ಜಿಲ್ಲೆ

ಪ್ರಧಾನಿ ಮೋದಿಗೆ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷರ ಅಭಿನಂದನೆ

ಬೆಂಗಳೂರು: ಮಹಾರಾಷ್ಟ್ರದಲ್ಲಿ ಬಂಜಾರ ಮ್ಯೂಸಿಯಂ ಲೋಕಾರ್ಪಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್. ಗೋವಿಂದಸ್ವಾಮಿ ಅಭಿನಂದಿಸಿದ್ದಾರೆ.

ಬಂಜಾರ ಭಾಷೆ ಭಾರತ ಮಾತ್ರವಲ್ಲ ವಿಶ್ವದ ನೂರಕ್ಕೂ ಹೆಚ್ಚು ದೇಶಗಳಲ್ಲಿದೆ. ಇಂತಹ ಶ್ರೀಮಂತ ಸಂಸ್ಕೃತಿ ಹಾಗೂ ಭಾಷೆಯನ್ನು ಹೊಂದಿರುವ ಬುಡಕಟ್ಟು ಬಂಜಾರ ಜನಾಂಗ ಪ್ರಸ್ತುತ ಭಾಷೆಯಿಂದ ವಂಚಿತವಾಗುತ್ತಿದೆ. ಬಂಜಾರರ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಹೀಗಾಗಿ ಬಂಜಾರ ಭಾಷೆ ಬೆಳವಣಿಗೆಯ ಹಿತದೃಷ್ಟಿಯಿಂದ ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದ ಅದೀನದಲ್ಲಿ ಬರುವ ಆಕಾಶವಾಣಿ, ದೂರದರ್ಶನದ ಸಂಗೀತ ಹಾಗೂ ನಾಟಕ ವಿಭಾಗ ಸೇರಿದಂತೆ ಇತರೆ ಬಂಜಾರ ಕೇಂದ್ರಗಳಲ್ಲಿ ಭಾಷೆಯನ್ನು ಬಿತ್ತರಿಸುವ ಹಾಗೂ ಬಂಜಾರ ಸಂಸ್ಕೃತಿ ಮತ್ತು ಭಾಷೆಯನ್ನು ದೇಶದಲ್ಲಿ ಪಸರಿಸಲು ಮತ್ತು ಬೆಳಸಲು ಅಗತ್ಯ ಸೂಚನೆ ನೀಡುವಂತೆ ಪ್ರಧಾನಿಯನ್ನು ಕೋರಿದ್ದಾರೆ.

ಮಹಾರಾಷ್ಟ್ರದಲ್ಲಿ ನಿರ್ಮಿಸಿರುವ ಬಂಜಾರ ಅಸ್ಮಿತೆಯ ಮ್ಯೂಸಿಯಂ ರೀತಿಯಲ್ಲಿಯೇ ಕರ್ನಾಟಕದಲ್ಲೂ ಒಂದು ಮ್ಯೂಸಿಯಂ ನಿರ್ಮಿಸುವ ಆಕಾಂಕ್ಷೆಯಿದೆ. ಪ್ರದಾನಿಯವರಿಂದ ಈ ಕಾರ್ಯವನ್ನು ಸಮುದಾಯ ನಿರೀಕ್ಷಿಸುತ್ತಿದ್ದು, ಇಂತಹ ಕೆಲಸಕ್ಕೆ ಅಕಾಡೆಮಿಯು ಅಗತ್ಯ ಸಹಕಾರ ನೀಡಲಿದೆ ಎಂದು ಗೋವಿಂದಸ್ವಾಮಿ ಮನವಿ ಮಾಡಿದ್ದಾರೆ.