ನಗರದ ಪ್ರಮುಖ ರಸ್ತೆಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಮುಸ್ಲಿಂ ಮುಖಂಡರು ಮೆರವಣಿಗೆ ನಡೆಸಿ ಸಂಭ್ರಮಿಸಿದರು. 
ಜಿಲ್ಲೆ

ಹುಣಸೂರು ನಗರಸಭೆ ಮಾಲಿಕ್ ಪಾಷಾ ಅಧ್ಯಕ್ಷ

ಹುಣಸೂರು: ಹುಣಸೂರು ನಗರಸಭೆಯ ನೂತನ ಅಧ್ಯಕ್ಷರಾಗಿ 13ನೇ ವಾರ್ಡ್‌ನ ಪಕ್ಷೇತರ ಸದಸ್ಯ ಮಾಲಿಕ್ ಪಾಷಾ ಅವಿರೋಧವಾಗಿ ಆಯ್ಕೆಯಾದರು.

ಗುರುವಾರ ನಗರಸಭೆಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಾಲಿಕ್ ಪಾಷಾ ಹೊರತುಪಡಿಸಿ ಬೇರ‌್ಯಾರು ನಾಮಪತ್ರ ಸಲ್ಲಿಸದಿದ್ದರಿಂದ ಚುನಾವಣಾಧಿಕಾರಿ ಎಚ್.ಬಿ.ವಿಜಯಕುಮಾರ್ ಆವಿರೋಧ ಆಯ್ಕೆ ಘೊಷಿಸಿದರು.

ಮುಂದಿನ ಎರಡು ತಿಂಗಳ ಅವಧಿಗಾಗಿ ನಡೆದ ಅಧ್ಯಕ್ಷಗಾದಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. 14 ಸದಸ್ಯರನ್ನೊಳಗೊಂಡ ಕಾಂಗ್ರೆಸ್ ಪಕ್ಷದ 11 ಮಂದಿ ಸದಸ್ಯರು ಗೈರಾಗಿದ್ದರೆ, ಬಂಡಾಯವೆದ್ದು ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿದ್ದ ಸದಸ್ಯರಾದ ಗೀತಾ ನಿಂಗರಾಜು, ಶ್ವೇತಾ ಮಂಜುನಾಥ್ ಮತ್ತು ದೇವನಾಯ್ಕ ಮಾಲಿಕ್ ಪಾಷರಿಗೆ ಬೆಂಬಲ ಸೂಚಿಸಿದರು. ವಿಶೇಷವೆಂದರೆ ಎಸ್‌ಡಿಪಿಐನ ಇಬ್ಬರು ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿ ಮಾಲಿಕ್ ಪಾಷರಿಗೆ ಬೆಂಬಲ ಸೂಚಿಸುವ ಮೂಲಕ ಆಶ್ಚರ್ಯ ಮೂಡಿಸಿದರು.

31 ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಜೆಡಿಎಸ್‌ನ 7 ಸದಸ್ಯರು, ಬಿಜೆಪಿಯ 3, ಬಂಡಾಯ ಕಾಂಗ್ರೆಸ್‌ನ 3, ನಾಲ್ವರು ಪಕ್ಷೇತರರು ಮತ್ತು ಎಸ್‌ಡಿಪಿಐನ ಇಬ್ಬರು ಸದಸ್ಯರನ್ನೊಳಗೊಂಡ 20 ಸದಸ್ಯರ ಬೆಂಬಲದಿಂದ ಆಯ್ಕೆಯಾದರು.

ಚುನಾವಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಜಿ.ಡಿ.ಹರೀಶ್‌ಗೌಡ, ನಾನು ಶಾಸಕನಾಗಿ ಅಧಿಕಾರಕ್ಕೆ ಬಂದ ಮೇಲೆ ಸಾಮಾಜಿಕ ನ್ಯಾಯದಡಿ ಬಿಜೆಪಿ-ಜೆಡಿಎಸ್ ಮೈತ್ರಿಅಭ್ಯರ್ಥಿಯಾಗಿ ಸೂಕ್ಷ್ಮಾತಿಸೂಕ್ಷ್ಮ ಸಮುದಾಯದ ಜೆಡಿಎಸ್ ಸದಸ್ಯ ಎಸ್.ಶರವಣ, ಬಿಜೆಪಿ ಸದಸ್ಯ ಗಣೇಶ್ ಕುಮಾರಸ್ವಾಮಿ ಅಧ್ಯಕ್ಷರಾದರು. ಇದೀಗ ಅಲ್ಪಸಂಖ್ಯಾತ ಸಮುದಾಯಕ್ಕೂ ನ್ಯಾಯ ಒದಗಿಸಿದ್ದೇನೆ. ನಗರದ ಸಮಗ್ರ ಅಭಿವೃದ್ಧಿಗಾಗಿ ಎಲ್ಲ ಪಕ್ಷದವರನ್ನೂ ಒಂದಾಗಿ ಕರೆದೊಯ್ಯುತ್ತಿದ್ದೇನೆ. ಕಳೆದ ಅಧಿವೇಶನದಲ್ಲಿ ನಾನು ನಗರ ವ್ಯಾಪ್ತಿಯ ರಸ್ತೆಗಳ ದುಸ್ಥಿತಿ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿದ್ದೆ. ಇದೀಗ ಪೌರಾಡಳಿತ ಇಲಾಖೆ 1.5 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಿದ್ದು, ಟೆಂಡರ್ ಪ್ರಕ್ರಿಯೆ ನಡೆದಿದೆ. ನಗರೋತ್ಥಾನ ಯೋಜನೆಯಡಿ ನಗರ ವ್ಯಾಪ್ತಿಯಲ್ಲಿ ಕಾಮಗಾರಿ ವಿಳಂಬವಾಗುತ್ತಿರುವುದರ ಕುರಿತು ದೂರುಗಳು ಬಂದಿದ್ದು, ಪರಿಶೀಲಿಸಿ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ನೂತನ ಅಧ್ಯಕ್ಷ ಮಾಲಿಕ್ ಪಾಷಾ ಮಾತನಾಡಿ, ನಗರದಲ್ಲಿ ಬೀದಿದೀಪಗಳು, ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಕರ್ತವ್ಯ ನಿರ್ವಹಿಸಲಿದ್ದೇನೆ ಎಂದರು.

ಈ ವೇಳೆ ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ನಿಕಟಕ ಪೂರ್ವ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಎಸ್.ಶರವಣ, ಸದಸ್ಯರಾದ ಕೃಷ್ಣರಾಜಗುಪ್ತ, ಎಚ್.ಪಿ.ಸತೀಶ್‌ಕುಮಾರ್, ದೇವನಾಯ್ಕ, ಶಾಯಿನ್ ತಾಜ್, ಗೀತಾ ನಿಂಗರಾಜು, ದೇವರಾಜ್, ರಾಣಿ ಪೆರುಮಾಳ್, ಶ್ರೀನಾಥ್, ರಮೇಶ್ ದೊಡ್ಡಹೆಜ್ಜೂರು ಇತರರಿದ್ದರು.

ತೆರೆದ ಜೀಪಿನಲ್ಲಿ ಮೆರವಣಿಗೆ: ಜೆಡಿಎಸ್ ಕಾರ್ಯಕರ್ತರು ಮತ್ತು ಮುಸ್ಲಿಂ ಯುವಕರು ಶಾಸಕ ಜಿ.ಡಿ.ಹರೀಶ್‌ಗೌಡ ಮತ್ತು ಅಧ್ಯಕ್ಷ ಮಾಲಿಕ್ ಪಾಷ ಅವರನ್ನು ತೆರೆದ ಜೀಪಿನಲ್ಲಿ ನಿಲ್ಲಿಸಿಕೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ದಾರಿಯುದ್ದಕ್ಕೂ ಜೆಸಿಬಿಯ ಮೂಲಕ ಅಲ್ಲಲ್ಲಿ ಶಾಸಕರ ಮೇಲೆ ಪುಷ್ಪವೃಷ್ಟಿಗೈದರು.