ವಿಜಯವಾಣಿ ಸುದ್ದಿಜಾಲ ಉಡುಪಿ
ಭಾರತೀಯ ಜೀವವಿಮಾ ನಿಗಮ (ಎಲ್ಐಸಿ)ದ ಉಡುಪಿ ವಿಭಾಗಕ್ಕೆ ಸೇರಿದ 57 ಸಾವಿರಕ್ಕೂ ಅಧಿಕ ಜೀವನ ಮಧುರ ಪಾಲಿಸಿದಾರರು ಕಟ್ಟಿದ್ದ ಕೋಟ್ಯಂತರ ರೂಪಾಯಿಗಳನ್ನು ಎಲ್ಐಸಿಯೇ ನೇಮಿಸಿದ್ದ ಮಧ್ಯವರ್ತಿಗಳು ಲಪಟಾಯಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿ ನ್ಯಾಯ ಪಡೆಯಲು ಬಡ ಪಾಲಿಸಿದಾರರು 9 ವರ್ಷದಿಂದ ಕಾಯುತ್ತಿದ್ದು, ಏನೂ ಪ್ರಯೋಜನವಾಗಿಲ್ಲ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶ್ಯಾನುಭಾಗ್ ಮಾಹಿತಿ ನೀಡಿದ್ದಾರೆ.
ಉಡುಪಿಯಲ್ಲಿ ಮಾ.13ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಐಸಿಯ ಉಡುಪಿ ವಿಭಾಗಕ್ಕೆ ಸೇರಿದ ಕಡೂರು ತಾಲೂಕಿನ 200ಕ್ಕೂ ಹೆಚ್ಚು ಗ್ರಾಮಗಳಲ್ಲಿ ಎಲ್ಐಸಿ ಪರವಾಗಿ ಹಣ ಸಂಗ್ರಹಿಸಿದ ಅಮಾಯಕ ಅಂಗನವಾಡಿ ಕಾರ್ಯಕರ್ತೆಯರು ವಂಚನೆಗೊಳಗಾದ ಪಾಲಿಸಿದಾರರ ಆಕ್ರೋಶಕ್ಕೆ ಬಲಿಯಾಗುವಂತಾಗಿದೆ ಎಂದರು.
ಗ್ರಾಮಗಳಲ್ಲಿದ್ದ ಪಾಲಿಸಿದಾರರಿಂದ ಸಂಗ್ರಹಿಸಿದ್ದ ಕೋಟ್ಯಂತರ ರೂ. ಪ್ರೀಮಿಯಂ ಹಣವನ್ನು ಎಲ್ಐಸಿ ನೇಮಿಸಿದ್ದ ಪ್ರತಿನಿಧಿಗಳಿಗೆ ಅಂಗನವಾಡಿ ಕಾರ್ಯಕರ್ತರು ಹಸ್ತಾಂತರಿಸಿ, ಅಧಿಕೃತ ರಸೀದಿ ಪಡೆದಿದ್ದಾರೆ. ಆದರೆ, ಗ್ರಾಹಕರಿಂದ ಹಣ ಸ್ವೀಕರಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು ಇನ್ನೂ ಪರದಾಡುತ್ತಿದ್ದಾರೆ. ರಾಜ್ಯ ಬಳಕೆದಾರರ ಆಯೋಗಕ್ಕೆ ಅಧ್ಯಕ್ಷರನ್ನೇ ನೇಮಿಸಿಲ್ಲ. ಹೀಗಾಗಿ ದಶಕಗಳಿಂದ ಸಲ್ಲಿಸಿರುವ ಬಳಕೆದಾರರ ದೂರುಗಳ ವಿಚಾರಣೆ ಬಾಕಿ ಉಳಿದಿವೆ. ಎಲ್ಐಸಿಯಿಂದ ಹಾನಿಗೊಳಗಾದ ಗ್ರಾಹಕರೂ ಸಹ ಇದೇ ಪೀಠದಿಂದಲೇ ನ್ಯಾಯಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದರು.
ಪ್ರತಿ ತಿಂಗಳು ಗ್ರಾಹಕರಿಂದ ಪ್ರೀಮಿಯಂ ಹಣ ಸಂಗ್ರಹಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಅದನ್ನು ಎಲ್ಐಸಿ ನೇಮಿತ ಸಮನ್ವಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಶುಭೋದಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಮುಕ್ಕಣ್ಣೀಶ್ವರಿ ಯುವತಿ ಮಂಡಲಗಳಿಗೆ ಹಸ್ತಾಂತರಿಸುತ್ತಿದ್ದರು. 2013ರ ಜುಲೈನಲ್ಲಿ ಎಲ್ಐಸಿ ಪಾಲಿಸಿ ಮಾಡಿಸಿದ್ದ ಮಹಿಳೆ ನಿಧನಳಾದಾಗ, ಪಾಲಿಸಿ ಜೀವಂತವಾಗಿ ಉಳಿದಿಲ್ಲ ಎಂದು ತಿರಸ್ಕರಿಸಲ್ಪಟ್ಟಿತ್ತು. ಅಲ್ಲದೆ, ಜೀವವಿಮಾ ನಿಗಮ ಕೇವಲ ಒಮ್ಮೆ ಮಾತ್ರ ಪ್ರೀಮಿಯಂ ಕಂತು ಸ್ವೀಕರಿಸಿರುವುದು ತಿಳಿದುಬಂತು. ಪಾಲಿಸಿದಾರರು ಕಟ್ಟಿದ್ದ ಹಣವನ್ನು ಎಲ್ಐಸಿ ಪ್ರತಿನಿಧಿಯಾದ ಸಮನ್ವಯ ಗ್ರಾಮೀಣ ಸಂಸ್ಥೆ ಲಪಟಾಯಿಸಿದೆ ಎನ್ನುವುದು ಅಂದು ಮೊದಲ ಬಾರಿಗೆ ಬೆಳಕಿಗೆ ಬಂತು ಎಂದರು.
ಪಾಲಿಸಿದಾರರಿಗೆ ತಾವು ಮೋಸ ಹೋಗಿದ್ದೇವೆ ಎನ್ನುವುದು ಕಾಳ್ಳಿಚ್ಚಿನಂತೆ ಎಲ್ಲ ಹಳ್ಳಿಗಳಿಗೂ ತಲುಪಿತು. ಎಲ್ಐಸಿ ಕಚೇರಿ ಸಂಪರ್ಕಿಸಿದಾಗ 50 ಸಾವಿರಕ್ಕೂ ಅಧಿಕ ಪಾಲಿಸಿಗಳು ಚಾಲ್ತಿಯಲ್ಲಿ ಇಲ್ಲದಿರುವುದು ತಿಳಿಯಿತು. ಅವರಿಂದ ಹಣ ಪಡೆದ ಆಯಾ ಗ್ರಾಮದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆಯರ ಮನೆಗಳಿಗೆ ನುಗ್ಗಿ ಗಲಾಟೆ ಎಬ್ಬಿಸಿದರು. ಕೈಗೆ ಸಿಕ್ಕ ಪಾತ್ರೆ, ಹೊಲಿಗೆಯಂತ್ರ, ಕುರ್ಚಿ, ಮೇಜುಗಳನೆಲ್ಲ ಹೊತ್ತೊಯ್ದರು. ಅನೇಕ ಮಹಿಳೆಯರು ಹಲ್ಲೆಗೂ ಒಳಗಾದರು ಎಂದು ಶ್ಯಾನುಭಾಗ್ ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಒಂದು ವರ್ಷದ ಬಳಿಕ ತರೀಕೆರೆ ಹಾಗೂ ಕಡೂರು ಪೊಲೀಸ್ ಠಾಣೆಯಲ್ಲಿ ಸಮನ್ವಯಂ ಸಂಸ್ಥೆಯ ವಿರುದ್ಧ ಎಲ್ಐಸಿ ದೂರು ದಾಖಲಿಸಿತು. ಎರಡು ವರ್ಷದ ಬಳಿಕ 2016ರಲ್ಲಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ತನಿಖೆ ಪ್ರಾರಂಭವಾದ ಮೇಲೆ ಜೀವ ವಿಮಾ ನಿಗಮದ ಅಧಿಕಾರಿಗಳು ಚಿಕ್ಕಮಗಳೂರಿನ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಶುಭೋದಯ ಗ್ರಾಮೀಣ ಸಂಸ್ಥೆಯ ವಿರುದ್ಧ ದೂರು ನೀಡಿದ್ದರು. ಆದರೆ, ಅವರ ಅಧಿಕಾರಿಗಳು ಗ್ರಾಹಕರಿಗೆ ನ್ಯಾಯ ಕೊಡಿಸುವ ಯಾವುದೇ ಕಾರ್ಯ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಂಚನೆಗೊಳಗಾದ 60 ಗ್ರಾಹಕರು ಸೇರಿ ಚಿಕ್ಕಮಗಳೂರಿನ ಜಿಲ್ಲಾ ಬಳಕೆದಾರರ ಆಯೋಗದಲ್ಲಿ ಗುಂಪು ದಾವೆ ಹೂಡಿದರು. ವಿಚಾರಣೆ ನಡೆಸಿದ ಆಯೋಗವು ಈ ಪ್ರಕರಣದಲ್ಲಿ ಎಲ್ಐಸಿ ನಿರ್ಲಕ್ಷ್ಯ ಎತ್ತಿಹಿಡಿದು ಗ್ರಾಹಕರೆಲ್ಲರಿಗೂ ಅವರು ಕಟ್ಟಿದ ಪ್ರೀಮಿಯಂ ಹಣವನ್ನು ದಂಡ ಸಹಿತ ಹಾಗೂ ದಾವೆಯ ರ್ಖಚನ್ನೂ ಹಿಂತಿರುಗಿಸುವಂತೆ ಆದೇಶ ನೀಡಿತು. ಬಳಿಕ ಎಲ್ಐಸಿ, ದಾವೆ ಹೂಡಿದ ಅವರೆಲ್ಲರಿಗೂ ಹಣ ಹಿಂದಿರುಗಿಸಿತು. ಆದರೆ, ಇನ್ನೂ 57 ಸಾವಿರಕ್ಕೂ ಅಧಿಕ ಜನರಿಗೆ ನ್ಯಾಯ ಕೊಡುವವರು ಯಾರು? ಪಾಲಿಸಿದಾರರಿಂದ ಹಣ ಸಂಗ್ರಹಿಸಿ ಮಧ್ಯವರ್ತಿಗಳಿಗೆ ನೀಡಿದ್ದರೂ ಈಗಲೂ ಸಮಸ್ಯೆ ಅನುಭವಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮಾಧಾನ ಮಾಡುವವರು ಯಾರು ಎಂದು ಶ್ಯಾನುಭಾಗ್ ಪ್ರಶ್ನಿಸಿದರು.
ದೇಶದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ನಿರ್ದೇಶನಾಲಯ (ಐಆರ್ಡಿಎ)ವು 2005ರಲ್ಲಿ ರಚಿಸಿದ ಮಾರ್ಗದರ್ಶಿ ಸೂತ್ರದಂತೆ ಭಾರತೀಯ ಜೀವವಿಮಾ ನಿಗಮವು ಮೈಕ್ರೋ ಇನ್ಶೂರೆನ್ಸ್ ಯೋಜನೆ ಜಾರಿಗೊಳಿಸಿತು. ಹಳ್ಳಿಯಲ್ಲಿರುವ ಬಡ ಜನರಿಗೆ ನೆರವಾಗುವ ಯೋಜನೆ ಅದಾಗಿತ್ತು. 15 ವರ್ಷದ ಅವಧಿಗೆ 15 ಸಾವಿರ ಮೊತ್ತದ ಈ ಪಾಲಿಸಿಗೆ ವಾರ್ಷಿಕ ಕೇವಲ 600 ರೂ. ಅತಿ ಕಡಿಮೆ ಪ್ರೀಮಿಯಂ ನಿಗದಿಸಲಾಗಿತ್ತು. ಎಲ್ಐಸಿ ಪರವಾಗಿ ಆಯಾ ಗ್ರಾಮಗಳಲ್ಲಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಪ್ರೀಮಿಯಂ ಹಣ ಸ್ವೀಕರಿಸಿ, ಎಲ್ಐಸಿಯವರೇ ಆಯಾ ಜಿಲ್ಲೆಯಲ್ಲಿ ನೇಮಿಸಿರುವ ವಿಮಾ ಪ್ರತಿನಿಧಿಗಳಿಗೆ ಹಸ್ತಾಂತರಿಸಬೇಕಿತ್ತು. 2009-10ರಲ್ಲಿ ಪ್ರಾರಂಭಗೊಂಡ ಈ ಯೋಜನೆಯಲ್ಲಿ ಉಡುಪಿ ವಿಭಾಗಕ್ಕೆ ಸೇರಿದ ಕಡೂರು, ಚಿಕ್ಕಮಗಳೂರು, ಅರಸಿಕೆರೆ, ತರೀಕೆರೆ, ಮೂಡಿಗೆರೆ ಎನ್.ಆರ್.ಪುರ ಹಾಗೂ ಇನ್ನಿತರ ತಾಲೂಕುಗಳ 200ಕ್ಕೂ ಹೆಚ್ಚು ಗ್ರಾಮಗಳಿಂದ 58,086 ಬಡಜನರು ಪಾಲಿಸಿ ಖರೀದಿಸಿದ್ದರು.
