ಜಿಲ್ಲೆ

ಗದಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಬಳ್ಳಾರಿ

ಗದಗ: ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಗದಗ ತಾಲೂಕಿನ ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜ ಬಳ್ಳಾರಿ ಅವರು ಗೆಲುವು ಸಾಧಿಸಿದರು.

ಒಟ್ಟು ಅರ್ಹ 69 ಮತಗಳ ಪೈಕಿ 68 ಮತಗಳು ಚಲಾವಣೆಗೊಂಡವು. 55 ಮತಗಳನ್ನು ಬಸವರಾಜ ಬಳ್ಳಾರಿ ಪಡೆದರೆ ಪ್ರತಿಸ್ಪರ್ಧಿ ನಾಗರಾಜ ಹಳ್ಳಿಕೇರಿ ಅವರು 13 ಮತಗಳನ್ನು ಪಡೆದರು.

ಧಾರವಾಡ ಜಿಲ್ಲೆ ವಿಭಜನೆಗೊಂಡು ಗದಗ ಜಿಲ್ಲೆ ರಚನೆ ಬಳಿಕ ಇದೇ ಮೊದಲ ಬಾರಿಗೆ ಸರ್ಕಾರಿ ನೌಕರ ಸಂಘಕ್ಕೆ ಚುನಾವಣೆ ಜರುಗಿದ್ದು ವಿಶೇಷ. ಈ ಹಿಂದೆ ಅವಿರೋಧ ಆಯ್ಕೆಗಳು ನಡೆದಿದ್ದವು. 2000ರಿಂದ 2013ರ ವರೆಗೆ ಮೂರು ಅವಧಿಗೆ ಖಜಾನೆ ಇಲಾಖೆಯ ಪ್ರೇಮನಾಥ ಆಯ್ಕೆ ಆಗಿದ್ದರು. 2013ರಿಂದ 2025ರವರೆಗೆ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರ ರವಿಗುಂಜೀಕರ ಅವಿರೊಧ ಆಯ್ಕೆಗೊಂಡಿದ್ದರು. ಅವರ ನಂತರ ಬಸವರಾಜ ಬಳ್ಳಾರಿ ಅವರನ್ನು ಸಂಘದ ಸಂಪ್ರದಾಯದಂತೆ ಕೆಲ ತಿಂಗಳ ಹಿಂದೆ ಸರ್ಕಾರಿ ನೌಕರ ಸಂಘದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರದಂದು ಬಸವರಾಜ ಬಳ್ಳಾರಿ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿತ್ತು. ಆದರೆ, ಈ ಪ್ರಕ್ರಿಯೆ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ವಿರೋಧಿ ಬಳಗವು ರಾಜ್ಯ ಸಂಘಕ್ಕೆ ದೂರು ನೀಡಿತ್ತು ಎನ್ನಲಾಗಿದೆ. ಹೀಗಾಗಿ ಚುನಾವಣೆ ನಡೆಸುವುದು ಅನಿವಾರ್ಯವಾಯಿತು.

ಜಿದ್ದಾಜಿದ್ದಿ:

ಮೂಲಗಳ ಪ್ರಕಾರ, ಬಳ್ಳಾರಿ ಅವರ ಗೆಲುವು ನಿಶ್ಚಿತವಾಗಿದ್ದರೂ ಕೂಡ ವಿರೋಧಿ ಬಣ ನಿಯಮದಂತೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಿ ನೌಕರ ಸಂಘದ ಮೇಲೆ ಪ್ರಭಾವ ಬೀರಿತ್ತು ಎನ್ನಲಾಗಿದೆ. ಅನಗತ್ಯ ಚುನಾವಣೆ ನಡೆಸದಂತೆಯೂ ಉನ್ನತ ಮಟ್ಟದ ಸಭೆ ನಡೆದಿದ್ದವು ಎನ್ನಲಾಗಿದೆ. ಆದರೆ ಸ್ವಪ್ರತಿಷ್ಠೆಗಾಗಿ ಚುನಾವಣೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ಭದ್ರತೆ:

ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಭವನಕ್ಕೆ ಬಿಗಿ ಭದ್ರತೆ ಒದಗಿಸಲಾಗಿತ್ತು. ನಿಷೇಧಾಜ್ಞೆ ಜಾರಿಮಾಡಲಾಗಿತ್ತು.  ಬಸವರಾಜ ಬಳ್ಳಾರಿ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಡಾ. ರವಿ ಗುಂಜೀಕರ್ ಹಾಗೂ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ವಿತರಿಸಿ, ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು. ನೌಕರರ ಭವನದ ಮುಂದಿನ ಪಂ. ಪುಟ್ಟರಾಜರ ದೇವಸ್ಥಾನದ ಆವರಣದಲ್ಲಿ ವಿಜಯೋತ್ಸವ ಆಚರಿಸಿ ಸಂಭ್ರಮ ಹಂಚಿಕೊಂಡರು.

ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಬುನಾದಿ. ಅದನ್ನು ವಿರೋಧಿಸಲಾಗದು. ನನ್ನನ್ನು ಬೆಂಬಲಿಸಿದ ಮತ್ತು ಬೆಂಬಲಿಸದ ಎಲ್ಲ ಸರ್ಕಾರಿ ನೌಕರರು ನನ್ನವರೇ ಆಗಿದ್ದಾರೆ. ಜಿಲ್ಲೆಯ ಸರ್ಕಾರಿ ನೌಕರ ಸಂಘದ ಚಟುವಟಿಕೆಗಳನ್ನು ರಾಜ್ಯಮಟ್ಟದಲ್ಲಿ ಬಿಂಬಿಸುವಂತೆ ಮಾಡುತ್ತೇನೆ. ಬಸವರಾಜ ಬಳ್ಳಾರಿ, ಜಿಲ್ಲಾ ಸರ್ಕಾರಿ ನೌಕರಸಂಘದ ಅಧ್ಯಕ್ಷ. ಬಸವರಾಜ ಬಳ್ಳಾರಿ ನೇತೃತ್ವದಲ್ಲಿ ಸರ್ಕಾರಿ ನೌಕರ ಸಂಘ ಮಾದರಿ ಸಂಘ ಆಗಲಿದೆ. ರಾಜ್ಯ ಸರ್ಕಾರಿ ಸಂಘವು ಪೂರಕವಾಗಿ ಸ್ಪಂದಿಸಲಿದೆ.  ರವಿ ಗುಂಜೀಕರ, ನಿಕಟಪೂರ್ವ ಅಧ್ಯಕ್ಷ