ವಿಜಯವಾಣಿ ಸುದ್ದಿಜಾಲ ಧಾರವಾಡ
ನಮ್ಮ ಪರಂಪರೆಯನ್ನ ಉಳಿಸಿ ಬೆಳೆಸುವ ಪ್ರಯತ್ನವನ್ನು ಮಾಡೋಣ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಎಸ್ .ಎಸ್ ಅಂಗಡಿ ಹೇಳಿದರು.
ನಗರದ ಕೆ.ಇ. ಬೋರ್ಡ್ನ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಪ್ರದೇಶದಲ್ಲಿ ಇರುವ ಸ್ಮಾರಕಗಳ ಬಗ್ಗೆ ತಿಳಿದುಕೊಳ್ಳುವ ಮತ್ತು ಅವುಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ಹೊಂದಬೇಕು. ನಮ್ಮ ಪರಂಪರೆ ಉಳಿಸಿ ಬೆಳೆಸುವ ಪ್ರಯತ್ನವನ್ನು ಮಾಡಿದಾಗ ಮಾತ್ರ ಅವು ಮುಂದಿನ ಪೀಳಿಗೆಗೆ ದಾರಿದೀಪವಾಗುತ್ತವೆ ಎಂದರು.
ಧಾರವಾಡವು ಐತಿಹಾಸಿಕ ಮಹತ್ವದ ಸ್ಥಾನವನ್ನು ಪಡೆದುಕೊಂಡಿದ್ದು, ಇಲ್ಲಿ ದೊರೆಯುವಂತಹ ಶಾಸನಗಳು, ದೇವಾಲಯಗಳು, ಶಿಲ್ಪಕೋಟೆಗಳು, ಬಾವಿಗಳ ಪರಿಚಯ ಇರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಎ. ಸಿದ್ಧಾಂತಿ ಮಾತನಾಡಿ, ಸತ್ಯ ಸಂಗತಿಗಳನ್ನು ಸಾಕ್ಷಿ ಆಧಾರಗಳ ಮೂಲಕ ಸಾಬೀತು ಪಡಿಸುವುದೇ ನಿಜವಾದ ಇತಿಹಾಸ ಎಂದರು.
ಕೆ. ಚೆನ್ನಮ್ಮ ಹೂಗಾರ್ ಪ್ರಾರ್ಥಿಸಿದರು. ಡಾ. ಸುರೇಶ್ ಹಾನಗಲ್ ಸ್ವಾಗತಿಸಿದರು. ಈಶ್ವರರಾವ್ ಪರಿಚಯಿಸಿದರು. ಕೆ.ಎಸ್. ಮಡಿವಾಳರ ವಂದಿಸಿದರು.