ಜಿಲ್ಲೆ

ಮುಂದಿನ ಪೀಳಿಗೆಗಾಗಿ ಬೀಜ ವೈವಿಧ್ಯ ಸಂರಕ್ಷಿಸಿ : ಜಾನಪದ ತಜ್ಞ ಪ್ರೊ.ಕಾಳೇಗೌಡ ನಾಗವಾರ ಸಲಹೆ

ಮೈಸೂರು: ರೈತರು ತಲೆಮಾರುಗಳಿಂದ ಕಾಪಾಡಿಕೊಂಡು ಬಂದಿರುವ ಬೀಜ ವೈವಿಧ್ಯವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೀಡಬೇಕು ಎಂದು ಜಾನಪದ ತಜ್ಞ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.

ಸಹಜ ಸಮೃದ್ಧ ಮತ್ತು ಸಹಜ ಸೀಡ್ಸ್‌ನಿಂದ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿದ್ದ ಎರಡು ದಿನಗಳ ದೇಸಿ ಬೀಜೋತ್ಸವದಲ್ಲಿ ಭಾನುವಾರ ‘ಭವಿಷ್ಯಕ್ಕಾಗಿ ದೇಸಿ ಬೀಜಗಳು’ ಚಿತ್ರಕಲಾ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ದೇಸಿ ಬೀಜ ಸಂಸ್ಕೃತಿಯ ಮಹತ್ವವನ್ನು ಎಳೆಯ ಮಕ್ಕಳಿಗೆ ತಿಳಿಸಿ ಹೇಳಲು ಚಿತ್ರಕಲಾ ಸ್ಪರ್ಧೆ ಸಹಕಾರಿಯಾಗಿದೆ. ಪಾಲಕರಿಗೂ ನಮ್ಮ ಬೀಜ ಸಂಸ್ಕೃತಿಯ ಪರಿಚಯವಾಗುತ್ತದೆ. ದೇಸಿ ಬೀಜಗಳು ಆಯಾ ಪ್ರದೇಶದ ಆಹಾರ ಸಂಸ್ಕೃತಿ, ಕೃಷಿ ಪರಂಪರೆಯನ್ನು ಪ್ರತಿನಿಧಿಸುತ್ತವೆ. ಆಹಾರ ಭದ್ರತೆ ಒದಗಿಸುತ್ತವೆ. ಇಂಥ ಬೀಜಗಳನ್ನು ಉಳಿಸಿ ಬೆಳೆಸುವುದು ಇಂದಿನ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಚಿತ್ರಕಲಾವಿದ ಶಿವಕುಮಾರ್ ಮಾತನಾಡಿ, ಪ್ರತಿ ಮಕ್ಕಳ ಚಿತ್ರವೂ ಕಲಾಕೃತಿ. ಅದಕ್ಕೆ ಬಹುಮಾನದ ಚೌಕಟ್ಟು ಹಾಕಿ, ಮಕ್ಕಳ ಸೃಜನಶೀಲತೆಯನ್ನು ಕುಗ್ಗಿಸಬಾರದು. ಅದು ಜಾಗೃತಿ ಮೂಡಿಸಿ ಉತ್ತೇಜಿಸುವಂತಾಗಬೇಕು. ಚಿತ್ರಕಲಾ ಸ್ಪರ್ಧೆಯ ಮೂಲಕ ಮಕ್ಕಳಿಗೆ ದೇಸಿ ಬೀಜಗಳ ಬಗ್ಗೆ ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿತ್ತು. ಅದು ಸಾರ್ಥಕವಾಗಿದೆ. ಮಕ್ಕಳು ಬೀಜ ಲೋಕದ ಒಳಹೊಕ್ಕು ಬಂದಿದ್ದಾರೆ ಎಂದು ವಿಶ್ಲೇಷಿಸಿದರು.

ಭತ್ತ ಸಂರಕ್ಷಕ ಶ್ರೀನಿವಾಸ ಮೂರ್ತಿ ಮಾತನಾಡಿ, ಬೀಜಗಳು ಕುತೂಹಲ ಮತ್ತು ಸೃಜನಶೀಲತೆಯನ್ನು ಅರಳಿಸುವ ನಿಸರ್ಗದ ಕಲಾಕೃತಿ. ಬೀಜ ಸಂಸ್ಕೃತಿ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಲು ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ. ಈ ಮೂಲಕ ದೇಸಿ ಬೀಜಗಳ ಮಹತ್ವ ಪಾಲಕರಿಗೂ ತಲುಪಿನಂತಾಗಿದೆ ಎಂದರು.

ಫ್ರಾನ್ಸ್ ದೇಶದ ಪಾಲ್ ಲಿನ್ನೆ, ಜೆನ್ನಿಲೆ, ಮಾರ್ಕ್ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿ.ಎನ್.ಕೇಶವಮೂರ್ತಿ, ಕೆ.ಎಸ್.ಮಂಜು ನಿರ್ವಹಣೆ ಮಾಡಿದರು.

ಬಹುಮಾನ ವಿಜೇತರು:

5 ರಿಂದ 7ವರ್ಷ ವಿಭಾಗದಲ್ಲಿ ಮನ್ವಿತಾ ಪ್ರಥಮ, ಯುಕ್ತಾಶೈವ ದ್ವಿತೀಯ ಮತ್ತು ಎಂ.ಪಿ.ರಿತವ್ ತೃತೀಯ ಬಹುಮಾನ ಗಳಿಸಿದರು. 8ರಿಂದ 12 ವರ್ಷ ವಿಭಾಗದಲ್ಲಿ ತೀರ್ಥ್‌ಸೋನಿ ಪ್ರಥಮ, ಪುನರ್‌ದತ್ತ ದ್ವಿತೀಯ ಮತ್ತು ಆರ್ಯ ತೃತೀಯ ಬಹುಮಾನ ಗಳಿಸಿದರು. ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಭತ್ತದ ತಳಿಗಳ ಬಿಡುಗಡೆ

ದಾವಣಗೆರೆ ಜಿಲ್ಲೆಯ ಹರಿಹರದ ಕುಂಬಳೂರಿನ್ ಆಂಜನೇಯ 200 ಕ್ಕೂ ಹೆಚ್ಚಿನ ದೇಸಿ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡುವ ಮೂಲಕ ಭತ್ತದ ಬೀಜ ಬ್ಯಾಂಕ್ ಆರಂಭಿಸಿದ್ದಾರೆ. ಮೇಳದಲ್ಲಿ ಇವರ ಸಂರಕ್ಷಣೆ ಮಾಡಿರುವ ತಳಿಗಳನ್ನು ಬಿಡುಗಡೆ ಮಾಡಲಾಯಿತು.

ಅಂಜನೇಯ ಅಭಿವೃದ್ಧಿಪಡಿಸಿದ ‘ಸಿಂಧೂರ ಮಧುಸಾಲೆ’, ‘ಅಂದನೂರು ಸಣ್ಣ’ ,’ ಕುಂಬಳ ಸಾಲೆ’ ಗಿರಿ ಸಾಲೆ’ ಮತ್ತು ‘ಮಧು ಸಾಲೆ ’ ಎಂಬ ಭತ್ತದ ತಳಿಗಳಿಗೆ ದೆಹಲಿಯ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ ( ಪಿಪಿವಿ ಮತ್ತು ಎಫ್ ಆರ್) ‘ರೈತರ ತಳಿ’ ಎಂದು ನೋಂದಣಿ ಮಾಡಿ ಹಕ್ಕು ನೀಡಿದೆ.

ಕೆಂಪು ಅಕ್ಕಿಗೆ ಗ್ರಾಹಕರಿಂದ ವಿಶೇಷ ಬೇಡಿಕೆ ಇದ್ದು, ಆಂಜನೇಯ ಅವರು ಈ ತಳಿಗಳನ್ನು ಆಸಕ್ತರಿಗೆ ಬೆಳೆಸಿ ನೋಡಲು ನೀಡುತ್ತಿದ್ದಾರೆ ಎಂದು ಸಹಜ ಸಮೃದ್ಧ ನಿರ್ದೇಶಕ ಕೃಷ್ಣಪ್ರಸಾದ್ ತಿಳಿಸಿದ್ದಾರೆ.