ಯಕ್ಷ ಎಸ್.ರಾಜಶೇಖರ್ ಮಾತನಾಡಿದರು.
ಪತ್ರಕರ್ತರಾದ ಕೆ.ಕೆಂಚಪ್ಪ, ನಾಗರಾಜ್ ಕಟ್ಟೆ, ಈರಣ್ಣ ಯಾದವ್, ಪಿ.ಚಂದ್ರಶೇಖರ, ಡಿ.ಗೋವಿಂದಪ್ಪ, ಮಲ್ಲಿಕಾರ್ಜುನ, ಟಿ.ರುದ್ರೇಶ್,
ಆರ್.ಬಸವರಾಜ್, ಟಿ.ಗೋಪಾಲ್, ಪಿ.ಎಂ.ಗಂಗಾಧರ, ಮಂಜುನಾಥ, ಅಜ್ಜಪ್ಪ, ಮುಖಂಡರಾದ ಸಣ್ಣಯಲ್ಲಪ್ಪ, ಟಿ.ಕೆ.ಕಲೀಂವುಲ್ಲಾ,
ಜಿ.ಪ್ರಕಾಶ್, ಎಸ್.ಖಾದರ್, ಗೋವಿಂದಪ್ಪ, ಗುರುರಾಜಣ್ಣ, ಬೇಡರಡ್ಡಿಹಳ್ಳಿ ಬಸವರಡ್ಡಿ, ಸಂಜೀವ, ರವಿಕುಮಾರ, ಕೊಂಡಾಪುರ ಪರಮೇಶಿ, ನಾಗರಾಜ್, ಬಿ.ಟಿ.ನಾಗಭೂಷಣ, ಶಿಕ್ಷಕ ಓಬಣ್ಣ ಇತರರಿದ್ದರು.