ಜಿಲ್ಲೆ

ಮೇ.10ರಂದು ನಗರದಲ್ಲಿ ಅಭಿನಂದನಾ ಸಮಾರಂಭ: ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ನಗರದ ಎಸ್.ಬಿ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಅವರಿಗೆ ಮೇ.10ರಂದು ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು ತಿಳಿಸಿದರು.

ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದ ಸಭಾಂಗಣದಲ್ಲಿ ಅಂದು ಸಂಜೆ 5ಗಂಟೆಗೆ ಆಯೋಜಿಸಿರುವ  ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವ ಎಚ್.ವಿಶ್ವನಾಥ್ ವಹಿಸುವರು. ಡಾ.ಮೀರಾ ಶಿವಲಿಂಗಯ್ಯ ಅವರನ್ನು ಅಖಿಲ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ಅಭಿನಂದಿಸುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ  ಹೇಳಿದರು.

ವಿಶ್ರಾಂತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ಅಭಿನಂದನಾ ಭಾಷಣ ಮಾಡುವರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಎಸ್.ಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಭಾಗವಹಿಸುವರು. ಶಿಕ್ಷಣ, ಸಾಹಿತ್ಯ, ಸಮಾಜ ಸೇವೆ, ಉದ್ಯಮ, ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಡಾ.ಮೀರಾ ಶಿವಲಿಂಗಯ್ಯ ಕೆಲಸ ಮಾಡಿದ್ದಾರೆ. ಮಂಡ್ಯ ನಗರಕ್ಕೆ ಮೊಟ್ಟ ಮೊದಲ ಬಾರಿಗೆ ಕಂಪ್ಯೂಟರ್ ಪರಿಚಯಿಸಿ, ಜಿಲ್ಲೆಯ ಯುವಜನರಿಗೆ ಕಂಪ್ಯೂಟರ್ ಶಿಕ್ಷಣ ನೀಡಿದ ಹೆಗ್ಗಳಿಕೆ ಇವರದು. ಇವರ ಸೇವೆಯನ್ನು ಪರಿಗಣಿಸಿ ಕೆಎಸ್‌ಒಯು ಗೌರವ ಡಾಕ್ಟರೇಟ್ ನೀಡಿರುವುದು ಜಿಲ್ಲೆಗೆ ಸಂದ ಗೌರವವಾಗಿದೆ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಜಿಲ್ಲೆಯ ಕೆಲವೇ ಗಣ್ಯರಿಗಷ್ಟೇ ಮೈಸೂರು ವಿಶ್ವವಿದ್ಯಾಲಯ, ಕೆಎಸ್‌ಒಯು ವತಿಯಿಂದ ಗೌರವ ಡಾಕ್ಟರೇಟ್ ಲಭಿಸಿದೆ. ಅವರಲ್ಲಿ ಮೀರಾ ಶಿವಲಿಂಗಯ್ಯ ಒಬ್ಬರು. ನಿತ್ಯ ಕೆ.ವಿ.ಶಂಕರಗೌಡ ಶಂಕರಗೌಡ ಅವರೂ ಕೂಡ ಗೌರವ ಡಾಕ್ಟರೇಟ್‌ಗೆ ಅರ್ಹರಾಗಿದ್ದರು. ಅವರಿಗೆ ಅವರಿಗೆ ಡಾಕ್ಟರೇಟ್ ಲಭಿಸದಿರುವುದು ಬೇಸರದ ಸಂಗತಿ ಎಂದರು.

ಕಾರ್ಯದರ್ಶಿ ಎಚ್.ಡಿ.ಸೋಮಶೇಖರ್, ನಿರ್ದೇಶಕಿ ವಿಜಯಲಕ್ಷ್ಮೀ ರಘುನಂದನ್ ಹಾಜರಿದ್ದರು.