ಜಿಲ್ಲೆ

ವಿದ್ಯಾರ್ಥಿಗಳಿಗೆ ಫೋಟೋಗ್ರಫಿ ಕಾರ್ಯಾಗಾರ

ಗೋಪಾಲಕೃಷ್ಣ ಪಾದೂರ್

ಉಡುಪಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ರಜತ ಮಹೋತ್ಸವ ಸಮಿತಿ, ಪತ್ರಿಕಾ ಭವನ ಸಮಿತಿ ಆಶ್ರಯದಲ್ಲಿ ಸೌತ್​ ಕೆನರಾ ಫೋಟೋಗ್ರಾಫರ್ಸ್​ ಅಸೋಸಿಯೇಶನ್​ ಉಡುಪಿ ವಲಯ ಸಹಯೋಗದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಪ್ರತಿಕೋದ್ಯಮ ವಿದ್ಯಾರ್ಥಿಗಳಿಗೆ ಫೋಟೋಗ್ರಫಿ ಕಾರ್ಯಾಗಾರ ಆ.19ರಂದು ಬೆಳಗ್ಗೆ 10ಗಂಟೆಗೆ ಉಡುಪಿ ನಾಯರ್​ಕೆರೆಯ ಐಎಂಎ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರಾಜೇಶ್​ ಶೆಟ್ಟಿ ಅಲೆವೂರು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಾಗಾರವನ್ನು ಮಲ್ಪೆ ಕರಾವಳಿ ಕಾವಲು ಪೊಲೀಸ್​ ಅಧೀಕ್ಷಕ ಅಬ್ದುಲ್​ ಅಹದ್​ ಉದ್ಘಾಟಿಸಲಿರುವರು. ಛಾಯಾಚಿತ್ರ ಪ್ರದರ್ಶನವನ್ನು ಸೌತ್​ ಕೆನರಾ ಫೋಟೋಗ್ರಾಫರ್ಸ್​ ಅಸೋಸಿಯೇಶನ್​ ಉಡುಪಿ ವಲಯ ಅಧ್ಯಕ್ಷ ಜನಾರ್ದನ ಕೊಡವೂರು, ಹಳೆ ಕ್ಯಾಮೆರಾಗಳ ಪ್ರದರ್ಶನವನ್ನು ಉದ್ಯಮಿ ಶ್ರೀಶ ನಾಯಕ್​ ಪೆರ್ಣಂಕಿಲ ಉದ್ಘಾಟಿಸಲಿದ್ದಾರೆ ಎಂದರು.

ಫೋಟೋಗ್ರಫಿ ಕಾರ್ಯಾಗಾರವನ್ನು ಛಾಯಾಚಿತ್ರ ಪತ್ರಕರ್ತ ಅಸ್ಟ್ರೋ ಮೋಹನ್​, ನುಡಿಚಿತ್ರ ಕಾರ್ಯಾಗಾರವನ್ನು ಹಿರಿಯ ಉಪಸಂಪಾದಕ ಸುಶೀಲೇಂದ್ರ ಕುಟುಪಾಡಿ ನಡೆಸಿಕೊಡಲಿದ್ದಾರೆ. ಈ ಕಾರ್ಯಾಗಾರದಲ್ಲಿ ಉಡುಪಿ ಅಜ್ಜರಕಾಡು ಮಹಿಳಾ ಪ್ರಥಮ ದರ್ಜೆ ಕಾಲೇಜು, ಉಡುಪಿ ಎಂಜಿಎಂ ಕಾಲೇಜು, ಕಾರ್ಕಳ ಎಂಪಿಎಂ ಕಾಲೇಜು ಮತ್ತು ಕುಂದಾಪುರ ಭಂಡಾರ್​ಕಾರ್ಸ್​ ಕಾಲೇಜಿನ ಪತ್ರಿಕೋದ್ಯಮ ವಿಭಾಗದ 50ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಛಾಯಾಚಿತ್ರ ಪ್ರದರ್ಶನದಲ್ಲಿ ಸಂಘದ ಸದಸ್ಯರು ತೆಗೆದ 20ಕ್ಕೂ ಅಧಿಕ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಹಳೆಯ ವಿಡಿಯೋ ಹಾಗೂ ಫೋಟೋ ಕ್ಯಾಮೆರಾಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ರಜತ ಮಹೋತ್ಸವ ಸಮಿತಿಯ ಸಂಚಾಲಕ ಮುಹಮ್ಮದ್​ ಶರೀಫ್​, ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ, ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್​ ಪೊಲ್ಯ, ಕೋಶಾಧಿಕಾರಿ ಉಮೇಶ್​ ಮಾರ್ಪಳ್ಳಿ, ಪತ್ರಿಕಾ ಭವನ ಸಮಿತಿ ಸಂಚಾಲಕ ಅಜಿತ್​ ಆರಾಡಿ ಉಪಸ್ಥಿತರಿದ್ದರು.