ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ಟಿ.ಎಂ.ಹೊಸೂರು ಗ್ರಾಮದ ರೈತರೊಬ್ಬರ ಮೇಕೆ ಫಾರ್ಮ್‌ನಲ್ಲಿ ಕ್ರಷರ್ ಧೂಳಿನಿಂದ ಮೇಕೆಗಳು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತರ ಪರವಾಗಿ ವಾದ ಮಂಡಿಸಿದ ವಕೀಲ ಕೆ.ವಿ.ಹೃತಿಕ್‌ಗೌಡ ಆರೋಪಿಸಿದರು.
ರೈತ ಎಚ್.ಎಸ್.ಶರತ್‌ಕುಮಾರ್ ಅವರು ತನ್ನೂರಿನ ಸಮೀಪವಿರುವ ಕಾಳೇನಹಳ್ಳಿ ಗ್ರಾಮದಲ್ಲಿ ಸ.ನಂ.30/5 ರಲ್ಲಿ 1.2 ಎಕರೆ ಜಮೀನಿದ್ದು, ಅದರಲ್ಲಿ ಮೇಕೆ ಫಾರ್ಮ್ ಕಟ್ಟಿಕೊಂಡು ಕಳೆದ ಐದು ವರ್ಷಗಳಿಂದ ಮೇಕೆ ಸಾಕಣಿ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಸಮೀಪದ ಕ್ರಷರ್‌ನಿಂದ ಧೂಳು ಕವಿದು ಮೇಕೆಗಳ ಮೇಲೆ ಪ್ರಭಾವ ಬೀರುತ್ತಾ ಅನಾರೋಗ್ಯಕ್ಕೀಡಾಗಿ ಸಾವಿನ ಸಂಖ್ಯೆ ಹೆಚ್ಚುತ್ತಿವೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಮಂಡ್ಯ ನ್ಯಾಯಾಲಯದ ಮೊರೆ ಹೋದ ರೈತ ಶರತ್‌ಕುಮಾರ್ ಅವರಿಗೆ ಮಧ್ಯಂತರ ಆದೇಶ ನೀಡಿ, ಕ್ರಷರ್‌ಗೆ ತಡೆಯಾಜ್ಞೆ ನೀಡಿದೆ. ಮೇಕೆಗಳ ಮೇಲೆ ಪರಿಣಾಮ ಬೀರುತ್ತಿರುವುದನ್ನು ಗಮನಿಸಿ ನ್ಯಾಯಾಲಯವು ಈ ಆದೇಶ ನೀಡಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಎಚ್.ಎಸ್.ಶರತ್ ಕುಮಾರ್ ಮಾತನಾಡಿ, ರೈತರ ಒಪ್ಪಿಗೆ ಇಲ್ಲದೇ ಅನಧಿಕೃತವಾಗಿ ನನ್ನ ಜಮೀನಿನ ಪಕ್ಕದಲ್ಲಿ ಎಂಟು ತಿಂಗಳಿಂದ ಎನ್.ಎನ್.ಸ್ಟೋನ್ ಕ್ರಷರ್ ನಡೆಸಲಾಗುತ್ತಿದೆ. ಇದರಿಂದ ಮೇಕೆ ಸಾಕಣೆಗೆ ತೀವ್ರ ತೊಂದರೆಯಾಗಿದೆ. ಎಂಟು ತಿಂಗಳಲ್ಲಿ ಒಟ್ಟು 28 ಮೇಕೆ ಸತ್ತು ಹೋಗಿವೆ. ಕಾನೂನಿಗೆ ಬೆಲೆ ಕೊಡಲಿಲ್ಲ ಎಂದರೆ, ರೈತರ ಜತೆಗೂಡಿ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ಗ್ರಾಮದ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಅಕ್ರಮ ಕ್ರಷರ್‌ಗಳ ಹಾವಳಿ ಹೆಚ್ಚಿದೆ. ಅರಣ್ಯಕ್ಕೆ ಸೇರಿದ ಸ್ಥಳಗಳನ್ನು ಗಣಿಗಾರಿಕೆಗಾಗಿ ಬಳಸುತ್ತಿದ್ದರೂ ಸಹ ಅರಣ್ಯ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಸಹ ತಲೆ ಕಡೆಸಿಕೊಳ್ಳದೇ ಇವರಿಗೇ ಸಾಥ್ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಮುಖಂಡರಾದ ವಿನಯ್‌ಕುಮಾರ್, ಶರತ್‌ಕುಮಾರ್, ವಿಶ್ವ ಇದ್ದರು.