ಜಿಲ್ಲೆ

ಸೆ.10ರಂದು ಮರೆಯಲಾಗದ ಮಹಾನುಭಾವ ನಾಲ್ವಡಿ ಕೃಷ್ಣರಾಜ ಒಡೆಯರ್’ ಕೃತಿ ಲೋಕಾರ್ಪಣೆ: ವಿಸ್ಮಯ ಬುಕ್‌ಹೌಸ್‌ನ ವ್ಯವಸ್ಥಾಪಕ ವೀರಭದ್ರಪ್ಪ ಮಾಹಿತಿ

ಮಂಡ್ಯ: ಎಸ್.ಬಿ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಅವರು ಬರೆದಿರುವ ‘ಮರೆಯಲಾಗದ ಮಹಾನುಭಾವ ನಾಲ್ವಡಿ ಕೃಷ್ಣರಾಜ ಒಡೆಯರ್’ ಕೃತಿ ಲೋಕಾರ್ಪಣೆ ಸಮಾರಂಭವನ್ನು ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಸೆ.10ರಂದು ಆಯೋಜಿಸಲಾಗಿದೆ ಎಂದು ವಿಸ್ಮಯ ಬುಕ್‌ಹೌಸ್‌ನ ವ್ಯವಸ್ಥಾಪಕ ವೀರಭದ್ರಪ್ಪ ಹೇಳಿದರು.

ವಿಸ್ಮಯ ಬುಕ್‌ಹೌಸ್ ಮೈಸೂರು ಹಾಗೂ ಲೇಖಕಿಯರ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಆಯೋಜಿಸಿರುವ ಸಮಾರಂಭದಲ್ಲಿ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಮಣ್ಯ ಅಧ್ಯಕ್ಷತೆ ವಹಿಸಲಿದ್ದು, ಕೃತಿ ಕುರಿತು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಸಂಸ್ಕೃತಿ ಚಿಂತಕ ಪ್ರೊ.ಎಂ.ಕೃಷ್ಣೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಮಾಂಡವ್ಯ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ಭಾಗವಹಿಸಲಿದ್ದಾರೆ. 250 ಪುಟದ ಕೃತಿಯಲ್ಲಿ ನಾಲ್ವಡಿ ಅವರನ್ನು ಕುರಿತ ಹಲವು ಮಾಹಿತಿ ನೀಡಲಾಗಿದೆ. ಯುವ ಸಮೂಹಕ್ಕೆ ಹೊಸ ದಿಕ್ಕನ್ನು ತೋರಿಸಲಿದೆ ಎಂದು ವಿವರಿಸಿದರು.

ವಿಸ್ಮಯ ಬುಕ್‌ಹೌಸ್‌ನ ಪ್ರಕಾಶ್ ಚಿಕಪಾಳ್ಯ, ಸಾಹಿತಿ ಪ್ರಮೀಳಾ ಧರಣೇಂದ್ರಯ್ಯ, ಲೇಖಕಿಯರ ಸಂಘದ ಜಿಲ್ಲಾ ಕಾರ್ಯದರ್ಶಿ ಡಾ.ಎಂ.ಕೆಂಪಮ್ಮ, ಸಾಹಿತಿ ಡಾ.ಸುಮಾರಾಣಿ ಶಂಭು ಇದ್ದರು.