ಜಿಲ್ಲೆ

ಡಾ.ಮಹೇಶ ಜೋಶಿ ವಿರುದ್ಧ ಸಮರ: ಮೇ.17ರಂದು ಜನ ಚಳವಳಿ ಸಮಾವೇಶ

ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳೊಂದಿಗಿನ ಗದ್ದಲ ತಾರಕಕ್ಕೇರಿದೆ. ಅಂತೆಯೇ ಮೇ.17ರಂದು ಮಂಡ್ಯದಲ್ಲಿ ‘ಜನ ಚಳವಳಿ ಸಮಾವೇಶ’ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಸಾಪ ಮಾಜಿ ಜಿಲ್ಲಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಪರಿಷತ್‌ನ ಬೈಲಾವನ್ನು ತಮಗಿಷ್ಟ ಬಂದಂತೆ ತಿದ್ದುಪಡಿ ಮಾಡಲು ಹೊರಟಿರುವ ಹಾಗೂ ಏಕಚಕ್ರಾಧಿಪತಿಯಂತೆ ವರ್ತಿಸುತ್ತಿರುವ ಮಹೇಶ್ ಜೋಶಿ ವಿರುದ್ಧ ಸಮಾನ ಮನಸ್ಕರ ಒಕ್ಕೂಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜೋಶಿ ಅವರ ಆರ್ಥಿಕ ಅಶಿಸ್ತು ಹಾಗೂ ಸಮ್ಮೇಳನಗಳ ಹಣ ದುರುಪಯೋಗದ ಬಗ್ಗೆ ವಿಚಾರಣೆ ನಡೆಸಿ ಸರ್ವಾಧಿಕಾರದ ಅಧಿಕಾರ ನಡೆಸುತ್ತಿರುವ ಅಧ್ಯಕ್ಷಗಿರಿಯನ್ನು ಅಮಾನತಿನಲ್ಲಿಟ್ಟು ಆಡಳಿತಾಧಿಕಾರಿ ನೇಮಿಸುವಂತೆ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸಾಹಿತಿಗಳು, ವಿಚಾರವಂತರು, ಪ್ರಗತಿಪರ ಹೋರಾಟಗಾರರು, ಕನ್ನಡಪರ ಹೋರಾಟಗಾರರು ಮತ್ತು ಕಸಾಪ ಅಜೀವ ಸದಸ್ಯರು ಸಮಾವೇಶವನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಿದರು.

ಅಂದಿನ ಸಮಾವೇಶದಲ್ಲಿ ಮುಖ್ಯಮಂತ್ರಿ ಚಂದ್ರು, ಡಾ.ಮುದ್ದುಕೃಷ್ಣ, ಹಂಪಾ ನಾಗರಾಜಯ್ಯ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ಜನವಾದಿ ಸಂಘಟನೆಯ ವಿಮಲಾ, ಮಾವಳ್ಳಿ ಶಂಕರ್, ಜಿ.ಕಪ್ಪಣ್ಣ, ಡಾ.ವಸುಂಧರ ಭೂಪತಿ, ಡಾ.ಕೆ.ಮರುಳ ಸಿದ್ದಪ್ಪ ಸೇರಿದಂತೆ ಮೈಸೂರು, ಹಾಸನ, ರಾಮನಗರ, ಚಾಮರಾಜನಗರ, ಕೊಡಗು ಜಿಲ್ಲೆಯ ಹಿರಿಯ ಸಾಹಿತಿಗಳು, ಕನ್ನಡ ಹಾಗೂ ರೈತ ಹೋರಾಟಗಾರರು, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಸಮಾವೇಶ ಹಿನ್ನೆಲೆಯಲ್ಲಿ ಮೇ 4ರಂದು ಸಂಜೆ 4 ಗಂಟೆಗೆ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಹಿರಿಯ ಸಾಹಿತಿಗಳನ್ನೊಳಗೊಂಡಂತೆ ಕನ್ನಡ ಪರ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ ಮಹೇಶ ಜೋಶಿ ವಿರುದ್ಧ ಹಲವು ನಿರ್ಣಯ ಕೈಗೊಳ್ಳಲಾಗಿದೆ. ಜೋಶಿ ಅವರಿಗೆ ಸಂಪುಟ ದರ್ಜೆ ಸ್ಥಾನಮಾನವನ್ನು ತಕ್ಷಣ ಸರ್ಕಾರ ಹಿಂಪಡೆಯಬೇಕು. 2022-23ನೇ ಸಾಲಿನಲ್ಲಿ ತಿದ್ದುಪಡಿಯಾಗಿರುವ ಬೈಲಾವನ್ನು ರದ್ದುಪಡಿಸಬೇಕು. ಸಕಾರಣವಿಲ್ಲದೆ ಕೆಲವು ಅಜೀವ ಸದಸ್ಯರ ಸದಸ್ಯತ್ವವನ್ನು ಅಮಾನತಿನಲ್ಲಿಟ್ಟಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದು 4 ತಿಂಗಳಾದರೂ ಮಹೇಶ ಜೋಶಿ ಅವರು 2.50 ಕೋಟಿ ರೂ ಲೆಕ್ಕ ಕೊಟ್ಟಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಕೇಳಿದರೂ ಲೆಕ್ಕ ನೀಡದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಕಸಾಪ ಇಂದು ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದ, ಸಂಸ್ಕೃತಿ ಅರಿವಿಲ್ಲದ, ಕನ್ನಡ ಭಾಷೆಯ ಮಹತ್ವ ಅರಿಯದ ವ್ಯಕ್ತಿಯ ಕೈಯಲ್ಲಿ ಸಿಲುಕಿ ವಿನಾಶದತ್ತ ಸಾಗಿದೆ. ಆರ್ಥಿಕ ಅಶಿಸ್ತನ್ನು ಮೈಗೂಡಿಸಿಕೊಂಡು ತನ್ನನ್ನು ಯಾರೂ ಪ್ರಶ್ನಿಸಬಾರದು, ಯಾವ ಲೆಕ್ಕವನ್ನೂ ಕೇಳಬಾರದು, ನಾನು ಮಾಡಿದ್ದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂಬ ಧೋರಣೆ ಮಹೇಶ ಜೋಶಿ ಅವರಲ್ಲಿದೆ ಎಂದು ಕಿಡಿಕಾರಿದರು.

ಪರಿಷತ್ ಹಣದಿಂದ ಐಷಾರಾಮಿ ಕಾರು ಖರೀದಿಸಿ ಪ್ರವಾಸದ ಹೆಸರಿನಲ್ಲಿ ವಾಹನ ದುರ್ಬಳಕೆ ಮಾಡಿಕೊಂಡು ತಮ್ಮ ವೇತನದ ಜತೆಗೆ ಪ್ರತಿದಿನ 5 ಸಾವಿರ ರೂಗಿಂತ ಹೆಚ್ಚು ಪ್ರಯಾಣ ಭತ್ಯೆ ಪಡೆಯುತ್ತಿದ್ದಾರೆ. ಸರ್ಕಾರದ ಅನುದಾನ, ದಾನಿಗಳು ನೀಡಿರುವ ದತ್ತಿಗಳ ಠೇವಣಿಯಿಂದ ಬಂದ ಬಡ್ಡಿ ಹಣ ದುರ್ಬಳಕೆ, ಸದಸ್ಯರ ಸದಸ್ಯತ್ವ ಹಣ, ಪರಿಷತ್ತಿನ ನೌಕರರ ಕ್ಷೇಮಾಭಿವೃದ್ಧಿಗೆ ಸರ್ಕಾರದಿಂದ ಬರುವ ಅನುದಾನಗಳ ಹಣದ ದುರುಪಯೋಗ ಹಾಗೂ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಿ.ಪಿ.ಸ್ವಾಮಿ ಮಾತನಾಡಿ, ಪ್ರತಿ ವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಅಗತ್ಯವಿಲ್ಲ. ಇದಕ್ಕೆ ಹಣ ನೀಡುವ ಬದಲು ಕನ್ನಡ ಭಾಷೆ, ಕನ್ನಡ ಶಾಲೆಗಳ ಉಳಿವಿಗಾಗಿ ನೀಡಿದರೆ ಕನ್ನಡ ಭಾಷೆ ಉಳಿಯುತ್ತದೆ. ಮಹೇಶ ಜೋಶಿ ಅಧ್ಯಕ್ಷರಾದ ನಂತರ 4 ವರ್ಷದಲ್ಲಿ ಮೂರನೇ ಬಾರಿಗೆ ಕಸಾಪ ಬೈಲಾವನ್ನು ತಿದ್ದುಪಡಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಕಾರಸವಾಡಿ ಮಹದೇವು, ದಸಂಸ ಮುಖಂಡ ಕೃಷ್ಣ ಹಾಜರಿದ್ದರು.

ಸಾಮರ್ಥ್ಯವಿದ್ದರೆ ಹಣ ಸಂಗ್ರಹಿಸಲಿ

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ರಾಜ್ಯಸರ್ಕಾರ ಹಾವೇರಿ ಸಮ್ಮೇಳನಕ್ಕೆ 25 ಕೋಟಿ ರೂ, ಮಂಡ್ಯ ಸಮ್ಮೇಳನಕ್ಕೆ ಸರ್ಕಾರ 30 ಕೋಟಿ ರೂ ನೀಡಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಮಹೇಶ ಜೋಶಿ ಬಳ್ಳಾರಿಯಲ್ಲಿ ನಡೆಯಲಿರುವ ಸಮ್ಮೇಳನಕ್ಕೆ 40 ಕೋಟಿ ರೂ ನೀಡಬೇಕೆಂದು ಕೇಳಿದ್ದಾರೆ. ಸರ್ಕಾರ ಯಾವುದೇ ಕಾರಣಕ್ಕೂ ಇನ್ನು ಮುಂದೆ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೋಟ್ಯಂತರ ರೂ ನೀಡಬಾರದು. ಬದಲಿಗೆ ಹಿಂದೆ ನೀಡುತ್ತಿದ್ದಂತೆ ಹಣ ಕೊಡಲಿ. ರಾಜ್ಯಾಧ್ಯಕ್ಷರಿಗೆ ಸಾಮರ್ಥ್ಯವಿದ್ದರೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಸಮ್ಮೇಳನ ಮಾಡಲಿ ಎಂದು ಹೇಳಿದರು.

ಸರ್ಕಾರ ಸಮ್ಮೇಳನಗಳಿಗೆ ಹಣ ನೀಡುವ ಬದಲು ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ಹಣ ನೀಡಲಿ. ಕನ್ನಡ ನೆಲ-ಭಾಷೆಯ ಉಳಿವಿಗೆ ಇದುವರೆಗೂ ಒಂದು ಕಾರ್ಯಕ್ರಮಗಳನ್ನು ರೂಪಿಸದ ಡಾ.ಮಹೇಶ ಜೋಶಿ ಕೇವಲ ಸಮ್ಮೇಳನ ಆಯೋಜಿಸಿ ಹಣ ಮಾಡುವುದನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಕಸಾಪ ರಾಜ್ಯಾಧ್ಯಕ್ಷರಾದ ಬಳಿಕ ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದು, ಇದಕ್ಕೆ ಮೊದಲು ಸರ್ಕಾರ ಅಂತ್ಯ ಆಡಬೇಕು. ಸಚಿವ ಸ್ಥಾನಮಾನ ಹಿಂಪಡೆಯಬೇಕು. ಕಸಾಪದ ಸಂಪೂರ್ಣ ಆಡಳಿತ ಮತ್ತು ಆರ್ಥಿಕ ವಹಿವಾಟನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುವ ಸರ್ವಾಧಿಕಾರಿ ಧೋರಣೆ ತೋರುತ್ತಾ ಹಣದ ದುರುಪಯೋಗ, ಸ್ವಜನ ಪಕ್ಷಪಾತ ಹಾಗೂ ಇಬ್ಬಗೆಯ ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಗ್ಗೆ ವಿಚಾರಣೆಯಾಗಬೇಕೆಂದು ಆಗ್ರಹಿಸಿದರು.