ಜಿಲ್ಲೆ

ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ

ಸುನಿಲ್ ಪೊನ್ನೇಟಿ

ಮಡಿಕೇರಿ:

ಇತ್ತೀಚಿನ ಕಾಲಘಟ್ಟದಲ್ಲಿ ಅತೀ ವೇಗವಾಗಿ ಹರಡುತ್ತಿರುವ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕಾದರೆ, ಸಾಮಾಜಿಕ ಜಾಲತಾಣದಲ್ಲಿ ಪತ್ರಿಕಾ ಮಾಧ್ಯಮ ಹಿಡಿತ ಸಾಧಿಸುವ ಅನಿವಾರ್ಯತೆ ಇದೆ ಎಂದು ಕೊಡಗು ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ(ಪರೀಕ್ಷಾಂಗ) ಮೇಚಿರ ರವಿಶಂಕರ್ ನಾಣಯ್ಯ ಹೇಳಿದರು. ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಕೊಡಗು ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಬದುಕಿನ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಮಾನವೀಯ ಮೌಲ್ಯಗಳನ್ನು ಮರೆತಿರುವುದು ಸಮಾಜದ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಜನರಲ್ಲಿ ಮತ್ತೆ ಮೌಲ್ಯಗಳನ್ನು ಮೂಡಿಸುವಲ್ಲಿ ಪತ್ರಿಕಾ ಮಾಧ್ಯಮದ ಪಾತ್ರ ಮಹತ್ತರವಾಗಿದೆ. ಮನೆಯೇ ಮೊದಲ ಪಾಠ ಶಾಲೆ ಎಂಬ ಮಾತಿನಂತೆ ಪೋಷಕರು ಮಕ್ಕಳಿಗೆ ಎಳೆ ವಯಸ್ಸಿನಿಂದಲೇ ಜೀವನದ ಮೌಲ್ಯಗಳನ್ನು ಕಲಿಸಿಕೊಡಬೇಕು.

ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಇದ್ದಂತೆ. ಈ ವೃತ್ತಿಯನ್ನು ಜವಾಬ್ದಾರಿಯುತವಾಗಿ ನಿಷ್ಠೆಯಿಂದ ನಿಭಾಯಿಸುವುದು ಕಷ್ಟಕರ. ಸಾಮಾಜಿಕ ಬದಲಾವಣೆಯನ್ನು ತರುವ ಮತ್ತು ಜನಾಭಿಪ್ರಾಯ ರೂಪಿಸುವ ಜವಾಬ್ದಾರಿ ಪತ್ರಕರ್ತರದ್ದಾಗಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳು ಜನರನ್ನು ಬೇಗ ತಲುಪುತ್ತಿರುವುದರಿಂದ, ಮುಖ್ಯ ವಾಹಿನಿಯಲ್ಲಿರುವ ಮಾಧ್ಯಮದ ಹಿಡಿತ ಸಡಿಲವಾಗುತ್ತಿದೆ. ಇದು ಸಮಾಜಕ್ಕೆ ಮಾರಕವಾಗಿದ್ದು, ಪತ್ರಿಕಾ ಮಾಧ್ಯಮವು ಸಾಮಾಜಿಕ ಜಾಲತಾಣಗಳಲ್ಲಿ ಹಿಡಿತ ಸಾಧಿಸುವ ಮೂಲಕ ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸಬೇಕೆಂದರು.

ಮಡಿಕೇರಿ ತಾಲೂಕು ಎಸ್‌ಎನ್‌ಡಿಪಿ ಅಧ್ಯಕ್ಷ ಟಿ.ಆರ್. ವಾಸುದೇವ್ ಮಾತನಾಡಿ, ಪತ್ರಿಕೋದ್ಯಮ ಜನರ ಧ್ವನಿಯಾಗಿದೆ. ಪತ್ರಕರ್ತರಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದ್ದು, ಅವರು ಶಿಕ್ಷಕರಿದ್ದಂತೆ. ತಮ್ಮ ಶ್ರಮ ಹಾಗೂ ಬದ್ಧತೆಯಿಂದ ಸಾಮಾಜಿಕ ಅಭಿವೃದ್ದಿಗೆ ಕಂಕಣಬದ್ಧರಾಗಿದ್ದಾರೆ. ಖಡ್ಗಕ್ಕಿಂತ ಲೇಖನಿ ಹರಿತ ಎಂಬAತೆ ತಮ್ಮ ಪ್ರಭಾವಶಾಲಿ ಬರಹಗಳಿಂದ ಸಮಾಜದ ಅಂಕು-ಡೊಂಕನ್ನು ತಿದ್ದುತ್ತಾ ಸದಾ ಸಮಾಜದ ಪರ ಕೆಲಸ ಮಾಡುವ ಪತ್ರಕರ್ತರ ಸೇವೆ ಶ್ಲಾಘನೀಯ ಎಂದು ಹೇಳಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಕೊಡಗಿನ ಆರಂಭದ ಪತ್ರಿಕೋದ್ಯಮಕ್ಕೂ ಇತ್ತೀಚಿನ ಪತ್ರಿಕೋದ್ಯಮಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಆಗಿನ ಪತ್ರಕರ್ತರಲ್ಲಿ ಇದ್ದ ಆಸಕ್ತಿ ಈಗಿನವರಲ್ಲಿ ಇಲ್ಲದಾಗಿದೆ. ಪ್ರಶಸ್ತಿಗಳು ಪತ್ರಕರ್ತರ ಇರುವಿಕೆ ಮತ್ತು ತೂಕವನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಪತ್ರಕರ್ತರು ವಿಶೇಷ ವರದಿಗಳ ಮೂಲಕ ಗಮನ ಸೆಳೆಯಬೇಕು ಎಂದು  ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಕೊಡಗಿನ ಪತ್ರಕರ್ತರು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಯುವ ಪತ್ರಕರ್ತರು ಪತ್ರಿಕೋದ್ಯಮದತ್ತ ಮುಖ ಮಾಡಬೇಕು. ಇಲ್ಲಿ ಸಾಕಷ್ಟು ಅವಕಾಶಗಳಿದ್ದು, ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಇದು ಉತ್ತಮ ಕ್ಷೇತ್ರ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅಧ್ಯಕ್ಷತೆಯಲ್ಲಿ ಸಂಘದ ಮಹಾಸಭೆ ನಡೆಯಿತು. ವೇದಿಕೆಯಲ್ಲಿ ಸಂಘದ ಪ್ರ.ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್, ಹಿರಿಯ ಉಪಾಧ್ಯಕ್ಷ ನವೀನ್ ಡಿಸೋಜ, ಉಪಾಧ್ಯಕ್ಷೆ ವನಿತಾ ಚಂದ್ರಮೋಹನ್, ಖಜಾಂಚಿ ತೇಜಸ್ ಪಾಪಯ್ಯ, ಸಂಘಟನಾ ಕಾರ್ಯದರ್ಶಿ ಕೆ.ಜೆ.ಶಿವರಾಜ್, ಸಹ ಕಾರ್ಯದರ್ಶಿ ವಿ.ವಿ ಅರುಣ್ ಕುಮಾರ್, ನಿರ್ದೇಶಕರಾದ ಬಿ.ಆರ್ ಸವಿತಾ ರೈ, ಕೆ.ಎಂ. ವಿನೋದ್, ಮಾಗುಲು ಲೋಹಿತ್, ಕೆ.ಎಸ್ ಲೋಕೇಶ್, ಬಿ.ಜಿ ಮಂಜು, ಕೆ.ಎಂ ಇಸ್ಮಾಯಿಲ್ ಉಪಸ್ಥಿತರಿದ್ದರು.