ಸಾವಿರಾರು ಪಾಲಿಸಿದಾರರ ಪರವಾಗಿ ದಾವೆ ಹೂಡುವುದು ಸವಾಲಾಗಿತ್ತು. ಅನೇಕರು ಪಾಲಿಸಿ ಪ್ರಮಾಣಪತ್ರವನ್ನೂ ಕಳೆದುಕೊಂಡಿದ್ದರು. ಆದರೂ ಎರಡು ಗುಂಪುಗಳಲ್ಲಿ ರಾಜ್ಯ ಬಳಕೆದಾರರ ಆಯೋಗದಲ್ಲಿ ದಾವೆ ಹೂಡಿದರು. 2019ರಲ್ಲಿ ಎಲ್ಐಸಿಯನ್ನು ಪ್ರತಿವಾದಿಯನ್ನಾಗಿ ಹೂಡಿರುವ ಈ ದಾವೆಗಳು 6 ವರ್ಷದಿಂದ ವಿಚಾರಣೆಯಾಗದೆ ಬಾಕಿ ಉಳಿದಿದೆ. ಕೋವಿಡ್ ಕಾರಣಕ್ಕಾಗಿ 3 ವರ್ಷ ವಿಚಾರಣೆ ನಡೆದಿರಲಿಲ್ಲ. ಬಳಿಕ ಅಧ್ಯಕ್ಷರ ನೇಮಕವಾಗಿಲ್ಲ ಎಂಬ ಕಾರಣಕ್ಕಾಗಿ ವಿಚಾರಣೆ ನಡೆಯುತ್ತಿಲ್ಲ. ಅಧ್ಯಕ್ಷರ ನೇಮಕಕ್ಕಾಗಿ ಹೂಡಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್ನಲ್ಲಿ ವಿಚಾರಣೆಗೆ ಬಂದಿತ್ತು. ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರ ನೀಡಿದ ಲಿಖಿತ ಹೇಳಿಕೆ ಅನುಸರಿಸಿ 2025ರ ಫೆ.10ರಂದು ದಾವೆಯನ್ನು ಹೈಕೋರ್ಟ್ ವಜಾಗೊಳಿಸಿದೆ. ಇದೀಗ ತಿಂಗಳು ಕಳೆದರೂ ನೇಮಕಾತಿ ಆಗಿಲ್ಲ ಎಂದರೆ ಇದೆಂಥಹ ಬಳಕೆದಾರರ ರಕ್ಷಣೆ? ಇತಂಹ ಪರಿಸ್ಥಿತಿಯಲ್ಲಿ ಬಳಕೆದಾರರ ದಿನಾಚರಣೆಗೆ ಅರ್ಥವಿದೆಯೇ ಎಂದು ಡಾ.ರವೀಂದ್ರನಾಥ್ ಶ್ಯಾನುಭಾಗ್ ಪ್ರಶ್ನಿಸಿದ್ದಾರೆ.
ಎಲ್ಐಸಿಯ ಉಡುಪಿ ವಿಭಾಗದಲ್ಲಿ ಒಟ್ಟು 58,086 ಜೀವನ ಮಧುರ ಪಾಲಿಸಿಗಳಲ್ಲಿ 57,873 ಪಾಲಿಸಿಗಳು ಅಸ್ತಿತ್ವ ಕಳೆದುಕೊಂಡಿದೆ. ಕೇವಲ 213 ಪಾಲಿಸಿಗಳು ಮಾತ್ರ ಜೀವಂತ ಉಳಿದಿವೆ. 3 ವರ್ಷ ಕಳೆದರೂ ನಿಗಮದ ಅಧಿಕಾರಿಗಳಿಗೆ ಈ ವಿಷಯ ಏಕೆ ತಿಳಿಯಲಿಲ್ಲ? ಮೈಕ್ರೋ ಇನ್ಶೂರೆನ್ಸ್ ವಿಭಾಗದಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಹಲವಾರು ಅಧಿಕಾರಿಗಳು, ಸಿಬ್ಬಂದಿಯಿದ್ದರೂ ಶೇ.99.63ರಷ್ಟು ಪಾಲಿಸಿ ಅಸ್ತಿತ್ವ ಕಳೆದುಕೊಂಡಾಗಲೂ ಪಾಲಿಸಿದಾರರ ರಕ್ಷಣೆ ಮಾಡುವ ಪ್ರಯತ್ನ ಏಕೆ ಆಗಲಿಲ್ಲ? ಇಷ್ಟೊಂದು ದೊಡ್ಡ ಹಗರಣ ನಡೆದರೂ ಈವರೆಗೂ ಏಕೆ ಯಾವುದೇ ಅಧಿಕಾರಿಗಳ ತನಿಖೆಯಾಗಿಲ್ಲ? ಮಧ್ಯವರ್ತಿಗಳು ಹಣ ಲಪಟಾಯಿಸಿದ್ದು ತಿಳಿದ ಬಳಿಕವೂ ಅಧಿಕಾರಿಗಳೆಲ್ಲ ಸುಮ್ಮನಿದ್ದುದೇಕೆ? | ಡಾ.ರವೀಂದ್ರನಾಥ್ ಶ್ಯಾನುಭಾಗ್. ಅಧ್ಯಕ್ಷ. ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ, ಉಡುಪಿ