ಜಿಲ್ಲೆ

17ಕ್ಕೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ

ಉಡುಪಿ: ಯಕ್ಷಗಾನ ಕಲಾರಂಗ ಆಶ್ರಯದಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆಯ ಸಹಯೋಗದಲ್ಲಿ 2024ನೇ ಸಾಲಿನ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭ ನ.17ರಂದು ಮಧ್ಯಾಹ್ನ 3 ಗಂಟೆಗೆ ಶಾರದಾ ಮಂಟಪ ರಸ್ತೆಯಲ್ಲಿರುವ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತಿರ್ಥರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಆರ್​.ಎಲ್​. ಭಟ್​ ವಾರಿಜಾಕ್ಷಿ ಆರ್​. ಭಟ್​ ಗೌರವಾರ್ಥ ನಿರ್ಮಿಸಿದ ಪ್ರಸಾದನ ಕೊಠಡಿಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್​ ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ಯಶ್ಪಾಲ್​ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಯಕ್ಷಗಾನ ಕಲಾವಿದರ ಮಕ್ಕಳಿಗೆ ನೀಡುವ ಯಕ್ಷ ವಿದ್ಯಾಪೋಷಕ್​ 6.42 ಲಕ್ಷ ರೂ. ಮೊತ್ತದ ಸಹಾಯಧನವನ್ನು 75 ವಿದ್ಯಾರ್ಥಿಗಳಿಗೆ ವಿತರಿಸಲಿದ್ದಾರೆ ಎಂದರು.

ಕಾರ್ಯದರ್ಶಿ ಮುರಲಿ ಕಡೆಕಾರ್​ ಮಾತನಾಡಿ, ಕಾರ್ಯಕ್ರಮದಲ್ಲಿ 23 ಮಂದಿ ಹಿರಿಯ ಕಲಾವಿದರಿಗೆ ತಲಾ 20 ಸಾವಿರ ನಗದು ಪುರಸ್ಕಾರ ಪ್ರಶಸ್ತಿ, ತೆಕ್ಕಟ್ಟೆಯ ಕೊಮೆ ಯಶಸ್ವಿ ಕಲಾವೃಂದ ಸಂಸ್ಥೆಗೆ 1 ಲಕ್ಷ ರೂ. ಮೊತ್ತದ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ ಹಾಗೂ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಕೆ. ಗಣೇಶ್​ ರಾವ್​ ಅವರಿಗೆ ಯಕ್ಷಚೇತನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಾಸುದೇವ ಸಾಮಗರ 30 ಪ್ರಸಂಗಗಳ 'ಯಕ್ಷ ರಸಾಯನ' ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು. ಇತ್ತೀಚೆಗೆ ನಿಧನ ಹೊಂದಿದ ಮೂರು ಮಂದಿ ಕಲಾವಿದರ ಕುಟುಂಬಿಕರಿಗೆ ಸಾಂತ್ವನ ನಿಧಿಯನ್ನು ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕಲಾರಂಗದ ಉಪಾಧ್ಯಕ್ಷ ಎಸ್​.ವಿ. ಭಟ್​, ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ, ಕೋಶಾಧಿಕಾರಿ ಪ್ರೊ. ಸದಾಶಿವ ರಾವ್​, ಸದಸ್ಯರಾದ ಭುವನಪ್ರಸಾದ್​ ಹೆಗ್ಡೆ, ನಿರಂಜನ್​ ಭಟ್​ ಉಪಸ್ಥಿತರಿದ್ದರು.