ಜಮಖಂಡಿ ನಗರದ ಕನಕ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕ ಉದ್ಘಾಟನೆ ಕಾರ್ಯಕ್ರಮವನ್ನು ಶಾಸಕ, ನಾಡೋಜ ಜಗದೀಶ ಗುಡಗುಂಟಿ ಉದ್ಘಾಟಿಸಿದರು. ಜಾನಪದ ಸಾಹಿತಿ ಡಾ. ಯಶವಂತ ಕೊಕ್ಕನವರ, ರಬಕವಿ ಬನಹಟ್ಟಿ ಕಜಾಪ ಅಧ್ಯಕ್ಷ ಶ್ರೀಕಾಂತ ಕೆಂದೂಳಿ, ಹಿರಿಯ ಜಾನಪದ ಕಲಾವಿದ, ಚಲನಚಿತ್ರ ನಟ ಗುರುರಾಜ ಹೊಸಕೋಟಿ ಇತರರಿದ್ದರು. 
ಜಿಲ್ಲೆ

ಜನಪದ ಕಲೆ ಉಳಿಸಿ ಬೆಳೆಸಿ

Vijayapura - Desk - Gurappa Lokuri

ಜಮಖಂಡಿ: ಮನೆ ಮಾತಾಗಿರುವ ಜನಪದ ಕಲೆ ಸಾಹಿತ್ಯ ಉಳಿಸಿ ಬೆಳೆಸಬೇಕಾಗಿದೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.

ನಗರದ ಕನಕ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪುರಾತನ ಕಾಲದ ಜಾನಪದ ಸಾಹಿತ್ಯಕ್ಕೆ ಒಂದು ಇತಿಹಾಸವಿದೆ. ಅದನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕಿದೆ ಎಂದರು.
ಹಿರಿಯ ಜಾನಪದ ಕಲಾವಿದ, ಚಲನಚಿತ್ರ ನಟ ಗುರುರಾಜ ಹೊಸಕೋಟಿ ಮಾತನಾಡಿ, ಜನಪದ ಕಲೆ ನನ್ನ ಬದುಕಿನ ಉಸಿರನ್ನು ಹೆಚ್ಚಿಸಿದೆ. ಕನ್ನಡ ಜಾನಪದ ಸಾಹಿತ್ಯ ಕಲಾವಿದರ ಜೀವಾಳವಾಗಿದೆ. ಸಂಸಾರ ಹಾಗೂ ಸಮಾಜದ ಓರೆಕೋರೆಗಳನ್ನು ಹಾಡು ಮತ್ತು ಕಲೆಯ ಮೂಲಕ ಜಾಗೃತಿ ಮೂಡಿಸುವ ಅಲ್ಪ ಕಾರ್ಯ ಮಾಡಲಾಗಿದೆ ಎಂದರು.

ಜಾನಪದ ಸಾಹಿತಿ ಡಾ. ಯಶವಂತ ಕೊಕ್ಕನವರ ಮಾತನಾಡಿ, ಎಲ್ಲ ಅಂಶಗಳನ್ನೂಳಗೊಂಡ ಕಲೆ ಜಾನಪದವಾಗುತ್ತದೆ. ಜಾನಪದ ಎಂದಿಗೂ ಅವನತಿ ಹೊಂದುವುದಿಲ್ಲ ಎಂದರು.

ಕಜಾಪ ಜಿಲ್ಲಾಧ್ಯಕ್ಷ ಡಿ.ಎಂ. ಸಾಹುಕಾರ ಮಾತನಾಡಿ, ಜಾನಪದ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವ ಜತೆಗೆ ಜಾಗೃತಿ ಅರಿವು ಮೂಡಿಸಬೇಕಾಗಿದೆ. ಮುಂದಿನ ತಲೆಮಾರಿಗೆ ಜಾನಪದ ಸಾಹಿತ್ಯ ಕಲೆ ಪರಿಚಯಿಸುವ ಕಾರ್ಯವಾಗಬೇಕಾಗಿದೆ. ಎಲೆಮರೆಯ ಕಾಯಿಯಂತಿರುವ ಕಲಾವಿದರನ್ನು ಬೆಳಕಿಗೆ ತರಬೇಕಾಗಿದೆ ಎಂದರು.

ಹುಲ್ಯಾಳ ಗುರುದೇವ ಆಶ್ರಮದ ಹರ್ಷಾನಂದ ಶ್ರೀಗಳು ಮಾತನಾಡಿ, ಜಾನಪದ ಸಾಹಿತ್ಯ ಕಲೆ ಕೇವಲ ಹಾಡಿನ ರೂಪದಲ್ಲಿ ಉಳಿಸಲು ಸಾಧ್ಯವಿಲ್ಲ. ಕಾರ್ಯರೂಪಕ್ಕೆ ಬರಬೇಕು ಎಂದರು.

ಜಾನಪದ ಕಲಾವಿದ ಶ್ರೀಶೈಲ ಜೊಂಗನ್ನವರ ಅವರನ್ನು ಸನ್ಮಾನಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ರಬಕವಿ ಬನಹಟ್ಟಿ ಕಜಾಪ ಅಧ್ಯಕ್ಷ ಶ್ರೀಕಾಂತ ಕೆಂದೂಳಿ ಜಾನಪದ ಹಾಡು ಹಾಡಿ ಕಲೆಯ ಮಹತ್ವ ತಿಳಿಸಿದರು. ಸಲೀಂ ಹನಗಂಡಿ ಡೋಲಕ್ ಸಾಥ್ ನೀಡಿದರು.

ವಿವಿಧ ಜಾನಪದ ಕಲಾವಿದರಿಂದ ಶೋಭಾನ ಪದ, ಜಾನಪದ ಹಾಡುಗಳು ನಡೆದವು.
ಹಿರಿಯ ನ್ಯಾಯವಾದಿ ತಾತಾಸಾಹೇಬ ಬಾಂಗಿ, ನಿವೃತ್ತ ನೌಕರ ಸಂಘದ ಅಧ್ಯಕ್ಷ ಎಚ್.ಎಂ. ಶೆಟ್ಟರ, ಕಲಾವಿದರ ಸಂಘದ ಅಧ್ಯಕ್ಷ ಸಿದ್ದು ಉಪ್ಪಲದಿನ್ನಿ, ಸನದಿ ಇಂಟರ್‌ನ್ಯಾಷನಲ್ ಶಾಲೆ ಸಂಸ್ಥಾಪಕ ನಿರ್ದೇಶಕ ನಾಗಪ್ಪ ಸನದಿ, ಕಾನಿಪ ಸಂಘದ ತಾಲೂಕು ಅಧ್ಯಕ್ಷ ಅಪ್ಪು ಪೋತರಾಜ, ಆರ್.ಬಿ. ನಭಿವಾಲೆ ಇತರರಿದ್ದರು.

ಪೂಜಾ ಭಜಂತ್ರಿ, ಶಂಕರ ಕೋಲಾರ, ಮಲ್ಲು ನಾವಿ ಪ್ರಾರ್ಥಿಸಿದರು. ಬಸವರಾಜ ಗಿರಗಾಂವಿ ಸ್ವಾಗತಿಸಿದರು. ತಾಲೂಕು ಅಧ್ಯಕ್ಷ ಭ.ನಿಂ. ಅಸ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು. ಪರಶುರಾಮ ಗುದಗಿ ವಂದಿಸಿದರು.