ವಿರಾಜಪೇಟೆ ತಾಲೂಕು ಮೈದಾನದಲ್ಲಿ ನಡೆದ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಶಾಸಕ ಎ.ಎಸ್.ಪೊನ್ನಣ್ಣ ನೆರವೇರಿಸಿದರು. ದೇಚಮ್ಮ, ರಾಮಚಂದ್ರ, ಚಂದ್ರಕುಮಾರ್, ಮೋಹನ್ ಇದ್ದರು. 
ಜಿಲ್ಲೆ

ಸಂವಿಧಾನದ ಆಶಯ ಉಳಿಸಿ, ಗೌರವಿಸಿ

ವಿರಾಜಪೇಟೆ: ನಮ್ಮ ಕರ್ತವ್ಯ, ಜವಾಬ್ದಾರಿ ಅರಿತುಕೊಳ್ಳುವ ಮೂಲಕ ಪ್ರತಿಯೊಬ್ಬರೂ ಸಾಮಾಜಿಕ ಬದ್ಧತೆಯಿಂದ ಭಾರತವನ್ನು ಪ್ರಗತಿಯಲ್ಲಿ ಮುನ್ನಡೆಸುವ ಬದ್ಧತೆ ಇರಬೇಕು ಎಂದು ವಿರಾಜಪೇಟೆ ತಾಲೂಕು ತಹಸೀಲ್ದಾರ್ ಎಚ್.ಎನ್.ರಾಮಚಂದ್ರ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತ ವಿರಾಜಪೇಟೆ ವತಿಯಿಂದ ತಾಲೂಕು ಮೈದಾನದಲ್ಲಿ ಅಯೋಜಿಸಿದ್ದ 76ನೇ ಗಣರಾಜ್ಯೋತ್ಸವದ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಸಂದೇಶ ನೀಡಿದರು.

ಸಂವಿಧಾನವನ್ನು ಭಾರತ ದೇಶ ಹೊಂದಿರುವುದು ಹೆಮ್ಮೆಯಾಗಿದೆ. ದೇಶದ ಸಂವಿಧಾನ ಅತ್ಯಂತ ಬೃಹತ್ ಸಂವಿಧಾನವಾಗಿದ್ದು ಜನತೆಯ ಆಶಯಕ್ಕೆ ತಕ್ಕಂತಿರುವ ಪವಿತ್ರ ಸಂವಿಧಾನವಾಗಿ ವಿಶ್ವದಲ್ಲಿಯೇ ಇದು ವಿಶಿಷ್ಟ ಸಂವಿಧಾನವಾಗಿ ಇಂದು ಗಮನ ಸೆಳೆದಿದೆ ಎಂದು ರಾಮಚಂದ್ರ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸ ಎ.ಎಸ್.ಪೊನ್ನಣ್ಣ ಮಾತನಾಡಿ, 1950ರಲ್ಲಿ ಜಾರಿಯಾದ ಈ ಸಂವಿಧಾನವು ಬ್ರಿಟಿಷರ 1935ರ ಕಾಯ್ದೆಯಿಂದ ಭಾರತ ಹೊರಬರಲು ಸಾಧ್ಯವಾಯಿತು. ಜತೆಗೆ ಬೇರೆಯವರ ಸಂವಿಧಾನವನ್ನು ಮತ್ತೊಬ್ಬರು ಪುನರಾವರ್ತಿಸುವುದು ಸಾಮಾನ್ಯ. ಆದರೆ ಭಾರತ ತನ್ನದೇ ಅದ ಸಂವಿಧಾವನ್ನು ಹೊಂದಿರುವುದು ವಿಶಿಷ್ಟವಾಗಿದೆ. ಬ್ರಿಟಿಷರ ಕಾಯ್ದೆಯಲ್ಲಿ ಮೂಲಭೂತ ಹಕ್ಕುಗಳನ್ನು ನಮಗೆ ನೀಡಿರಲಿಲ್ಲ. ಆದರೆ ನಮ್ಮ ಸಂವಿಧಾನ ಅದನ್ನು ಜನರಿಗೆ ಒದಗಿಸಿದೆ. ಸಂವಿಧಾನದ ಆಶಯ ಅರಿತವರು ಸಂವಿಧಾನವನ್ನು ವಿರೋಧಿಸುವುದಿಲ್ಲ. ಆದರೆ ಇದನ್ನು ವಿರೋಧಿಸುವವರು ಸಂವಿಧಾನ ವಿರೋಧಿಗಳಾಗಿದ್ದಾರೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ದೇಚಮ್ಮ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ಫಸಿಹಾ ತಬ್ಸುಂ, ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಶ್ ಪದ್ಮನಾಭ, ವಿರಾಜಪೇಟೆ ತಾಲೂಕು ಬಗರ್‌ಹುಕುಂ ಸಮೀಕರಣ ಸಮಿತಿ ಅಧ್ಯಕ್ಷ ಆರ್.ಕೆ.ಸಲಾಂ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವಿರಾಜಪೇಟೆ ತಾಲೂಕು ಅಧ್ಯಕ್ಷ ಪಿ.ವಿ.ಜಾನ್ಸನ್, ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಡಿವೈ ಎಸ್‌ಪಿ ಮೋಹನ್‌ಕುಮಾರ್ ಗ್ರಾಮಾಂತರ ಠಾಣಧಿಕಾರಿ ಲತಾ ನಗರ ಠಾಣಧಿಕಾರಿ ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆರಂಭದಲ್ಲಿ ಶಾಲಾ ಮಕ್ಕಳು ವಿರಾಜಪೇಟೆ ಮುಖ್ಯರಸ್ತೆಯಲ್ಲಿ ಮೆರವಣೆಗೆ ನಡೆಸಿದರು. ನಗರ ಠಾಣಾಧಿಕಾರಿ ನೇತ್ರತ್ವದಲ್ಲಿ ಪೊಲೀಸ್ ಕವಾಯತು ನಡೆಯಿತು. ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು.