ಜಿಲ್ಲೆ

ತಮಿಳುನಾಡಿಗೆ ನೀರು ಬಿಟ್ಟ ರಾಜ್ಯಸರ್ಕಾರ ನಿರ್ಧಾರ ಖಂಡಿಸಿ ಆ.23ರಂದು ಉಪವಾಸ ಸತ್ಯಾಗ್ರಹ: ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್‌ರಾಜು ಮಾಹಿತಿ

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿ ಆ.23ರಂದು ನಗರದ ಸರ್‌ಎಂ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್‌ರಾಜು ಹೇಳಿದರು.

ಪ್ರಾಧಿಕಾರ ಕುಡಿಯುವ ನೀರಿನ ಆದ್ಯತೆ ನೋಡಿಕೊಂಡು ಹಾಗೂ ಒಳ ಹರಿವಿನ ಪ್ರಮಾಣ ಗಮನಿಸಿ ಕೆಳಭಾಗದ ರಾಜ್ಯಕ್ಕೆ ನೀರು ಹರಿಸುವ ಬಗ್ಗೆ ಕರ್ನಾಟಕವೇ ನಿರ್ಧರಿಸಲಿ ಎಂದಿತು. ಇದನ್ನು ವಿರೋಧಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿತು. ಪ್ರಾಧಿಕಾರದ ಆದೇಶವಿಲ್ಲದಿದ್ದರೂ ವಿರೋಧ ಪಕ್ಷಗಳು ಹೇಳುವಂತೆ ರಾಜಕೀಯ ಹಿತಾಸಕ್ತಿಗೋಸ್ಕರ ಸುಪ್ರೀಂಕೋರ್ಟ್ ಆದೇಶದ ಅನುಸಾರ ಎಂದು ನೆಪ ಹೇಳಿ ತ.ನಾಡಿಗೆ ನೀರು ಹರಿಸುತ್ತಿರುವುದು ದುರುದ್ದೇಶಪೂರ್ವಕ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಈಗಾಗಲೇ ಮೆಟ್ಟೂರು ಜಲಾಶಯಕ್ಕೆ ಸುಮಾರು 63 ಟಿ.ಎಂ.ಸಿ. ನೀರು ಹರಿದಿದ್ದರೂ, ಹಾಗೂ ಮೆಟ್ಟೂರು ಜಲಾಶಯದಲ್ಲಿ ಸಾಕಷ್ಟು ಪ್ರಮಾಣ ನೀರಿದ್ದರೂ ತ.ನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇಷ್ಟೆಲ್ಲ ವಿಚಾರವಿದ್ದರೂ ಹಾಗೂ ಕಾವೇರಿ ಕೊಳ್ಳದ ಮಳೆ ಕೊರತೆಯಿಂದಾಗಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡದೇ, ಪ್ರಾಧಿಕಾರದ ಆದೇಶವಿಲ್ಲದಿದ್ದರೂ ಮಂಡ್ಯ ರೈತರಿಗೆ ದ್ರೋಹವೆಸಗಿ ಏಕಾಏಕೀ ಪ್ರತಿದಿನ 12 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಜಲಾಶಯದಿಂದ ಬಿಡುವುದಕ್ಕೆ ಪ್ರಾರಂಭಿಸಿದೆ. ಇದರಿಂದ ಮುಂದೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಕಷ್ಟವಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು.

ಸಂಘದ ರಾಜ್ಯ ಪ್ರಮುಖ್ ವೆಂಕಟೇಶ್ ಪಣಕನಹಳ್ಳಿ, ಮಂಡ್ಯ ತಾಲೂಕು ಅಧ್ಯಕ್ಷ ಬಿ.ಪಿ.ಅಪ್ಪಾಜಿ ಬೂದನೂರು, ಕಾರ್ಯದರ್ಶಿ ಜಯರಾಮು ತೂಬಿನಕೆರೆ, ಮಹಿಳಾ ಪ್ರಮುಖ್ ಪುಟ್ಟಮ್ಮ, ಕಾರ್ಯಕಾರಿಣಿ ದಿವ್ಯಾ ಇದ್ದರು.