ಜಿಲ್ಲೆ

ಸಂಸ್ಕಾರದ ಕೊರತೆಯಿಂದ ಪೋಕ್ಸೋ ಪ್ರಕರಣ ಹೆಚ್ಚಳ

ಗೋಪಾಲಕೃಷ್ಣ ಪಾದೂರ್

ಉಡುಪಿ: ಸಂವಿಧಾನ ಜಾರಿಗೆ ಬಂದು ಹಲವು ದಶಕಗಳಾದರೂ ಮೂಲಭೂತ ಹಕ್ಕು ಹಾಗೂ ಸೌಲಭ್ಯಗಳ ಕುರಿತು ಜನರಿಗೆ ಹೆಚ್ಚಿನ ತಿಳುವಳಿಕೆಗಳಿಲ್ಲ. ಕಾನೂನಿನಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದ್ದರೂ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿರುವುದು ಖೇದಕರ ಸಂಗತಿ. ಸಂಸ್ಕಾರದ ಕೊರತೆಯಿಂದ ಪೋಕ್ಸೊ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೆತ್ತವರು ಮಕ್ಕಳಿಗೆ ಜವಾಬ್ದಾರಿ ಕಲಿಸಿಕೊಡಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್​ಟಿಎಸ್​ಸಿ-1(ಪೊಕ್ಸೋ) ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಹೇಳಿದ್ದಾರೆ.

ಮಂಗಳವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾದ 'ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ' ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪೋಕ್ಸೋ ಕಾಯಿದೆಯಡಿ ದಾಖಲಾದ ಪ್ರಕರಣಗಳನ್ನು ಮಾಧ್ಯಮದಲ್ಲಿ ವರದಿ ಮಾಡುವಾಗ ಸಾಕಷ್ಟು ಎಚ್ಚರ ವಹಿಸಬೇಕು. ಪ್ರಕರಣದಲ್ಲಿ ನೊಂದ ಬಾಲಕ ಅಥವಾ ಬಾಲಕಿಯರ ಹೆಸರು, ವಿಳಾಸ ಸಹಿತ ಗುರುತನ್ನು ಪ್ರಕಟಿಸುವಂತಿಲ್ಲ. ಆ ರೀತಿಯ ತಪ್ಪು ಮಾಡಿದರೆ ಮಾಧ್ಯಮದವರ ಮೇಲೂ ಪ್ರಕರಣ ದಾಖಲಿಸಲು ಈ ಕಾಯ್ದೆ ಸೂಚಿಸುತ್ತದೆ. 18 ವರ್ಷದ ಕೆಳಗಿನ ನೊಂದ ಮಕ್ಕಳನ್ನು ಮಹಿಳಾ ಪೊಲೀಸರು ವಿಚಾರಣೆ ಮಾಡಬೇಕು. ಮಹಿಳಾ ವೈದ್ಯಾಧಿಕಾರಿಗಳೇ ವೈದ್ಯಕಿಯ ಪರೀಕ್ಷೆ ನಡೆಸಬೇಕು. ಯಾವುದೇ ಸಂದರ್ಭದಲ್ಲೂ ಸಾರ್ವಜನಿಕ ಸಂಪರ್ಕಕ್ಕೆ ತರಲು ಅವಕಾಶವಿಲ್ಲ ಎಂದರು.

ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾದರೆ ಆ ಬಗ್ಗೆ ವೈದ್ಯಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಬೇಕಾಗುತ್ತದೆ. ಇಂತಹ ದೌರ್ಜನ್ಯಗಳ ಬಗ್ಗೆ ಯಾರಿಗೂ ಮಾಹಿತಿ ಇರುತ್ತದೆಯೋ ಅವರು ಸಂಬಂಧಪಟ್ಟವರಿಗೆ ತಿಳಿಸಬೇಕು. ಇಲ್ಲದಿದ್ದರೆ ಅವರು ಕೂಡ ಅಪರಾಧಿಗಳಾಗುತ್ತಾರೆ. ಪ್ರಕರಣದ ವಿಚಾರಣೆಯನ್ನು 30 ದಿನಗಳೊಳಗೆ ಮುಗಿಸಬೇಕು. ಒಂದು ವರ್ಷದೊಳಗೆ ದೂರನ್ನು ಇತ್ಯರ್ಥಪಡಿಸಬೇಕಿದೆ ಎಂದರು.

ಮುಖ್ಯ ಅತಿಥಿಯಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್​. ಮಾತನಾಡಿ, ಪೋಕ್ಸೊ ಪ್ರಕರಣಕ್ಕೆ ಮೂಲ ಕಾರಣ ಮೊಬೈಲ್​ ಬಳಕೆ. ಮಕ್ಕಳು ಮೊಬೈಲ್​ ಜಾಸ್ತಿ ಬಳಸುತ್ತಿದ್ದರೆ ಅವರ ಮೇಲೆ ಗಮನ ಹರಿಸಬೇಕಾಗಿರುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಪೋಕ್ಸೊ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಿಚಾರ ಮಂಡಿಸಿದರು. ಸಂಘದ ಅಧ್ಯಕ್ಷ ರಾಜೇಶ್​ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು. ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್​ ಆರಾಡಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್​ ಪೊಲ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಉಮೇಶ್​ ಮಾರ್ಪಳ್ಳಿ ವಂದಿಸಿದರು. ಕಾರ್ಯದರ್ಶಿ ರಾಜೇಶ್​ ಅಚ್ಲಾಡಿ ಕಾರ್ಯಕ್ರಮ ನಿರೂಪಿಸಿದರು.