ಜಿಲ್ಲೆ

ಜು.29ರಂದು ನಗರದಲ್ಲಿ ಕೃಷಿ ಕಾರ್ಯಾಗಾರ: ನಿರ್ಮಲ ಭೂಮಾತಾ ಟ್ರಸ್ಟ್ ಅಧ್ಯಕ್ಷ ಅನಂತರಾವ್ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ನಿರ್ಮಲ ಭೂಮಾತಾ ಟ್ರಸ್ಟ್ ವತಿಯಿಂದ ಡಾ.ಸುಭಾಷ್ ಪಾಳೇಕಾರ್ ಅವರ 76ನೇ ಜನ್ಮದಿನದ ಅಂಗವಾಗಿ ಗುರುವಂದನಾ, ಎಸ್‌ಪಿಕೆಗೆ ರೈತರ ಸೇರ್ಪಡೆ ಹಾಗೂ ಒಂದು ದಿನದ ಜಿಲ್ಲಾಮಟ್ಟದ ಕೃಷಿ ಕಾರ್ಯಾಗಾರವನ್ನು ಜು.29ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4ವರೆಗೆ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಅನಂತರಾವ್ ತಿಳಿಸಿದರು.

ಸುಭಾಷ್ ಪಾಳೇಕಾರ್ ಕೃಷಿಯನ್ನು ಹೊಸದಾಗಿ ಸ್ವಯಂ ಪ್ರೇರಿತವಾಗಿ ಪ್ರಾರಂಭಿಸಲು ಇಚ್ಛಿಸುವ ರೈತರ ಸೇರ್ಪಡೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ. ಅಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿ.ಪಂ ಸಿಇಒ ಕೆ.ಆರ್.ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಸೇರಿದಂತೆ ಕೃಷಿ ಹಾಗೂ ಪಶುಪಾಲನಾ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾರ್ಯಾಗಾರದಲ್ಲಿ ನುರಿತ ನೈಸರ್ಗಿಕ ಕೃಷಿಕರಿಂದ ತರಬೇತಿ ನೀಡಲಾಗುವುದು. ಜಿಲ್ಲೆಯ ಪ್ರತಿ ತಾಲೂಕಿನಿಂದ 50 ಜನ ರೈತರು ಭಾಗವಹಿಸುವಂತೆ ಮನವಿ ಮಾಡಿದ್ದು, ಅದರಂತೆ 300 ರೈತರು ಭಾಗವಹಿಸುವ ನಿರೀಕ್ಷೆಯಿದೆ. ರಾಸಾಯನಿಕ ಬಳಸದೆ, ವಿಷಮುಕ್ತವಾಗಿ ಬೀಜಾಮೃತ, ಜೀವಾಮೃತ, ಹೊದಿಕೆ, ಆದ್ರತೆ ಬಳಸಿ ಭತ್ತ, ರಾಗಿ, ತರಕಾರಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಲಾಗುವುದು. ಎಸ್‌ಪಿಕೆ ಮಾದರಿಯಲ್ಲಿ 10 ಗುಂಟೆ ಜಮೀನಿನಲ್ಲಿ ಕಬ್ಬು ಬೆಳೆದು ಬೆಲ್ಲ ತಯಾರಿಸಿ ನೇರ ಮಾರಾಟದಿಂದ 1 ಲಕ್ಷ ರೂ.ಗೂ ಅಧಿಕ ಆದಾಯ ಗಳಿಕೆ ಸಾಧ್ಯವಿದೆ. ರಾಜಮುಡಿ ಬೆಳೆಯ ಭತ್ತದಿಂದ 1 ಎಕರೆಗೆ 13 ಕ್ವಿಂಟಾಲ್ ಅಕ್ಕಿ ದೊರೆಯಲಿದ್ದು, ಒಂದು ಕೆಜಿಗೆ ರಾಜಮುಡಿ ಅಕ್ಕಿಯ ಬೆಲೆ 100 ರೂ ಇದೆ ಎಂದು ವಿವರಿಸಿದರು.

ಉಪಾಧ್ಯಕ್ಷ ಎಂ.ಎನ್.ಮಹೇಶ್‌ಕುಮಾರ್, ಕಾರ್ಯದರ್ಶಿ ದಯಾನಂದ, ಸದಸ್ಯರಾದ ಚಂದ್ರಶೇಖರ್, ವೆಂಕಟೇಶ್ ಇದ್ದರು.