ಮೈಸೂರು: ದುಸ್ಥಿತಿಯಲ್ಲಿರುವ ಪಾರಂಪರಿಕ ಕಟ್ಟಡ ದೇವರಾಜ ಮಾರುಕಟ್ಟೆಯನ್ನು ಸುಲಭವಾಗಿ ಸಂರಕ್ಷಿಸಲು ಸಾಧ್ಯವಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್, ಇಂಟೆಕ್ ಬೆಂಗಳೂರು ಘಟಕ ವತಿಯಿಂದ ನಗರದ ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್ ಸಭಾಂಗಣದಲ್ಲಿ ಶನಿವಾರ ‘ಮಾರುಕಟ್ಟೆಗಳು ಜೀವಂತ ಪರಂಪರೆ: ಸಂರಕ್ಷಣೆ ಮತ್ತು ಪುನರುಜ್ಜೀವನ’ ವಿಷಯದ ಕುರಿತು ಹಮ್ಮಿಕೊಂಡಿದ್ದ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ತಜ್ಞರು ದೇವರಾಜ ಮಾರುಕಟ್ಟೆಯನ್ನು ಸುಲಭವಾಗಿ ಹೇಗೆ ಸಂರಕ್ಷಣೆ ಮಾಡಬಹುದು ಎಂಬ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆನ್‌ಲೈನ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂ ಡು ದೇವರಾಜ ಮಾರುಕಟ್ಟೆಯನ್ನು ಸಂರಕ್ಷಿಸುವ ಅವಶ್ಯಕತೆಯನ್ನು ಪ್ರತಿಪಾದಿಸಿದರು. ನಗರದ ದೇವರಾಜ ಮಾರುಕಟ್ಟೆ ಹಾಗೂ ಇತರ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯು ನಗರದ ಅಸ್ಮಿತೆಯ ಅವಿಭಾಜ್ಯವಾಗಿದೆ. ಈ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ದೇವರಾಜ ಮಾರುಕಟ್ಟೆ ಕುರಿತು ಅಧ್ಯಯನ ನಡೆಸಿರುವ ಬೆಂಗಳೂರಿನ ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಸ್ಟ್ರಕ್ಚರಲ್ ಇಂಜಿನಿಯರ್ ಡಾ.ಎಸ್.ರಘುನಾಥ್ ಮಾತನಾಡಿ, ದೇವರಾಜ ಮಾರುಕಟ್ಟೆಯಲ್ಲಿ ಯಾವುದೇ ಪ್ರಮುಖ ರಚನಾತ್ಮಕ ಸಮಸ್ಯೆಗಳಿಲ್ಲ ಮತ್ತು ಅದನ್ನು ಸುಲಭವಾಗಿ ಸಂರಕ್ಷಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ಮಾಜಿ ರಾಷ್ಟ್ರಪತಿ ಡಾ.ಎಸ್. ರಾಧಾಕೃಷ್ಣನ್ ಅವರ ನಿವಾಸ ಮತ್ತು ಬೆಂಗಳೂರಿನ ಆಕ್ಟ್ರಾಯ್ ಪೋಸ್ಟ್ ಸೇರಿದಂತೆ ‘ಗ್ರೇಡ್-4’ನೇ ಹಂತದ ಹಾನಿಗೊಳಗಾದ ಕಟ್ಟಡಗಳನ್ನು ಪುನಃಸ್ಥಾಪಿಸಲು ಸಹಾಯ ಮಾಡಿದ ಉದಾಹರಣೆಗಳನ್ನು ಡಾ. ರಘುನಾಥ್ ಹಂಚಿಕೊಂಡರು. ದೇವರಾಜ ಮಾರುಕಟ್ಟೆಯು ಗ್ರೇಡ್-2 ಮಟ್ಟದ ಹಾನಿಯನ್ನು ಹೊಂದಿದೆ. ಹಾಗಾಗಿ ಮಾರುಕಟ್ಟೆಯನ್ನು ಸುಲಭವಾಗಿ ಸಂರಕ್ಷಣೆ ಮಾಡಲು ಸಾಧ್ಯವಿದೆ ಎಂದರು.
ಸ್ಟ್ರಕ್ಚರಲ್ ಇಂಜಿನಿಯರ್‌ಆಗಿ 4 ದಶಕಗಳ ಅನುಭವ ಹೊಂದಿರುವ ಪುಣೆಯ ರಂಜಿತ್ ಪಾಟೀಲ್ ಮಾತನಾಡಿ, ದೇವರಾಜ ಮಾರುಕಟ್ಟೆಯ ಸಂರಕ್ಷಣಾ ಕಾರ್ಯವನ್ನು ಕೇವಲ 3 ತಿಂಗಳಲ್ಲಿ ಕೈಗೊಳ್ಳಬಹುದು ವಿಶ್ವಾಸ ವ್ಯಕ್ತಪಡಿಸಿದರು. ಮಾರುಕಟ್ಟೆಯನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವ ವೆಚ್ಚದ ಕೇವಲ ಶೇ.15 ರಿಂದ 20 ರಷ್ಟು ಅನುದಾನದಲ್ಲಿ ಸಂರಕ್ಷಣಾ ಕಾರ್ಯ ಕೈಗೊಳ್ಳಬಹುದು. ಮಾನಸಗಂಗೋತ್ರಿಯ ಜಯಲಕ್ಷ್ಮೀ ವಿಲಾಸ ಅರಮನೆಯನ್ನು ಸಿಎಸ್‌ಆರ್ ನಿಧಿ ಬಳಸಿಕೊಂಡು ಸಂರಕ್ಷಣೆ ಮಾಡಲಾಗುತ್ತಿದ್ದು, ಇಂಥದೊಂದು ಪ್ರಯತ್ನ ದೇವರಾಜ ಮಾರುಕಟ್ಟೆ ಉಳಿಸಲು ನಡೆಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ದ್ರೋಣ ಸಂಸ್ಥೆಯ ಸ್ಥಾಪಕ ನಿರ್ದೇಶಕಿ ಡಾ. ಶಿಖಾ ಜೈನ್ ಆನ್‌ಲೈನ್ ಮೂಲಕ ಮಾತನಾಡಿ, ಐತಿಹಾಸಿಕ ನಗರವಾದ ಜೈಪುರದಲ್ಲಿ ಹನ್ನೆರಡು ಸಾಂಪ್ರದಾಯಿಕ ಮಾರುಕಟ್ಟೆಗಳನ್ನು ಸರ್ಕಾರ ಹಾಗೂ ಜನರ ಸಹಕಾರೊಂದಿಗೆ ಸಂರಕ್ಷಣೆ ಮಾಡಲಾಗಿದ್ದು, ಈ ಪಾರಂಪರಿಕ ಕಟ್ಟಡಗಳು ಇದೀಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿರುವುದು ಮಾತ್ರವಲ್ಲದೆ ನಗರದ ಪ್ರಮುಖ ಆರ್ಥಿಕ ವಹಿವಾಟಿನ ಕೇಂದ್ರವಾಗಿ ರೂಪುಗೊಂಡಿದೆ ಎಂದು ಹೇಳಿದರು.
ನಿವೃತ್ತ ಸಂರಕ್ಷಣಾ ವಾಸ್ತುಶಿಲ್ಪಿ ಪ್ರೊ. ಸಂಘಮಿತ್ರ ಬಸು ಮಾತನಾಡಿ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಸರ್ಕಾರ ಹಾಗೂ ಜನರ ಸಹಕಾರದ ಅವಶ್ಯಕತೆ ಇದೆ. ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಸಂದರ್ಭ ಅದರ ಇತಿಹಾಸ, ಸಂರಕ್ಷಣೆಯ ನಂತರ ಜನರಿಗೆ ಆಗುವ ಪ್ರಯೋಜನವನ್ನು ತಿಳಿಸಿಕೊಡುವ ಕಾರ್ಯ ಆಗಬೇಕು ಎಂದರು.
ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯ ಡಾ.ಎನ್.ಎಸ್. ರಂಗರಾಜು ಮಾತನಾಡಿ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯ ಕುರಿತು ಹಲವರಿಗೆ ಜ್ಞಾನದ ಕೊರತೆಯಿಂದಾಗಿ ಪ್ರಸ್ತುತ ಪಾರಂಪರಿಕ ಕಟ್ಟಡಗಳು ದುಸ್ಥಿತಿಗೆ ತಲುಪುತ್ತಿವೆ. ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಎಂದರೆ ಹಳೆಯ ಕಟ್ಟಡವನ್ನು ಕೆಡವಿ ಹೊಸದಾಗಿ ನಿರ್ಮಿಸುವುದು ಎಂದು ಕೆಲವರು ಅಂದುಕೊಂಡಿದ್ದಾರೆ. ಸಂರಕ್ಷಣೆ ಎಂದರೆ ಒಡೆಯುವುದು, ಕಟ್ಟುವುದು ಅಲ್ಲ. ಕಟ್ಟಡವನ್ನು ಯಾವ ರೀತಿಯಲ್ಲಿ ನಿರ್ಮಾಣ ಮಾಡಲಾಯಿತೋ ಅದೇ ಮಾದರಿಯಲ್ಲಿ ಸಂರಕ್ಷಣೆ ಮಾಡಬೇಕು ಎಂದರು.
ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯ ವಿಚಾರದಲ್ಲಿ ಯುವಜನರು ಹೆಚ್ಚಿನ ಆಸಕ್ತಿ ತೋರಬೇಕು. ಯುವಜನರು ಮುಂದೆ ಬಂದು ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಬಹುತೇಕ ಸಿವಿಲ್ ಇಂಜಿನಿಯರ್‌ಗಳಿಗೆ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಹೇಗೆ ಮಾಡಬೇಕು ಎಂಬ ಕುರಿತು ಮಾಹಿತಿ ಇಲ್ಲ. ಆಸಕ್ತಿ ಇರುವ ಸಿವಿಲ್ ಇಂಜಿನಿಯರ್‌ಗಳು ಹಾಗೂ ವಿದ್ಯಾರ್ಥಿಗಳಿಗೆ ಈ ಕುರಿತು ಮಾಹಿತಿ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದರು.